ಎ. 19ರಂದು ನೂತನ ಖಾಝಿಯವರ ಅಧಿಕಾರ ಸ್ವೀಕಾರ
ಮೂಡಿಗೆರೆ, ಎ.16: ತಾಲೂಕು ಸಂಯುಕ್ತ ಜಮಾಅತ್ ಒಕ್ಕೂಟದಿಂದ ನೇಮಕಗೊಂಡಿರುವ ಮೋಗ್ರಾಲ್ ಕಾಸರಗೋಡಿನ ಶೈಖುನಾ ಅಲ್‌ಹಾಜ್ ಎಂ.ಎಂ.ಖಾಸಿಂ ಮುಸ್ಲಿಯಾರ್‌ರವರು ಮೂಡಿಗೆರೆ ಖಾಝಿಯಾಗಿ ಎ.19ರಂದು ರೈತ ಭವನದಲ್ಲಿ ನಡೆಯಲಿರುವ ಅದ್ದೂರಿ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಖಾಝಿ ಸ್ವಾಗತ ಸಮಿತಿ ಅಧ್ಯಕ್ಷ ಅಕ್ರಂ ಹಾಜಿ ತಿಳಿಸಿದರು.
ಅವರು ಶನಿವಾರ ಇಲ್ಲಿನ ಲ್ಯಾಂಪ್ಸ್ ಸೊಸೈಟಿ ಕಟ್ಟಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಖಾಝಿಯವರಾಗಿ ಶೈಖುನಾ ಅಝ್‌ಹರಿ ತಂಙಳ್‌ರವರು ಖಾಝಿಯಾಗಿದ್ದರು. ಅವರು ಕಳೆದ 4 ತಿಂಗಳ ಹಿಂದೆ ನಿಧನ ಹೊಂದಿದ್ದರಿಂದ ಈ ಸ್ಥಾನ ತೆರವಾಗಿತ್ತು. ಖಾಝಿಯವರು ಸಮುದಾಯದ ಜನರಿಗೆ ಧಾರ್ಮಿಕ ನ್ಯಾಯಾಧೀಶರಾಗಿರುತ್ತಾರೆ ಎಂದು ಹೇಳಿದರು.
ಎ. 19ರಂದು ಬೆಳಗ್ಗೆ 10:30ಕ್ಕೆ ಖಾಝಿಯಾಗಿ ಅಧಿಕಾರ ಸ್ವೀಕರಿಸುವ ಸಮಾರಂಭದಲ್ಲಿ ದಕ್ಷಿಣ ಕನ್ನಡದ ಜಿಲ್ಲಾ ಖಾಝಿ ಶೈಖುನಾ ತ್ವಾಕ ಅಹಮ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಸ್ತ ಮುಶಾವರ ಸದಸ್ಯ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ದುಆ ನೆರವೇರಿಸಲಿದ್ದಾರೆ. ಬದ್ರಿಯಾ ಮಸೀದಿ ಖತೀಬ್ ಹಸೈನಾರ್ ಫೈಝಿ ಖಿರಾಅತ್ ಪಠಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪಿನಂಗೋಡು ಅಬೂಬಕರ್ ಮುಸ್ಲಿಯಾರ್, ಪಿ.ಕೆ.ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಕೊಪ್ಪ ಖಾಝಿ ಅಬೂಬಕರ್ ಮುಸ್ಲಿಯಾರ್, ಯು.ಕೆ.ಅಬ್ದುಲ್ ಅಝೀಝ್ ದಾರಿಮಿ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಉಸ್ತುವಾರಿ ಖಾಝಿ ಎನ್‌ಪಿಎಂ ಝೈನುಲ್ ಆಬಿದೀನ್ ತಂಙಳ್ ಕೇರಳ, ರಾಜ್ಯ ವಕ್ಫ್ ಸಲಹಾ ಸದಸ್ಯ ಯೆನಪೊಯ ಮುಹಮ್ಮದ್ ಕುಂಞಿ, ದಾರುನ್ನೂರು ಎಸ್‌ಕೆಐಎಂವಿಬಿ ಮುಖಂಡ ಕೆ.ಎಸ್.ಇಸ್ಲಾಯೀಲ್ ಕಲ್ಲಡ್ಕ, ಮುಖಂಡ ಗೋಳ್ತಮಜಲ್ ಅಬೂಬಕರ್ ಹಾಜಿ, ಬಿ.ಹುಸೈನ್, ಇಸಾಕ್ ಹಾಜಿ, ಜಿಲ್ಲಾ ಬ್ಯಾರಿ ಒಕ್ಕೂಟಡದ ಅಧ್ಯಕ್ಷ ಕೆ.ಮುಹಮ್ಮದ್, ಮತ್ತಿತರೆ ಸುಪ್ರಸಿದ್ಧ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.
ಗೋಷ್ಠಿಯಲ್ಲಿ ಸಂಯುಕ್ತ ಜಮಾಅತ್ ಅಧ್ಯಕ್ಷ ಚಕ್ಕಮಕ್ಕಿ ಅಬ್ಬಾಸ್ ಹಾಜಿ, ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಎ.ಸಿ.ಅಯ್ಯೂಬ್ ಹಾಜಿ, ಬಿಳಗುಳ ತಮೀಝ್ ಉಪಸ್ಥಿತರಿದ್ದರು.







