‘ಅಂಬೇಡ್ಕರ್ ವಿಚಾರಧಾರೆ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಲಿ’

ಚಿಕ್ಕಮಗಳೂರು, ಎ.16: ಡಾ. ಅಂಬೇಡ್ಕರ್ ಅವರು ಒಬ್ಬ ಉತ್ತಮ ವಿಚಾರವಾದಿ. ಸಮಾಜದ ಹಲವು ಮೂಢ ನಂಬಿಕೆಗಳ ವಿರುದ್ಧ, ಮೇಲು, ಕೀಳು ಪದ್ಧತಿಯ ವಿರುದ್ಧ ಹೋರಾಟ ನಡೆಸಿದ ಮೇಧಾವಿ ಅವರು ಎಂದು ದಿನ್ಮಹ ಕಲಾಸಂಘದ ಅಧ್ಯಕ್ಷ ಜಿ.ಸತೀಶ್ ಹೇಳಿದರು.
ಅವರು ಚಿಕ್ಕಮಗಳೂರಿನ ಸ್ಕೌಟ್ಸ್ ಭವನದಲ್ಲಿ ದಿನ್ಮಹ ಕಲಾ ಸಂಘದ ಬೇಸಿಗೆ ಶಿಬಿರದ ಕ್ಯಾಂಪಸ್‌ನಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇಂದು ದೇಶಾದ್ಯಂತ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ. ಭಾರತೀಯರು ಕಾನೂನು ಚೌಕಟ್ಟಿನೊಳಗೆ ಉತ್ತಮ ರೀತಿಯಲ್ಲಿ ಬದುಕಲು ಸಂವಿಧಾನವನ್ನು ರಚಿಸಿದ ಮಹಾನ್ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂದು ವಿದ್ಯಾರ್ಥಿಗಳು ಅಂಬೇಡ್ಕರ್‌ರ ಜೀವನ ಶೈಲಿ, ನಡೆ, ನುಡಿಗಳನ್ನು ಅಳವಡಿಸಿಕೊಂಡು ಬದುಕಬೇಕು ಎಂದು ಹೇಳಿದರು.
ಆರೋಗ್ಯಪೂರ್ಣವಾದ ಶಿಬಿರಗಳು ಪ್ರಸ್ತುತ ವಿದ್ಯಾರ್ಥಿಗಳಿಗೆ ಅಗತ್ಯವಿದೆ. ವರ್ಷಪೂರ್ತಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಹೊರಗಿನ ಪ್ರಪಂಚದಲ್ಲಿ ಬದುಕಲು ತಿಳಿದುಕೊಳ್ಳಬೇಕಾದ ಸಾಕಷ್ಟು ವಿಚಾರಗಳು ಇವೆ. ಇಂತಹ ಶಿಬಿರಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರಿಂದ ವಿಧ್ಯಾರ್ಥಿಗಳು ಹಲವು ವಿಚಾರಗಳನ್ನು ತಿಳಿದುಕೊಡಂತಾಗುತ್ತದೆ ಎಂದು ನುಡಿದರು. ಶಿಬಿರದಲ್ಲಿ ಸುಮಾರು 11 ರಿಂದ 16 ವಯಸ್ಸಿನೊಳಗಿನ ವಿದ್ಯಾರ್ಥಿಗಳಿಗೆ ಹಲವು ವಿಷಯಗಳ ಕುರಿತ ತರಗತಿಗಳನ್ನು ಮತ್ತು ತರಬೇತಿ ನೀಡಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಧ್ಯಾನ, ಭಜನೆ, ಸಂಸ್ಕೃತ ಶ್ಲೋಕಗಳ ಪಠಣ, ಮುದ್ರೆ ಯೋಗ, ಚಿತ್ರ ಕಲೆ, ಕಿರು ಚಿತ್ರ ತಯಾರಿಕೆ, ನಿರ್ದೇಶನ ಮತ್ತು ಅಭಿನಯದ ತರಬೇತಿ, ನಾಟಕ ಅಭಿನಯ, ಛಾಯಾಚಿತ್ರ ತರಬೇತಿ, ವೃದ್ಧಾಶ್ರಮ ಭೇಟಿ ಹೀಗೆ ಹತ್ತು ಹಲವು ವಿಷಯಗಳ ಕುರಿತ ತರಭೇತಿಯನ್ನು ನುರಿತ ಶಿಕ್ಷಕರಿಂದ ನೀಡಲಾಗುತ್ತಿದೆ ಎಂದರು. ನ್ಯಾಯಾಧೀಶರಾದ ಹಿರೇಮಠ್ ಮಾತನಾಡಿ ದರು. ಕಾರ್ಯಕ್ರಮದಲ್ಲಿ ಚಿತ್ರ ರಚನೆ ಸ್ಪರ್ಧೆಯಲ್ಲಿ ಗೆದ್ದಂತಹ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ಸಂಘಟನೆಯ ಅನೀಲ್, ಶಿಕ್ಷಕರಾದ ಉಮೇಶ್ವರ ಹಿರೇಮಠ್, ವಿನಾಯಕ, ಪ್ರಶಾಂತ್, ಚಂದ್ರು, ರಮೇಶ್, ಕವಿತಾ ಬಾನು ಪ್ರಕಾಶ್ ಮತ್ತಿತರರಿರು.







