ಎ.21ರಂದು ಅನಿರ್ದಿಷ್ಟಾವಧಿ ಧರಣಿ
ಕೇಂದ್ರ, ರಾಜ್ಯ ಸರಕಾರ ರೈತರ ನಿರ್ಲಕ್ಷ
ಚಿಕ್ಕಮಗಳೂರು, ಎ.16: ರೈತರನ್ನು ನಿರ್ಲಕ್ಷ್ಯ ಮಾಡುತ್ತಿರುವ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಲು ಎ. 21ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ಎಂ.ಸಿ.ಬಸವರಾಜ್ ತಿಳಿಸಿದರು.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕರ್ನಾಟಕ ರಾಜ್ಯ ಬರಗಾಲದಿಂದ ತತ್ತರಿಸಿ ಹೋಗಿದೆ. ಈ ವರ್ಷವು ಬರಗಾಲ ಮುಂದುವರಿಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ನೀರಾವರಿ ಮತ್ತು ಪಂಪ್‌ಸೆಟ್ ನೀರಾವರಿ ಬೇಸಾಯದಲ್ಲಿ ಬೆಳೆಯಲಾಗಿದ್ದ ಎಲ್ಲಾ ಫಸಲುಗಳು ಒಣಗಿವೆ. ಅಂತರ್ಜಲ ಬತ್ತಿ ಹೋಗಿವೆ. ಜಲಾಶಯಗಳಲ್ಲಿ ನೀರಿಲ್ಲದೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಉದ್ಯೋಗಕ್ಕಾಗಿ ರಾಜ್ಯದ ಹಲವಾರು ಜಿಲ್ಲೆಯ ರೈತರು, ಕೃಷಿ ಕಾರ್ಮಿಕರು ಗುಳೆ ಹೋಗುತ್ತಿದ್ದಾರೆ ಎಂದು ಹೇಳಿದರು.
ನಮ್ಮ ರಾಜ್ಯವೊಂದರಲ್ಲೇ 20 ಸಾವಿರಕ್ಕಿಂತಲು ಹೆಚ್ಚು ರೈತರು ಆತ್ಮಹತ್ಯೆಗೆ ಒಳಗಾಗಿದ್ದಾರೆ. ಗ್ರಾಮೀಣ ಭಾಗದ ಜನರ ಪರಿಸ್ಥಿತಿ ಹೇಳತೀರದಾಗಿದೆ. ಕೃಷಿ ಕ್ಷೇತ್ರದಲ್ಲಿ ಉಂಟಾಗಿರುವ ಸಮಸ್ಯೆಯನ್ನು ಇದು ಕೇವಲ ರೈತರ ಸಮಸ್ಯೆಯೆಂದು ಬಿಂಬಿಸಲಾಗುತ್ತಿದೆ. ರೈತರಿಗೆ ಸೀಮಿತವಾದ ಸಮಸ್ಯೆಯಾಗಿರದೇ ಇಡೀ ಸಮಾಜದ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ದೂರದೃಷ್ಟಿಯ ಪರಿಹಾರಗಳನ್ನು ನೀಡದಿರುವುದರಿಂದ ಆಹಾರ ಭದ್ರತೆಗೆ ತೀವ್ರ ಧಕ್ಕೆಯಾಗುತ್ತದೆ. ಉದ್ಯೋಗ ಸಮಸ್ಯೆ ಎದುರಾಗಿದೆ. ದೇಶ ಮತ್ತು ರಾಜ್ಯದ ಆರ್ಥಿಕ ಚಟುವಟಿಕೆಗೆ ಕುಂದುಟ್ಟಾಗಿದೆ ಎಂದು ತಿಳಿಸಿದರು.
ಬರಗಾಲವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಬೀಜ ಹಾಕಲು ಸಾಧ್ಯವಾಗದ ಕಡೆ ಅದನ್ನು ಒಣ ಬರವೆಂದು, ನೀರಾವರಿ ಪ್ರದೇಶದಲ್ಲಿ ಬೆಳೆಯಲಾಗಿದ್ದ ಫಸಲುಗಳು ನೀರಿನ ಕೊರತೆಯಿಂದ ನಷ್ಟ ಹೊಂದಿರುವುದನ್ನು ನೀರಾವರಿ ಬರವೆಂದು, ತೋಟಗಾರಿಕೆ ಫಸಲುಗಳು ನಷ್ಟ ಹೊಂದಿರುವ ಕಡೆ ಅದನ್ನು ಭಾಗಾಯಿತು ಬರವೆಂದು, ಫಸಲು ಹಾಕಿ ಮಳೆ ಕೊರತೆಯಿಂದ ನಷ್ಟ ಹೊಂದಿರುವ ಪ್ರದೇಶವನ್ನು ಹಸಿ ಬರವೆಂದು ಘೋಷಿಸಿ, ನಷ್ಟ ಹೊಂದಿದ ರೈತರಿಗೆ ಹೆಕ್ಟೇರ್ ಒಂದಕ್ಕೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ 39 ಲಕ್ಷ ಪಂಪ್‌ಸೆಟ್‌ಗಳಿದ್ದು, ಕನಿಷ್ಠ 10 ಗಂಟೆ ಗುಣಾತ್ಮಕ 3 ಫೇಸ್ ವಿದ್ಯುತ್‌ನ್ನು ಪೂರೈಸಬೇಕು. ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ದೊರಕಿಸಿಕೊಡಲು ರಾಜ್ಯದಲ್ಲಿ ನೇಮಕವಾಗಿರುವ ಕೃಷಿ ಆಯೋಗ ಕೂಡಲೇ ತಮ್ಮ ಅಂತಿಮ ವರದಿಯನ್ನು ಘೋಷಿಸಬೇಕು. ಪ್ರೊ. ಎಂ.ಡಿ.ನಂಜುಂಡಯ್ಯನವರ ನೇತೃತ್ವದಲ್ಲಿ ನಡೆದ ಕರ ನಿರಾಕರಣಾ ಚಳವಳಿಯಲ್ಲಿ ಮನೆ ವಿದ್ಯುತ್ ಮೀಟರ್ ಗಳನ್ನು ಬಿಚ್ಚಿ ಇಲಾಖೆಗೆ ವಾಪಸ್ ಮಾಡಲಾಗಿದೆ. ಅಂತಹ ಚಳವಳಿಗಾರರ ಮನೆಗೆ ಹೊಸದಾಗಿ ಮೀಟರ್ ತಲುಪಿಸಿ ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.







