ಜಿಲ್ಲೆಯ ವಿವಿಧ ಬರಪೀಡಿತ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ
ವಿದ್ಯುತ್ ವ್ಯತ್ಯಯದಿಂದ ನೀರಿನ ಸಮಸ್ಯೆ
ಚಿಕ್ಕಮಗಳೂರು, ಎ.16: ಬೇಸಿಗೆ ಹಿನ್ನೆಲೆ ಜಿಲ್ಲಾಧಿಕಾರಿ ಎಸ್.ಪಿ.ಷಡಕ್ಷರಿ ಸ್ವಾಮಿ ಅವರು ಜಿಲ್ಲೆಯ ವಿವಿಧ ಬರಪೀಡಿತ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ಬರ ಮತ್ತು ಕುಡಿಯುವ ನೀರಿನ ನಿರ್ವಹಣಾ ವ್ಯವಸ್ಥೆಯನ್ನು ಪರಿಶೀಲಿಸಿದರು.
ಅಧಿಕಾರಿಗಳ ತಂಡದೊಂದಿಗೆ ಕಡೂರು ತಾಲೂಕಿನ ಮತ್ತಿಗಟ್ಟ, ತಂಗಲಿ ತಾಂಡ್ಯ, ದೇವರಹಳ್ಳಿ ಗೆದ್ದಲಿ ಹಳ್ಳಿ ಬೋವಿ ಕಾಲನಿ, ಮಲ್ಲೇಶ್ವರ ಎಂ.ಕೋಡಿಹಳ್ಳಿ, ಕಲ್ಲಾಪುರ, ಬೆಳಲು, ಗರ್ಜೆ, ಪುರ, ಯಗಟಿ, ಬ್ಯಾಗಡಿಹಳ್ಳಿ, ತರೀಕೆರೆ ತಾಲೂಕಿನ ಲಿಂಗದಹಳ್ಳಿ, ನಂದಿಬಟ್ಲು, ಹುಲಿತಿಮ್ಮಾಪುರ, ನಂದಿಬಟ್ಲು ತಾಂಡ್ಯ ಹಾಗೂ ತಣಿಗೇಬೈಲು ಸೇರಿದಂತೆ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಿ ಖುದ್ದು ಅವಲೋಕಿಸಿದ ಅವರು, ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಮಸ್ಯೆಗಳ ನಿರ್ವಹಣೆಗೆ ವಿವಿಧ ಸೂಚನೆಗಳನ್ನು ನೀಡಿದರು.
ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಎರಡು ಕೆರೆಗಳಲ್ಲಿ ಹೂಳು ತೆಗೆಯುವ ಕೆಲಸವನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಬೇಕು. ಕೆರೆಗೆ ಬರುವ ನೀರಿನ ಮೂಲಗಳ ಕಾಲುವೆಗಳನ್ನು ಕೆರೆಗಳಿಗೆ ಜೋಡಿಸುವ ಕೆಲಸವನ್ನು ನಿರ್ವಹಿಸಬೇಕು ಎಂದ ಅವರು, ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ನೀಡುವ ಕೂಲಿ ಹಣವನ್ನು ಬ್ಯಾಂಕಿನವರು ಸಾಲದ ಬಾಬ್ತುಗೆ ಸೇರಿಸಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆ ಸ್ಥಳೀಯ ಬ್ಯಾಂಕ್ ಮ್ಯಾನೇಜರ್‌ಗೆ ಆ ರೀತಿ ಹಣವನ್ನು ಸಾಲದ ಬಾಬ್ತಿಗೆ ಮುರಿದುಕೊಳ್ಳಬಾರದು. ಈಗಾಗಲೇ ಕೂಲಿ ಹಣವನ್ನು ಆ ರೀತಿ ಮಾಡಿದ್ದರೆ ಅದನ್ನು ಹಿಂದಿರುಗಿಸಬೇಕೆಂದು ತಿಳಿಸಿದರು.
ಕೆಲವು ಗ್ರಾಮಗಳಲ್ಲಿ ಆಹಾರ ಭದ್ರತಾ ಯೋಜನೆಯಡಿ ನೀಡುತ್ತಿರುವ ಪಡಿತರವನ್ನು ನೀಡುವಾಗ ಹಣ ಪಾವತಿಸಿ ಪಡೆಯುವ ಆಹಾರ ಪದಾರ್ಥಗಳಿಗೆ ಹೆಚ್ಚಿನ ದರ ಪಡೆಯುತ್ತಿದ್ದಾರೆ. ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ತಿಂಗಳಲ್ಲಿ ಕೇವಲ ಎರಡು ದಿನ ಮಾತ್ರ ಪಡಿತರ ನೀಡುತ್ತಿದ್ದಾರೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅವರಿಗೆ ನ್ಯಾಯಬೆಲೆ ಅಂಗಡಿಯ ಮಾಲಕರ ಸಭೆಯನ್ನು ಕರೆದು ಅವರಿಗೆ ಸೂಚನೆ ನೀಡಬೇಕು. ಭವಿಷ್ಯದಲ್ಲಿ ಇದೇ ರೀತಿ ದೂರುಗಳು ಬಂದರೆ ಅವರ ಪರವಾನಿಗೆಯನ್ನು ರದ್ದುಪಡಿಸಬೇಕೆಂದು ಸೂಚಿಸಿದರು.
ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯು ವಿದ್ಯುತ್‌ಚ್ಛಕ್ತಿ ಅಭಾವದಿಂದ ಆಗುತ್ತಿದೆ ಎಂದು ಕೇಳಿಬರುತ್ತಿದ್ದು, ಇವುಗಳ ನಿರ್ವಹಣೆಗೆ ವ್ಯವಸ್ಥಿತವಾಗಿ ಗ್ರಾಪಂ ಮತ್ತು ತಾಪಂಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಎಂ.ಜಕ್ಕನಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯು ವಿದ್ಯುತ್ ಸಂಪರ್ಕ ಕೊರತೆಯಿಂದ ಉಂಟಾಗುತ್ತಿದೆ ಎಂದು ಸಾರ್ವಜನಿಕರು ತಿಳಿಸಿದ ಹಿನ್ನೆಲೆ ಸ್ಥಳದಲ್ಲಿಯೇ ದೂರವಾಣಿಯ ಮೂಲಕ ಮೆಸ್ಕಾಂ ಇಂಜಿನಿಯರ್‌ಗೆ ಮಾತನಾಡಿ, ಇಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸೂಚನೆ ನೀಡಿದರು.
ಇದೇ ಸಂದಭರ್ದಲ್ಲಿ ಸ್ಥಳೀಯ ಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರು ನೀರಿನ ಸಮಸ್ಯೆ ಉಂಟಾದಲ್ಲಿ ಸ್ಥಳೀಯ ತಹಶೀಲ್ದಾರ್ ಹಾಗೂ ತಾಪಂ ಇಒ ಅಥವಾ ಪಿಡಿಒಗಳನ್ನು ಸಂಪರ್ಕಿಸಬಹುದು. ರೈತರಿಗೆ ಬಿತ್ತನೆ ಆಲೂಗಡ್ಡೆ ಬೀಜವನ್ನು ತೋಟಗಾರಿಕೆ ಇಲಾಖೆ ವತಿಯಿಂದ ಸಹಾಯಧನದ ಯೋಜನೆಯಡಿ ನೀಡಲಾಗುತ್ತಿದ್ದು, ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಮಯದಲ್ಲಿ ಉಪವಿಭಾಗಾಧಿಕಾರಿ ಸಂಗಪ್ಪ, ತಹಶೀಲ್ದಾರ್‌ಗಳಾದ ಭಾಗ್ಯಮ್ಮ, ತಾಪಂ ಇಒ ಗಂಗಾಧರ್ ಮೂರ್ತಿ, ಮತ್ತಿತರರು ಉಪಸ್ಥಿತಿರಿದ್ದರು.







