ಬೇಕರಿ ದರೋಡೆ: ಮೂವರಿಗೆ ಗಾಯ, ನಾಲ್ವರ ಬಂಧನ
ಮೂಡಿಗೆರೆ, ಎ.16: ಐದು ಮಂದಿ ಪುಂಡರ ತಂಡವೊಂದು ಬೇಕರಿಯೊಂದಕ್ಕೆ ನುಗ್ಗಿ ಮಾಲಕನ ಮೇಲೆ ಕಬ್ಬಿಣದ ಸಲಾಕೆ ಹಾಗೂ ಹೆಲ್ಮೆ ಟ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿ, ಕ್ಯಾಶ್ ಬಾಕ್ಸ್‌ನಲ್ಲಿದ್ದ ನಗದು ಹಣವನ್ನು ದರೋಡೆಗೈದು ಪರಾರಿಯಾಗಿರುವ ಘಟನೆ ಶುಕ್ರವಾರ ರಾತ್ರಿ ಮೂಡಿಗೆರೆ ಹ್ಯಾಂಡ್‌ಪೋಸ್ಟ್ ಬಳಿ ನಡೆದಿದೆ.
ರಾತ್ರಿ 9:30ರ ಸಮಯದಲ್ಲಿ ಅಯ್ಯಂಗಾರ್ ಬೇಕರಿ ಖರೀದಿ ನೆಪದಲ್ಲಿ ಬಂದ ಐದು ಮಂದಿಯ ತಂಡವೊಂದು ಕ್ಯಾಶ್ ಕೌಂಟರ್ ಎದುರಿದ್ದ ಮಾಲಕ ಶೇಖರ್ ಎಂಬವರ ಮೇಲೆ ಹಲ್ಲೆ ನಡೆಸಿ ಕ್ಯಾಶ್ ಬಾಕ್ಸ್‌ಗೆ ಕೈ ಹಾಕಿ 4 ಸಾವಿರ ರೂ.ನ್ನು ಬಾಚಿಕೊಂಡಿದ್ದಾರೆ. ಈ ವೇಳೆ ಅಡ್ಡ ಬಂದ ಶೇಖರ್‌ರವರ ತಂದೆ ರಾಜಣ್ಣ ಮತ್ತು ಸಹೋದರಿ ಚಂದನಾ ಅವರ ಮೇಲೂ ದರೋಡೆಕೋರರ ತಂಡ ಹಲ್ಲೆ ನಡೆಸಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಶೇಖರ್ ತಿಳಿಸಿದ್ದಾರೆ.
ಅಲ್ಲದೇ ಹೆಲ್ಮೆಟ್ ಹಾಗೂ ಕಬ್ಬಿಣದ ಸಲಾಖೆಯ ಮೂಲಕ ಬೇಕರಿಯನ್ನು ಧ್ವಂಸಗೊಳಿಸಿದ್ದಾರೆ. ಹಲ್ಲೆಗೊಳಗಾದ ರಾಜಣ್ಣ ಮತ್ತು ಚಂದನರವರನ್ನು ಚಿಕ್ಕಮಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೇಕರಿ ಧ್ವಂಸದಿಂದ ಸುಮಾರು 2 ಲಕ್ಷ ರೂ.ಹಾನಿ ಸಂಭವಿಸಿರುವುದಾಗಿ ಬೇಕರಿ ಮಾಲಕ ದೂರಿನಲ್ಲಿ ಆರೋಪಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಮೂಡಿಗೆರೆ ವೃತ್ತ ನಿರೀಕ್ಷಕ ಜಗದೀಶ್ ಹಾಗೂ ಪಿಎಸ್‌ಐ ಗವಿರಾಜ್ ಭೇಟಿ ನೀಡಿ ಆರೋಪಿಗಳಾದ ಸಂದೇಶ್(ಗುಂಡ), ಸಚಿನ್, ಶಶಿಧರ್, ಮುಹಮ್ಮದ್ ಸಮೀರ್ ಎಂಬವರನ್ನು ಬಂಧಿಸಿದ್ದಾರೆ. ಅಲ್ಲದೆ ದರೋಡೆಗೈದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಮೇಕನಗದ್ದೆ ಎಂಬಲ್ಲಿ ಕಿರಣ್ ಕುಮಾರ್ ಪರಾರಿಯಾಗಿದ್ದಾನೆ. ಆತನ ಪತ್ತೆಗಾಗಿ ಪೊಲೀಸರು ವ್ಯಾಪಕ ಶೋಧ ನಡೆಸಿದ್ದಾರೆ.







