ಪುಸ್ತಕ ಸಂಸ್ಕೃತಿಯ ಅಂಕಿತ: ಎ.23: ವಿಶ್ವ ಪುಸ್ತಕ ದಿನ

ಪ್ರಪಂಚದ ನೂರಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಅಂದು ಪುಸ್ತಕ ದಿನವನ್ನು ಸಡಗರ ಸಂಭ್ರಮಗಳಿಂದ ಆಚರಿಸಲಾಗುತ್ತದೆ.
ಜನಸಾಮಾನ್ಯರಲ್ಲಿ ಪುಸ್ತಕ ಓದುವ ಅಭಿರುಚಿಯನ್ನು ಬೆಳೆಸುವುದು ಈ ಪುಸ್ತಕ ದಿನಾಚರಣೆಯ ಘನ ಉದ್ದೇಶ. ಪುಸ್ತಕ ದಿನಾಚರಣೆಯ ಪರಿಕಲ್ಪನೆ ಮೊದಲು ಮೂಡಿದ್ದು ಸ್ಪೈನಿನಲ್ಲಿ. ಪುಸ್ತಕ ಪ್ರೀತಿ ಬೆಳೆಸುವ ಏಕೈಕ ಉದ್ದೇಶದಿಂದ ಇದನ್ನು ಆರಂಭಿಸಿ ದವರು ಸ್ಪೈನಿನ ಪುಸ್ತಕ ವ್ಯಾಪಾರಿಗಳು. ಜನರಲ್ಲಿ ಪುಸ್ತಕ ಓದುವ ಅಭಿರುಚಿ ಬೆಳೆಸುವುದರ ಜೊತೆಗೆ ಪುಸ್ತಕ ಪ್ರಕಟಣೋದ್ಯಮವನ್ನು ಪ್ರೋತ್ಸಾಹಿಸುವುದು ಈ ಪುಸ್ತಕಾಂದೋಲನದ ಮತ್ತೊಂದು ಗುರಿ ಯಾಗಿತ್ತು. ಸ್ಪೈನಿನ ಪುಸ್ತಕ ವ್ಯಾಪಾರಿಗಳ ಈ ಆಲೋಚನೆಯ ಹಿಂದಿನ ವ್ಯಾಪಾರಿ ಹಿತಾಸಕ್ತಿ ಸ್ಪಷ್ಟ. ಆದರೆ ಯುನೆಸ್ಕೊ ಇನ್ನೊ ಒಂದು ಹೆಜ್ಜೆ ಮುಂದೆ ಹೋಗಿ ಜ್ಞಾನಪ್ರಸಾರ ಸಾಧನವಾಗಿ ಪುಸ್ತಕ ವನ್ನು ಮಾನ್ಯಮಾಡಿತು. ಜನರಲ್ಲಿ ಪುಸ್ತಕಮನಸ್ಕತೆ ಬೆಳೆಸುವ ಹಾಗೂ ಪುಸ್ತಕ ಪ್ರಕಟಣೋದ್ಯಮವನ್ನು ಪ್ರೋತ್ಸಾಹಿಸುವ ಧ್ಯೇಯದಿಂದ ಯುನೆಸ್ಕೊ ವಿಶ್ವ ಪುಸ್ತಕ ದಿನ ಆಚರಣೆ ಯೋಜನೆಯನ್ನು ಜಾರಿಗೆ ತಂದಿತು. 1995ರ ಎಪ್ರಿಲ್ 23ರಂದು ಯುನೆಸ್ಕೊ ಆಶ್ರಯದಲ್ಲಿ ‘ವಿಶ್ವ ಪುಸ್ತಕ ದಿನ’ದ ಆಚರಣೆ ಜಾಗತಿಕ ಮಟ್ಟದಲ್ಲಿ ವಿದ್ಯುಕ್ತವಾಗಿ ಪ್ರಾರಂಭಗೊಂಡಿತು. ಇದೇ 23ರಂದು ನಾವು ಆಚರಿಸಲಿರುವುದು 19ನೆ ವಿಶ್ವ ಪುಸ್ತಕ ದಿನ.
ಎಪ್ರಿಲ್ 23ರಂದೇ ಏಕೆ? ಅಂದು ಸ್ಪೈನಿನ ಪ್ರಸಿದ್ಧ ಸಾಹಿತಿ ಮಿಗೆಲ್ ಡೆ ಸೆರ್ವಾಂಟೆಸ್‌ನ ಜನ್ಮದಿನವಾದ್ದರಿಂದ ಅಲ್ಲಿ ಅಂದು ಪುಸ್ತಕ ದಿನಾಚರಣೆ ಕೈಗೊಳ್ಳಲಾಯಿತು. ಜಗದ್ವಿಖ್ಯಾತ ಸಾಹಿತಿಗಳಾದ ಷೇಕ್ಸ್‌ಪಿಯರ್, ವ್ಲಾಡಿಮಿರ್ ನಬಕೊವ್ ಮೊದಲಾದವರ ಹುಟ್ಟಿದ ಹಬ್ಬ ಅಥವಾ ಪುಣ್ಯತಿಥಿ ಎ.23ರಂದು ಬರುವುದರಿಂದ ಯುನೆಸ್ಕೊ ಸಹ ಇದೇ ದಿನ ‘ವಿಶ್ವ ಪುಸ್ತಕ ದಿನ’ ಆಚರಿಸಲು ತೀರ್ಮಾನಿಸಿತು. ಪುಸ್ತಕ ಕೊಳ್ಳುವುದು, ಓದುವುದು, ಪುಸ್ತಕದ ಬಗ್ಗೆ ಚರ್ಚಿಸುವುದು ಅಂದಿನ ಮುಖ್ಯ ಕಾರ್ಯಕ್ರಮ. ಸಾಹಿತಿಗಳು ಮತ್ತು ಪ್ರಕಾಶಕರು ಈ ಸಮಾರಂಭ ದಲ್ಲಿ ಪ್ರಮುಖ ಅತಿಥಿಗಳು ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ.
‘ಅಂಕಿತ’ದ ಎಪ್ರಿಲ್ ತಿಂಗಳ ಕ್ಯಾಲೆಂಡರಿನಲ್ಲಿ 23ರಂದು ‘ವಿಶ್ವ ಪುಸ್ತಕ ದಿನ’ ಎಂದು ವಿಶೇಷವಾಗಿ ನಮೂದಿಸಿದ್ದನ್ನು ಕಂಡು ಮೈತುಂಬ ಪುಳಕ. ಮನಸು ಗಾಂಧಿ ಬಝಾರು. ಜಾಗತೀಕರಣ ವೈಭವದ ಧನಕನಕ ವಸ್ತುವಾಹನಗಳಿಂದ ಮೆರೆಯುತ್ತಿರುವ ಇಂದಿನ ಗಾಂಧಿ ಬಝಾರಿನ ವಿಶೇಷ ಸಾಂಸ್ಕೃತಿಕ ಆಕರ್ಷಣೆ ಎಂದರೆ ‘ಅಂಕಿತ’ ಪುಸ್ತಕ.
ಪ್ರಿಯ ಓದುಗರೆ, ‘ಅಂಕಿತ’ದೊಳಕ್ಕೆ ನಿಮ್ಮನ್ನು ಕರೆದೊ ಯ್ಯುವ ಮುನ್ನ ನಾನು ನನ್ನ ಪ್ರೀತಿಯ ಗಾಂಧಿ ಬಝಾರಿನ ಗತ-ವೈಭವದ ಬಗ್ಗೆ ಕೊಂಚ ಹೇಳಲೇಬೇಕು.
ಬಸವನಗುಡಿ ಬೆಂಗಳೂರು ಮಹಾನಗರದ ಸಾಂಸ್ಕೃತಿಕ ಸ್ಮಾರಕ ಚಿಹ್ನೆಗಳಲ್ಲೊಂದು. ಗಾಂಧಿ ಬಝಾರು ಬಸವನಗುಡಿಯ ಹೃದಯ ಬಿಂದು. ದೊಡ್ಡ ಬಸವಣ್ಣನ ಗುಡಿ, ದೊಡ್ಡಾಂಜ ನೇಯನ ಗುಡಿ, ಬ್ಯೂಗಲ್ ರಾಕ್, ಗೋಖಲೆ ಸಾರ್ವಜನಿಕ ಸಂಸ್ಥೆ ಮೊದಲಾದವುಗಳ ಆವರಣದೊಳಗಿರುವ ಗಾಂಧಿ ಬಝಾರ್ ಕಳೆದ ಶತಮಾನದ ಅರವತ್ತು-ಎಪ್ಪತ್ತರ ದಶಕಗಳಲ್ಲಿ ಕನ್ನಡ ಕಲೆ, ಸಾಹಿತ್ಯ, ಸಂಗೀತ, ರಂಗಭೂಮಿ, ಸಿನೆಮಾ ಮೊದಲಾದ ಕಲೋಪಾಸನೆಯ ಚಟುವಟಿಕೆಗಳ ಕೇಂದ್ರವಾಗಿತ್ತು. ಐದು ದೀಪಗಳ ಕಂಬವೊಂದು ಗಾಂಧಿಬಝಾರಿನ ವೃತ್ತವನ್ನು ಅಲಂಕರಿಸಿತ್ತು. ಈ ವೃತ್ತದ ಮೇಲಕ್ಕೆ ಡಿವಿಜಿಯವರ ರಾಜ ಮಾರ್ಗ. ಕೆಳಕ್ಕೆ ಅ.ನ.ಸುಬ್ಬರಾಯರ ಕಲಾ ಮಂದಿರದ ರಸ್ತೆ. ಬೆಳಗ್ಗಿನಿಂದ ರಾತ್ರಿ ಹತ್ತರವರೆಗೆ ಒಂದಲ್ಲ ಒಂದು ಸಾಂಸ್ಕೃತಿಕ ಚಟುವಟಿಕೆಗಳಿಂದ ಗಿಜುಗುಡುತ್ತಿದ್ದ ಕಲಾಮಂದಿರ. ಬೆಳಗ್ಗೆ ಪೈಂಟಿಂಗ್, ಕೊಟ್ಟಣದ ಅಕ್ಕಿ ಮೊದಲಾದ ಗ್ರಾಮೀಣ ಕಸುಬುಗಳ ಬಗ್ಗೆ ತರಬೇತಿ-ಚರ್ಚೆ-ಸಮಾಲೋಚನೆ. ಇಳಿ ಸಂಜೆ ಪತ್ರಿಕಾ ವ್ಯವಸಾಯದ ಖ್ಯಾತನಾಮರಾದ ಪಿ.ಆರ್.ರಾಮಯ್ಯ, ತಿ.ತಾ.ಶರ್ಮ,ಅವರುಗಳ ಸವಾರಿ ಚಿತ್ತೈಸುತ್ತಿತ್ತು. ದೇಶದ ವಿದ್ಯಮಾನಗಳ ಬಗ್ಗೆ ಗಂಭೀರ ಚರ್ಚೆ. ಕೆಲವೊಮ್ಮೆ ಅ.ನ.ಕೃ, ನಿರಂಜನ ಅವರಿಂದ ಕನ್ನಡಭಾಷೆ, ಸಾಹಿತ್ಯ ಕುರಿತು ಕಳಕಳಿಯ ಮಾತುಗಳು. ಈ ಎಲ್ಲ ಗೋಷ್ಠಿಗಳಿಗೂ ನನ್ನಂಥವರು ಅನಾಹ್ವಾನಿತ ಕಾಯಂ ಸಭಿಕರು. ನಸುಗತ್ತಲಾದಂತೆ ಮೈಸೂರು ಅನಂತಸ್ವಾಮಿಯ ಗಾಯನ ಇಲ್ಲವೇ ನಾಟಕದ ರಂಗ ತಾಲೀಮು. ಚಿತ್ರ ಮತ್ತು ರವಿ ಕಲಾವಿದರು ಆಗಿನ ಗಾಂಧಿ ಬಝಾರಿನ ಎರಡು ಹವ್ಯಾಸಿ ನಾಟಕ ತಂಡಗಳು. ಇವೆರಡರ ನಡುವೆ ನಾಟಕ ಪ್ರದರ್ಶನದಲ್ಲಿ ಬಿರುಸಿನ ಪೈಪೋಟಿ. ರವಿ ಕಲಾವಿದರಿಗೆ ಕೆ.ವಿ.ಅಯ್ಯರ್ ಮಾರ್ಗದರ್ಶನ, ಚಿತ್ರಾಗೆ ದಶರಥಿ ದೀಕ್ಷಿತ್ ಮತು ಎ.ಎಸ್.ಮೂರ್ತಿ ನಾಯಕತ್ವ. ಖ್ಯಾತ ಚಿತ್ರ ನಟರಾದ ಶಿವರಾಮ್, ಲೋಕನಾಥ್, ಸಿ.ಆರ್.ಸಿಂಹ, ನಾಟಕಕಾರ ನವರತ್ನರಾಂ ಮೊದಲಾದವರು ಕಾಯಂ ಆಹ್ವಾನಿತರು. ರವಿವಾರ ಬೆಳಗ್ಗೆ ನಾಟಕ ಇಲ್ಲವೆ ಕಥಾ ವಾಚನ. ಗಿರೀಶ್ ಕಾರ್ನಡರು ‘ಹಿಟ್ಟಿನ ಹುಂಜ’ ನಾಟಕ ಮೊದಲು ವಾಚಿಸಿದ್ದು ಇಲ್ಲೆ. ಬೀದಿ ನಾಟಕದಂತೆ ಬೀದಿ ಚರ್ಚೆಗೂ ಗಾಂಧಿ ಬಝಾರ್‌ಪ್ರಸಿದ್ಧವಾಗಿತ್ತು. ಬೆಳಗ್ಗೆ ವೈಎನ್ಕೆ, ನಿಸಾರ್ ಅಹ್ಮದ್, ಲಂಕೇಶ, ಸುಮತೀಂದ್ರ ನಾಡಿಗ ಮೊದಲಾದವರಿಂದ ವಿದ್ಯಾರ್ಥಿ ಭವನದೆದುರು, ಸರ್ಕಲ್ ಲಂಚ್ ಹೋಂ ಮಹಡಿ ಮೇಲೆ ಸಾಹಿತ್ಯ ಚರ್ಚೆ, ಕವನ ವಾಚನ. ನವ್ಯ ಸಾಹಿತ್ಯ ಕುರಿತ ಅಡಿಗರ ಬೈಠಕ್ ನಡೆಯುತ್ತಿದ್ದುದು ಮೂಲೆಯ ಕೆನರಾ ಬ್ಯಾಂಕ್ ಕಟ್ಟೆಯ ಮೇಲೆ. ಅಲ್ಲೆ ನಾಡಿಗರ ಪುಸ್ತಕದ ಅಂಗಡಿ ಇತ್ತು. ಮಾಸ್ತಿಯವರು ಸಂಜೆ ಬಸವನಗುಡಿ ಕ್ಲಬ್ಬಿಗೆ ಗಾಂಧಿ ಬಝಾರ್‌ವೃತ್ತದ ಮೂಲಕ ಹಾದು ಹೋದಂತೆ ಯುವ ಕವಿಗಳಿಗೆ-
ನೋಡುತ್ತಲಿದ್ದಂತೆ
ಹೋಟೆಲಿನ ಬದಿಯಲ್ಲಿ ಬೀದಿ ತಿರುಗನು ಹೊಕ್ಕು
ಮರೆಯಾಗುವರು ಮಾಸ್ತಿ-
ಸಂದ ಜೀವನದೊಂದು ರೀತಿಯಂತೆ;
ಸರಳ ಸದಭಿರುಚಿಯ ಖ್ಯಾತಿಯಂತೆ.
-ಎಂಬಂಥ ಕಾಣ್ಕೆಯ ಧನ್ಯತಾ ಭಾವ. ನಿಸಾರ ಅಹ್ಮದ್ ಅವರ ಮನಸು ಗಾಂಧಿ ಬಝಾರು ಕವನ ಸಂಕಲನ ಹುಟ್ಟಿದ್ದು ಇಲ್ಲೇ. ಗಾಂಧಿ ಬಝಾರೊಂದು ಅಗೆದಷ್ಟೂ ನಿಧಿನಿಕ್ಷೇಪ ಕೊಡುವ ಗಣಿಯಿದ್ದಂತೆ. ಹಿಂದಿನೆಲ್ಲ ಸಾಂಸ್ಕೃತಿಕ ಚಟುವಟಿಕೆಗಳ ಮುಂದು ವರಿದ ಭಾಗವೋ ಎಂಬಂತೆ ನನ್ನಂಥವರಿಗೆ ಮತ್ತು ಹೊಸ ಪೀಳಿಗೆಯವರಿಗೆ ‘ಅಂಕಿತ’ ಒಂದು ಸಾಂಸ್ಕೃತಿಕ ಆಕರ್ಷಣೆಯ ಕೇಂದ್ರ. ‘ಅಂಕಿತ’, ಈಗ ನೆನಪಾಗುತ್ತಿರುವುದಕ್ಕೂ ಒಂದು ವಿಶೇಷ ಅರ್ಥವಿದೆ. ಯುನೆಸ್ಕೊಗೂ ಮೊದಲೇ, ಅದರ ಆದರ್ಶವಾದ ಜನತೆಯಲ್ಲಿ ಪುಸ್ತಮನಸ್ಕತೆ, ಪುಸ್ತಕ ಪ್ರೀತಿ ಮೂಡಿಸುವ, ಪುಸ್ತಕೋದ್ಯಮ ಬೆಳೆಸುವ ಪರಿಕಲ್ಪನೆಗಳು ಪ್ರಕಾಶ್ ಕಂಬತ್ತಳ್ಳಿ ಯವರಿಗೆ ಹೊಳೆದಿತ್ತೇನೋ? ಫಲವಾಗಿ ‘ಅಂಕಿತ’ ಪ್ರಕಾಶನ ಸಂಸ್ಥೆ 1995ರಲ್ಲಿ ಜನ್ಮ ತಾಳಿತು. ಯುನೆಸ್ಕೊ ಆದರ್ಶಗಳನ್ನು ಪ್ರಕಾಶ ಹೀಗೆ ಸಾಕಾರಗೊಳಿಸಿದ್ದರು ಎಂಬುದು ಗಮನಿಸಬೇಕಾದ ಅಂಶ. ಎಂದೇ, ಪುಸ್ತಕ ಪ್ರೀತಿ, ವಾಚನಾಭಿರುಚಿಗಳ ಬೆಳೆಸುವು ದನ್ನೇ ಪ್ರಣಾಳಿಕೆಯಾಗಿ ಹೊಂದಿರುವ ‘ಅಂಕಿತ’, ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಈ ವರ್ಷದ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿ ರುವುದು ಈ ವಿಶೇಷ. ಪುಸ್ತಕ ಪ್ರೀತಿ, ವಾಚನಾಭಿರುಚಿ ಹೆಚ್ಚಿಸುವಂಥ ವೌಲಿಕ ಕೃತಿಗಳ ಪ್ರಕಟಣೆಯ ಮೂಲಕ ಕನ್ನಡ ಪುಸ್ತಕೋದ್ಯಮಕ್ಕೆ ಅಮೂಲ್ಯ ಕೊಡುಗೆ ನೀಡಿರುವ ಶ್ರೇಷ್ಠ ಪ್ರಕಾಶಕರಿಗೆ ಪ್ರತೀ ವರ್ಷ ಕೊಡಲಾಗುವ ಈ ರಾಜ್ಯ ಪ್ರಶಸ್ತಿ(2015)ಯನ್ನು, ವಿಶ್ವ ಪುಸ್ತಕ ದಿನಾಚರಣೆಯ ಸಂದರ್ಭ ದಲ್ಲಿ ‘ಅಂಕಿತ’ಗಳಿಸಿರುವುದು ಹೆಮ್ಮೆಯ ಸಂಗತಿ. ಕಳೆದ ಎರಡು ದಶಕಗಳಲ್ಲಿ 660ಕ್ಕೂ ಹೆಚ್ಚು ವೌಲಿಕ ಕೃತಿಗಳನ್ನು ಪ್ರಕಟಿಸಿರುವ ‘ಅಂಕಿತ’ ಕೇವಲ ಪುಸ್ತಕ ಪ್ರಕಾಶನ ಸಂಸ್ಥೆಯಲ್ಲ ಅಥವಾ ಲಾಭದ ಮೇಲೆ ಕಣ್ಣಿಟ್ಟ ಪುಸ್ತಕ ಮಳಿಗೆ ಯಲ್ಲ. ಅದೊಂದು ಕನ್ನಡ ಶಕ್ತಿ ಶಾರದೆಯ ಮೇಳ. ಗಾಂಧಿ ಬಝಾರಿನ ನೆಲಮಾಳಿಗೆಯಲ್ಲಿರುವ ಈ ಸರಸ್ವತಿ ಮಂದಿರವನ್ನು ಪ್ರವೇಶಿಸಿದಂತೆ ನಮಗೆ ಕನ್ನಡದ ಲೇಖಕ ಮಹನೀಯರೆಲ್ಲರ ಸಾಕ್ಷಾತ್ಕಾರವಾಗುತ್ತದೆ. ಬಿ.ಎಂ.ಶ್ರೀ, ಕುವೆಂಪು, ಕಾರಂತ, ಬೇಂದ್ರೆ, ಅನಂತ ಮೂರ್ತಿಯವರುಗಳಿಂದ ಇಂದಿನ ಕುಂವೀ, ಎಚ್ಚೆಸ್ವಿ, ಜಯಂತ, ವಿವೇಕ, ಮೊಗಳ್ಳಿ, ಸತ್ಯನಾರಾಯಣ ಆದಿಯಾಗಿ ಹಿಂದಿನ-ಇಂದಿನ ಎಲ್ಲ ತಲೆಮಾರುಗಳ, ಎಲ್ಲ ಪಂಥಗಳ ಕವಿ, ಸಾಹಿತಿಗಳೊಡನೆ ನಾವು ಗಂಟೆಗಟ್ಟಳೆ ‘ಅಂಕಿತ’ ದಲ್ಲಿ ಅನುಸಂಧಾನ ನಡೆಸಬಹುದು.
ಬಿಸಿಲ ಧಗೆ ಮತ್ತು ಜಾಲಿ ಮುಳ್ಳಿಗೆ ಕುಖ್ಯಾತವಾದ ಬಳ್ಳಾರಿ ಜಿಲ್ಲೆಯ ಕಂಬತ್ತಳ್ಳಿಯಲ್ಲಿ ಅರಳಿದ ಪ್ರಕಾಶ್ ಎಂಬ ಈ ಉದ್ಯಮ ಶೀಲ ಪ್ರತಿಭೆ ಬೆಂಗಳೂರಿಗೆ ಬಂದು ಗಾಂಧಿಬಝಾರಿನಲ್ಲಿ ಪುಸ್ತಕೋದ್ಯಾನವೊಂದನ್ನು ಸೃಷ್ಟಿಸಿದ್ದು ಒಂದು ವಿಸ್ಮಯವೇ.ನಗರಕ್ಕೆ ಬಂದು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರಭಾರೊಂದಿಗೆ ಚತುರ್ಭುಜರಾದರು. ಸ್ವಲ್ಪ ಕಾಲ ಎನ್.ಜಿ.ಇ.ಎಫ್.ನಲ್ಲಿ ಭಾಷಾಂತರಕಾರ, ಗೃಹ ಪತ್ರಿಕೆಯ ಸಂಪಾದಕ ರಾಗಿದ್ದರು. ಹಂಪಿ ವಿಶ್ವದ್ಯಾನಿಲಯದಲ್ಲಿ ಪ್ರಸಾರಾಂಗ ನಿರ್ವಹಿಸಿದರು, ಅಂಬೇಡ್ಕರ್ ಕಾಲೇಜಿನಲ್ಲಿ ಕನ್ನಡ ಬೋಧಿಸಿದರು. ಸ್ವತಂತ್ರ ಉದ್ಯಮಶೀಲ ಪ್ರವೃತ್ತಿಯ ಪ್ರಕಾಶರಿಗೆ ಇದಾವುದೂ ನೆಮ್ಮದಿಯ ನೆಲೆಯಾಗಲಿಲ್ಲ. ಇವರಿಗಾದ ನಷ್ಟ ಪುಸ್ತಕೋದ್ಯಮಕ್ಕೆ ಲಾಭವಾಯಿತು. ತಮ್ಮದೇ ಕೃತಿ ‘ರಂಗ ವಿಹಾರ’ದೊಂದಿಗೆ ‘ಅಂಕಿತ’ಪುಸ್ತಕ ಪ್ರಕಾಶನ ಪ್ರಾರಂಭಿಸಿದರು. ಮುಂದಿನದೆಲ್ಲ ಯಶೋಗಾಥೆಯೇ. ಪುಸ್ತಕ ಪ್ರಕಟಣೆ ಕಾಯಕದಲ್ಲಿ ಶ್ರೀಮತಿ ಪ್ರಭಾಪತಿ ಪ್ರಕಾಶರಿಗೆ ಬಲಗೈಯಾಗಿ ತೊಡಗಿಕೊಂಡರು. ಜಗತ್ತನ್ನು ಬೆಳಗಲು ಒಬ್ಬ ಸೂರ್ಯ ಸಾಕು. ಆದರೆ ಅಜ್ಞಾನದ ಅಂಧಕಾರ ನೀಗುವ ‘ಅಂಕಿತ’ಕ್ಕೆ ಪ್ರಕಾಶ್-ಪ್ರಭಾ ಬೆಳಕಿನೆರಡು ಕಣ್ಣುಗಳು.
ಪ್ರಕಾಶ್ ದಂಪತಿ ಹೇಳುವಂತೆ ಮೊದಲಿನಿಂದಲೂ ಯಾವುದೇ ನಿರ್ದಿಷ್ಟ ವಿಚಾರ/ಚಳವಳಿಗೆ ಅಂಟಿಕೊಳ್ಳದೆ ಎಲ್ಲ ಬಗೆಯ ವೈವಿಧ್ಯಮಯ ಪುಸ್ತಕಗಳನ್ನು ಪ್ರಕಟಿಸುತ್ತ ಬಂದಿರುವುದು ಅಂಕಿತದ ವಿಶೇಷ. ಇದು ಪುಸ್ತಕ ಪ್ರಿಯತೆ ಮತ್ತು ಓದುಗರಲ್ಲಿ ಹೊಸ ಅಭಿರುಚಿ ಬೆಳೆಸುವ ಅವರ ನೀತಿಗನುಗುಣವಾಗಿಯೇ ಇದೆ. ಕಾದಂಬರಿ, ಕಾವ್ಯ, ನಾಟಕ, ವಿಮರ್ಶೆ, ಸಾಹಿತ್ಯ ಚರಿತ್ರೆ, ಸಂಶೋಧನೆ, ಸಂಸ್ಕೃತಿ ಚಿಂತನೆ-ಇಂಥ ಸಾಹಿತ್ಯದ ಜೊತೆಗೆ ಆರೋಗ್ಯ, ಆರ್ಥಿಕ ವಿಚಾರಗಳು, ಕ್ರೀಡೆ, ವಿಜ್ಞಾನ, ಸಾಧಕರ ಚರಿತ್ರೆ -ಹೀಗೆ ಹತ್ತುಹಲವಾರು ಬಗೆಯ ವಿಚಾರ ಸಾಹಿತ್ಯವನ್ನು ಪ್ರಕಟಿಸುತ್ತಿರುವ ಸಾಹಸ ‘ಅಂಕಿತ’ದ್ದು. ಮರೆತ ಹೋದ ಕನ್ನಡದ ಶ್ರೇಷ್ಠ ಲೇಖಕರ ಕೃತಿಗಳ ಮರುಪ್ರಕಟಣೆ; ಹಾಸ್ಯ ಸಾಹಿತ್ಯ ಸಂಪುಟಗಳು ಹಾಗೂ ಷೇಕ್ಸ್‌ಪಿಯರ್, ಟಾಲ್‌ಸ್ಟಾಮ್, ಕಾಪ್ಕ, ಹೆರೋದೊತ, ವರ್ಜಿಲ್, ಯೂಲಿಸಿಸ್,ತಿರುವಳ್ಳುವರ್, ಮಹಾಶ್ವೇತಾ ದೇವಿ ಮೊದಲಾಗಿ ಪ್ರಪಂಚ ಸಾಹಿತ್ಯದ ಶ್ರೇಷ್ಠ ಲೇಖಕರನ್ನು ಕನ್ನಡ ಓದುಗರಿಗೆ ಪರಿಚಯಿಸಿರುವ ಹೆಗ್ಗಳಿಕೆ ‘ಅಂಕಿತ’ದ್ದು. ‘ಅಂಕಿತ ಪ್ರತಿಬೆ’ ಯುವ ಬರಹಗಾರರನ್ನು ಪ್ರೋತ್ಸಾಹಿಸಲೆಂದೇ ರೂಪಿಸಿರುವ ವಿಶೇಷ ಯೋಜನೆ.
ಪುಸ್ತಕ ಪ್ರಕಟಣೆಗಷ್ಟೆ ‘ಅಂಕಿತ’ ತನ್ನನ್ನು ಸೀಮಿತಗೊಳಿಸಿ ಕೊಂಡಿಲ್ಲ. ಕಥಾಸ್ಪರ್ಧೆ, ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಪ್ರತಿ ವರ್ಷ ಅತ್ಯುತ್ತಮ ಪ್ರಕಾಶಕರಿಗೆ ‘ಅಂಕಿತ ಪುಸ್ತಕ ಪುರಸ್ಕಾರ’, ಕನ್ನಡ ಪುಸ್ತಕಗಳ ಪ್ರಚಾರಕ್ಕಾಗಿ ವರ್ಣರಂಜಿತ ಕ್ಯಾಟ್ಲಾಗ್, ಪೋಸ್ಟರುಗಳ ಪ್ರಕಟಣೆ, ಪ್ರತೀ ವಾರ ಟಾಪ್‌ಟೆನ್ ಪುಸ್ತಕಗಳ ಘೋಷಣೆ -ಹೀಗೆ ಪುಸ್ತಕೋದ್ಯಮಕ್ಕೆ ಸಂಬಂಧಿಸಿದಂತೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯಪ್ರವೃತ್ತವಾಗಿದೆ.
ಪುಸ್ತಕ ಪ್ರಕಟಣೆಯಲ್ಲಿ ಮಹತ್ವವೆನ್ನಿಸುವ ಮುಖಪುಟ, ವಿನ್ಯಾಸ, ಮುದ್ರಣ, ಕಾಗದದ ಬಳಕೆ ಇವುಗಳಲ್ಲಿ ‘ಅಂಕಿತ’ ತೋರುವ ಕಾಳಜಿ ಅನನ್ಯವಾದುದು. ಇವೆಲ್ಲವೂ ಕೃತಿಯೊಂದರ ಅಂತಃಸತ್ತ್ವಕ್ಕೆ ಅನ್ವರೂಪವಾಗಿರಬೇಕು ಎನ್ನುತ್ತಾರೆ ಪ್ರಕಾಶ್ ಕಂಬತ್ತಳ್ಳಿ. ಕನ್ನಡ ಪುಸ್ತಕ ಪ್ರಾಧಿಕಾರ ಕೊಡಮಾಡುವ ‘ಪುಸ್ತಕ ಸೊಗಸು’ ಪ್ರಶಸ್ತಿಯನ್ನು ‘ಅಂಕಿತ’ ಐದು ಬಾರಿ ಗೆದ್ದು ಕೊಂಡಿರುವುದು ಅದರ ಸೌಂದರ್ಯ ಪ್ರಜ್ಞೆ, ರಸಾನುಭೂತಿ ಮತ್ತು ಅಭಿರುಚಿಗಳಿಗೆ ಉತ್ತಮ ನಿದರ್ಶವಾಗಬಲ್ಲದು. ಕನ್ನಡ ಪರಿಚಾರಿಕೆಗಾಗಿ ಕೊಡುವ ಪ್ರೋ. ಎಸ್.ವಿ.ಪ್ರಮೇಶ್ವರ ಭಟ್ಟ ಸಂಸ್ಮರಣಾ ಪ್ರಶಸ್ತಿ, ಉತ್ತಮ ಕಥಾ ಸಾಹಿತ್ಯ ಪ್ರಕಟಣೆಗಾಗಿ ನೀಡುವ ಮಾಸ್ತಿ ಪ್ರಶಸ್ತಿ-ಹೀಗೆ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ‘ಅಂಕಿತ’ಕ್ಕೆ ಈಗ ಇವೆಲ್ಲದರ ಕಿರೀಟಪ್ರಾಯವಾಗಿ ಶ್ರೇಷ್ಠ ಪ್ರಕಾಶನ ಪ್ರಶಸ್ತಿಯ ಘನತೆಗೌರವಗಳು ಸಂದಿರುವುದು ಯೋಗ್ಯವಾದುದೇ ಆಗಿದೆ.
ಭರತ ವಾಕ್ಯ:
ಪುಸ್ತಕಗಳು ನಮ್ಮ ಆತ್ಮದೊಳಗೆ ಹೆಪ್ಪುಗಟ್ಟಿರುವ ಕರು ಣಾಂಬುಧಿಯನ್ನು ಛೇದಿಸುವ ಹಿಮಗೊಡಲಿಯಾಗಬೇಕು.
-ಫ್ರಾನ್ಸ್ ಕಾಪ್ಕ
ಪುಸ್ತಕಗಳಿಲ್ಲದ ಮನೆ ಕಿಟಕಿಯಿಲ್ಲದ ಕೋಣೆಯಂತೆ.
-ಹೆನ್ರಿಚ್ ಮನ್







