ಹಂಡ್ವಾರಾ ಬಾಲಕಿಯ ಅಕ್ರಮ ಬಂಧನ: ಪೊಲೀಸರಿಗೆ ಹೈಕೋರ್ಟ್ ತರಾಟೆ

ಶ್ರೀನಗರ, ಎ.16: ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕೇಂದ್ರ ಬಿಂದುವಾಗಿರುವ ಹಂಡ್ವಾರಾದ ಬಾಲಕಿ ಪೊಲೀಸರ ಅಕ್ರಮ ಬಂಧನದಲ್ಲಿದ್ದಾಳೆ ಮತ್ತು ಸ್ಥಳೀಯರನ್ನು ದೂರಿ ವೀಡಿಯೊ ಹೇಳಿಕೆ ನೀಡುವಂತೆ ಆಕೆಯ ಮೇಲೆ ಒತ್ತಡ ಹೇರಲಾಗಿತ್ತು ಎಂದು ಆಕೆಯ ಕುಟುಂಬವು ಶನಿವಾರ ಹೇಳಿದೆ. ಬಾಲಕಿಗೆ ಸೈನಿಕನಿಂದ ಲೈಂಗಿಕ ಕಿರುಕುಳವಾಗಿದೆ ಎಂದು ಆರೋಪಿಸಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗಳ ಸಂದರ್ಭ ಭದ್ರತಾ ಪಡೆಗಳ ಕಾರ್ಯಾಚರಣೆಗಳಲ್ಲಿ ಐವರು ಮೃತಪಟ್ಟಿದ್ದಾರೆ.
ತನ್ನ 16ರ ಹರೆಯದ ಅಪ್ರಾಪ್ತ ವಯಸ್ಕ ಪುತ್ರಿ,ಆಕೆಯ ತಂದೆ ಮತ್ತು ಸೋದರತ್ತೆ ಕಳೆದ ಐದು ದಿನಗಳಿಂದಲೂ ಪೊಲೀಸರ ಅಕ್ರಮ ಬಂಧನದಲ್ಲಿದ್ದಾರೆ ಎಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ ಬಾಲಕಿಯ ತಾಯಿ ಹೇಳಿದ್ದಾರೆ.
ನನ್ನ ಮಗಳ ಹೇಳಿಕೆಯನ್ನು ದಾಖಲಿಸಿಕೊಳ್ಳುವಾಗ ಆಕೆ ಪೊಲೀಸ್ ಠಾಣೆಯಲ್ಲಿ ಒಬ್ಬಂಟಿಯಾಗಿದ್ದಳು ಮತ್ತು ಆ ಹೇಳಿಕೆಯನ್ನು ನೀಡಲು ಪೊಲೀಸರು ಆಕೆಯ ಮೇಲೆ ಒತ್ತಡ ಹೇರಿದ್ದರು ಎಂದು ಆಕೆ ತಿಳಿಸಿದ್ದಾರೆ.
ಬಾಲಕಿಯ ತಾಯಿಯು ಸಲ್ಲಿಸಿರುವ ಅರ್ಜಿಯನ್ನು ಶನಿವಾರ ಕೈಗೆತ್ತಿಕೊಂಡ ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯವು ಪೊಲೀಸರನ್ನು ತರಾಟೆಗೆತ್ತಿಕೊಂಡಿತಲ್ಲದೆ, ಬಾಲಕಿ ಮತ್ತು ಆಕೆಯ ಕುಟುಂಬ ಸದಸ್ಯರನ್ನು ಯಾವ ಕಾನೂನಿನಡಿ ಬಂಧಿಸಲಾಗಿದೆ ಎನ್ನುವುದನ್ನು ತಿಳಿಸುವಂತೆ ತಾಕೀತು ಮಾಡಿದೆ.
ಬಾಲಕಿಯ ತಾಯಿ ಸುದ್ದಿಗೋಷ್ಠಿಯನ್ನು ಏರ್ಪಡಿಸಲು ಬಯಸಿದ್ದರಾದರೂ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಕೆ,ತನ್ನ ಕುಟುಂಬಕ್ಕೆ ಯಾವುದೇ ಮಾಹಿತಿ ನೀಡದೆ ಪುತ್ರಿಯನ್ನು ಬಂಧಿಸಲಾಗಿದೆ. ಆಕೆ ಅಪ್ರಾಪ್ತ ವಯಸ್ಕಳಾಗಿದ್ದರೂ ವೀಡಿಯೊದಲ್ಲಿ ಆಕೆಯ ಮುಖವನ್ನು ಮರೆಮಾಚದೆ ಗುರುತನ್ನು ಬಹಿರಂಗಗೊಳಿಸಲಾಗಿದೆ ಎಂದು ಆರೋಪಿಸಿದರು.
ಮಂಗಳವಾರ ತನ್ನ ಮಗಳು ಶಾಲೆಯಿಂದ ಮರಳುತ್ತಿದ್ದಾಗ ಆಕೆ ಶೌಚಾಲಯಕ್ಕೆ ತೆರಳಿದ್ದಳು ಮತ್ತು ಈ ವೇಳೆ ಸೈನಿಕನೋರ್ವ ಆಕೆಯನ್ನು ಹಿಂಬಾಲಿಸುತ್ತಿದ್ದ. ಶೌಚಾಲಯದಲ್ಲಿ ಸೈನಿಕನನ್ನು ಕಂಡ ಆಕೆ ಗಾಬರಿಯಿಂದ ಕಿರುಚಿಕೊಂಡಿದ್ದಳು. ಸಮೀಪದ ಅಂಗಡಿಕಾರರು ಮತ್ತು ಪೊಲೀಸರು ಧಾವಿಸಿದಾಗ ಆ ಸೈನಿಕ ಅಲ್ಲಿಂದ ಪರಾರಿಯಾಗಿದ್ದ ಎಂದು ತಿಳಿಸಿದ ಅವರು, ಬಳಿಕಪೊಲೀಸರು ಕುಟುಂಬಕ್ಕೆ ಯಾವುದೇ ಮಾಹಿತಿಯನ್ನು ನೀಡದೆ ಆಕೆಯನ್ನು ಠಾಣೆಗೊಯ್ದಿದ್ದಾರೆ ಎಂದರು.
ಘಟನೆಯ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ನಾವು ನ್ಯಾಯಾಲಯವನ್ನು ಕೋರಿದ್ದೇವೆ. ಈ ಹೇಯ ಕೃತ್ಯವನ್ನು ಮಾಡಿರುವ ಪೊಲೀಸ್ ಅಥವಾ ಸೇನೆ ವಿಚಾರಣೆ ನಡೆಸುವುದನ್ನು ನಾವು ಬಯಸುವುದಿಲ್ಲ ಎಂದರು.







