ದೇಶ ವಿರೋಧಿಗಳ ನಿವಾರಣೆಗಾಗಿ ಜಿಎನ್‌ಯು ಮೈದಾನದಲ್ಲಿ ಪೂಜೆ!
ಹೊಸದಿಲ್ಲಿ, ಎ.16: ಹಿಂದೂ ಸೇನಾ, ಅದರ ವಿದ್ಯಾರ್ಥಿ ಘಟಕವಾದ ಹಿಂದೂ ವಿದ್ಯಾರ್ಥಿ ಸೇನಾ (ಎಚ್‌ವಿಎಸ್) ಹಾಗೂ ಹಿಂದೂ ಜಾಗರಣ ಅಭಿಯಾನ್ ಸಂಘಟನೆಗಳು ಎರಡು ಪೂಜೆಗಳನ್ನು ಮಾಡುವ ಮೂಲಕ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವರ್ಚಸ್ಸನ್ನು ‘ಶುದ್ಧೀಕರಿಸಿವೆ’.
ಎಚ್‌ವಿಎಸ್‌ನ ಹಲವು ಸದಸ್ಯರಿರುವ ಜೆಎನ್‌ಯುನ ಮಹಿ ಮಾಂಡವಿ ವಿದ್ಯಾರ್ಥಿ ನಿಲಯವು ಶುಕ್ರವಾರ ರಾತ್ರಿ ತನ್ನ ಮೈದಾನದಲ್ಲಿ ರಾಮನವಮಿ ಹಾಗೂ ಭಗವತಿ ಪೂಜೆಗಳ ಆತಿಥೇಯತ್ವ ವಹಿಸಿತ್ತು.
ಭಾರತದ ಎಲ್ಲ ದೇಶ ವಿರೋಧಿಗಳನ್ನು ನಿವಾರಿಸುವಂತೆ ಹಾಗೂ ಅಪವಿತ್ರ ಭಾವನೆಗಳನ್ನು ಹೊಂದಿರುವ ಜನರಿಂದ ವಿಶ್ವವಿದ್ಯಾನಿಲಯ ಮತ್ತು ದೇಶವನ್ನು ಶುದ್ಧೀಕರಿಸುವಂತೆ ಶ್ರೀರಾಮ ಹಾಗೂ ಮಾ ಭಗವತಿಯಲ್ಲಿ ಪ್ರಾರ್ಥನೆ ಮಾಡ ಲಾಗುವುದೆಂದು ಅಭಿಯಾನದ ಆಮಂತ್ರಣ ತಿಳಿಸಿತ್ತು.
ಹಿಂದೂ ಸೇನಾದ ವಿಷ್ಣು ಗುಪ್ತ ಹಾಗೂ ಹಿಂದೂ ಜಾಗರಣ ಅಭಿಯಾನದ ಜಿತೇಂದರ್ ಖುರಾನಾ ಅಭ್ಯಾಗತರ ಪಟ್ಟಿಯಲ್ಲಿದ್ದರು.
ಎಚ್‌ವಿಎಸ್ ಮೊದಲು ಪೂಜೆಗಳನ್ನು ಏರ್ಪಡಿಸಿತ್ತು. ತಮಗೆ ಯಾವುದೇ ಗುಂಪಿನಿಂದ ಪ್ರತಿರೋಧ ಎದುರಾಗಲಿಲ್ಲವೆಂದು ಸದಸ್ಯ ಅಜಿತ್ ಕುಮಾರ್ ಹಾಗೂ ಅಧ್ಯಕ್ಷ ಅನುರಾಗ್ ಕುಮಾರ್ ತಿಳಿಸಿದರು. ಹಿಂದೂ ಸೇನಾ ಹಿಂಸಾಚಾರದ ಕುಖ್ಯಾತಿ ಗಳಿಸಿದೆ. ಆದರೆ, ಕ್ಯಾಂಪಸ್‌ನಲ್ಲಿ ಯಾವುದೇ ಹಿಂಸಾಚಾರ ನಡೆಯದೆಂದು ಕುಮಾರ್ ಹಾಗೂ ಗುಪ್ತಾ ಭರವಸೆ ನೀಡಿದ್ದರು. ಜೆಎನ್‌ಯು ಪ್ರತಿಯೊಂದು ಧರ್ಮವನ್ನೂ ಗೌರವಿಸುವ ಸ್ಥಳವಾಗಿದೆಯೆಂಬ ಭಾವನೆಯನ್ನು ತಾವು ಎಲ್ಲರಲ್ಲೂ ಮೂಡಿಸುತ್ತೇವೆಂದು ಅವರು ಹೇಳಿದ್ದರು.
ತಾವು ದೇಶ ವಿರೋಧಿ ಘೋಷಣೆಗಳಿಗೆ ಬೆಂಬಲ ನೀಡುವುದಿಲ್ಲ. ಆದರೆ, ಆ ಕಾರ್ಯ ಕ್ರಮದ ಪರಿಣಾಮವನ್ನು ಅನುಭವಿಸ ಬೇಕಾಗಿದೆಯೆಂದು ಕುಮಾರ್ ತಿಳಿಸಿದರು.
ಇದೇ ವೇಳೆ, ಎಡ ಪಂಥೀಯ ವಿದ್ಯಾರ್ಥಿ ಗಳು ಅದೇ ವಿದ್ಯಾರ್ಥಿನಿಲಯದಲ್ಲಿ ಊಟದ ಬಳಿಕ ‘ಪನಾಮಾ ಪೇಪರ್ಸ್’ ಕುರಿತಾಗಿ ಸಾರ್ವಜನಿಕ ಸಭೆಯೊಂದನ್ನು ನಡೆಸಿದ್ದರು.







