ಗುಜರಾತ್ ಪ್ರಭಾರ ಡಿಜಿಪಿಯಾಗಿ ಪಾಂಡೆ
ಅಹ್ಮದಾಬಾದ್, ಎ.16: ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಹಿರಿಯ ಐಪಿಎಸ್ ಅಧಿಕಾರಿ ಪಿ.ಪಿ. ಪಾಂಡೆ, ಗುಜರಾತ್‌ನ ಪ್ರಭಾರ ಪೋಲಿಸ್ ಮಹಾ ನಿರ್ದೇಶಕ ರಾಗಿ ನೇಮಕಗೊಂಡಿದ್ದಾರೆ. ಹಾಲಿ ಡಿಜಿಪಿ ಯಾಗಿದ್ದ ಪಿ.ಸಿ. ಠಾಕೂರ್‌ರನ್ನು ದಿಲ್ಲಿಗೆ ವರ್ಗಾಯಿಸಲಾಗಿದೆಯೆಂದು ರಾಜ್ಯದ ನಿಯಂತ್ರಣ ಕೊಠಡಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಖಾಯಂ ಡಿಜಿಪಿ ನೇಮಕಾತಿಯ ಮುಂದಿನ ಘೋಷಣೆಯವರೆಗೆ ಪಿ.ಪಿ. ಪಾಂಡೆ ಡಿಜಿಪಿಯ ಹೆಚ್ಚುವರಿ ಹೊಣೆ ವಹಿಸಿಕೊಳ್ಳಲಿರುವರೆಂದು ಶುಕ್ರವಾರ ತಡರಾತ್ರಿ ನಿಯಂತ್ರಣ ಕೊಠಡಿಗೆ ತಿಳಿಸಲಾಗಿತ್ತೆಂದು ಅಜ್ಞಾತವಾಗುಳಿಯ ಬಯಸಿದ ಅಧಿಕಾರಿ ಹೇಳಿದ್ದಾರೆ.
ಪಾಂಡೆ, ಡಿಜಿಪಿ ದರ್ಜೆಯ ಐಪಿಎಸ್ ಅಧಿಕಾರಿಯಾಗಿದ್ದಾರೆ. ಅವರು ಹಾಲಿ ರಾಜ್ಯದ ಭ್ರಷ್ಟಾಚಾರ ತಡೆ ಬ್ಯೂರೊದ ನಿರ್ದೇಶಕರಾಗಿದ್ದಾರೆ.
ಇಶ್ರತ್ ಜಹಾನ್ ಪ್ರಕರಣದಲ್ಲಿ ಜಾಮೀನು ದೊರೆತ ಬಳಿಕ 2015ರಲ್ಲಿ ಅವರನ್ನು ಸೇವೆಗೆ ಮರುಸೇರ್ಪಡೆ ಮಾಡಲಾಗಿತ್ತು.
2013ರಿಂದ ಡಿಜಿಪಿಯಾಗಿದ್ದ ಠಾಕೂರ್‌ರನ್ನು ದಿಲ್ಲಿಯಲ್ಲಿ ನಾಗರಿಕ ರಕ್ಷಣೆ ಹಾಗೂ ಹೋಂ ಗಾರ್ಡ್ಸ್ ಮಹಾ ನಿರ್ದೇಶಕರಾಗಿ ಕೇಂದ್ರ ಗೃಹ ಸಚಿವಾಲಯ ನೇಮಿಸಿದೆ.





