16.5 ಕೋ.ರೂ. ವೆಚ್ಚದಲ್ಲಿ ಉಡುಪಿ ನಗರಸಭೆ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ: ಮೀನಾಕ್ಷಿ
ಉಡುಪಿ, ಎ.16: ನಗರದ ಹಳೆ ತಾಲೂಕು ಕಚೇರಿ ಜಾಗದಲ್ಲಿ ಉಡುಪಿ ನಗರಸಭೆಗೆ 16.5 ಕೋಟಿ ರೂ. ವೆಚ್ಚದಲ್ಲಿ ಮೂರು ಅಂತಸ್ತಿನ ಸುಸಜ್ಜಿತ ನೂತನ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ನೀಡುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಈಗಿರುವ ಕಚೇರಿಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ತಿಳಿಸಿದ್ದಾರೆ.
ಉಡುಪಿ ನಗರಸಭಾ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಿನ ಜೋಡಣೆ, ಕಟ್ಟಡ ಪರವಾನಿಗೆ, ಉದ್ದಿಮೆ ಪರವಾನಿಗೆ, ಖಾತೆ ಬದಲಾವಣೆ ಮತ್ತು ನಾಗರಿಕ ದೂರು ದಾಖಲಿ ಸುವ ಸೇವೆಗಳನ್ನು ಆನ್‌ಲೈನ್ ಮೂಲಕ ಒದಗಿಸಲಾ ಗುತ್ತದೆ. ಆಡಳಿತವನ್ನು ಚುರುಕುಗೊಳಿ ಸಲು ಪ್ರತಿ ತಿಂಗಳು ಶಾಸಕರನ್ನು ಒಳಗೊಂಡ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ, ಪ್ರತಿ 15 ದಿನಗಳಿಗೊಮ್ಮೆ ನಗರಸಭೆಯ ಶಾಖಾವಾರು ಸಭೆಗಳನ್ನು ನಡೆಸಲಾಗುವುದು ಎಂದರು.
ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯ ಮಲ್ಪೆಯಲ್ಲಿ ಸಮುದ್ರ ಕೊರೆತ ತಡೆಗೋಡೆ ನಿರ್ಮಾಣ ಕಾಮಗಾರಿಗೆ 3 ಕೋಟಿ ರೂ. ಹಾಗೂ ಪಡುಕೆರೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆ ಕಾಮಗಾರಿಗೆ ಹೆಚ್ಚುವರಿಯಾಗಿ 50 ಲಕ್ಷ ರೂ. ಕಾಯ್ದಿರಿಸಲಾಗಿದೆ ಎಂದು ಹೇಳಿದರು.
ಕೊಂಡಕೂರು ಬಬ್ಬುಸ್ವಾಮಿ ದೈವಸ್ಥಾನದ ಬಳಿ ಕಲ್ಸಂಕ ತೋಡಿಗೆ 50 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ, 75 ಲಕ್ಷ ರೂ. ವೆಚ್ಚದಲ್ಲಿ ಕಲ್ಸಂಕ ಸೇತುವೆ ವಿಸ್ತರಣೆ ಹಾಗೂ 25 ಲಕ್ಷ ರೂ. ವೆಚ್ಚದಲ್ಲಿ ಸುಬ್ರಹ್ಮಣ್ಯನಗರ ವಾರ್ಡ್‌ನ ಕಂಬಳಕಟ್ಟೆಯಲ್ಲಿ ಕಿರು ಸೇತುವೆ ನಿರ್ಮಾಣ ಕಾಮಗಾರಿ ಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದವರು ತಿಳಿಸಿದರು.
ಉಡುಪಿ ನಗರಸಭೆಯ ನೀರು ಸರಬರಾಜು ಯೋಜ ನೆಗೆ 35 ಕೋಟಿ ರೂ. ಹಾಗೂ ಒಳಚರಂಡಿ ಯೋಜನೆಗೆ 50 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ. ಈ ಯೋಜನೆ ಡಿಪಿಆರ್ ಹಂತದಲ್ಲಿದೆ. 14ನೆ ಹಣಕಾಸು ಯೋಜನೆಯಲ್ಲಿ ಕೊಡವೂರು ಪಾಳೆಕಟ್ಟೆ ಬಾಚನಬೈಲಿನಲ್ಲಿ ಎರಡು ಲಕ್ಷ ಲೀಟರ್ ಸಾಮರ್ಥ್ಯದ ಜಲ ಸಂಗ್ರಹಣಾಗಾರ ನಿರ್ಮಾಣ ಕಾಮಗಾರಿಯನ್ನು ನಡೆಸಲಾಗುವುದು ಎಂದವರು ತಿಳಿಸಿದರು.
‘ಅಮೃತ್’ ಯೋಜನೆಯಡಿ ಪೆರಂಪಳ್ಳಿ-ಶೀಂಬ್ರ ಬಳಿ ಅಣೆಕಟ್ಟು ಮತ್ತು ನೀರು ಶುದ್ಧೀಕರಣ ಘಟಕಕ್ಕೆ 88 ಕೋ.ರೂ., ಒಳಚರಂಡಿ ಯೋಜನೆಗೆ 17.74 ಕೋ.ರೂ., ಭುಜಂಗ ಪಾರ್ಕ್ ಆವರಣ ಗೋಡೆ ನಿರ್ಮಾಣಕ್ಕೆ ಒಂದು ಕೋ.ರೂ., ಕಲ್ಸಂಕ ಮಳೆನೀರು ಹರಿಯುವ ತೋಡಿಗೆ 5 ಕೋ.ರೂ. ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.
2 ಕೋಟಿ ರೂ. ವೆಚ್ಚದಲ್ಲಿ ಕರ್ವಾಲಿನ ಘನತ್ಯಾಜ್ಯ ನಿರ್ವಹಣಾ ಕೇಂದ್ರದಲ್ಲಿ ಹೆಚ್ಚುವರಿ ವಿಂಡ್ರೋ ಕಾಂಪೊಸ್ಟ್ ಶೆಡ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಿಂದ ನಗರಸಭೆ ವ್ಯಾಪ್ತಿಯಲ್ಲಿ ಮನೆ ಮತ್ತು ನಿವೇಶನ ಕಳೆದುಕೊಂಡ ಕುಟುಂಬಗಳಿಗೆ ಪುತ್ತೂರು ಗ್ರಾಮದಲ್ಲಿ 1.05 ಎಕರೆ ಮನೆ ನಿವೇಶನ ನೀಡಲು ನಿರ್ಧರಿಸಲಾಗಿದೆ. ಶಿವಳ್ಳಿ ಗ್ರಾಮದ 1.90 ಎಕರೆ ಜಾಗ ವನ್ನು ನಗರಾಶ್ರಯ ಯೋಜನೆಯಡಿ ಮನೆ ನಿವೇಶನ ಹಂಚಲು ಕ್ರಮ ಕೈಗೊಳ್ಳಲಾಗಿದೆ ಎಂದವರು ತಿಳಿಸಿದರು.
ಸಂತೆಕಟ್ಟೆಯಲ್ಲಿ 148.32 ಲಕ್ಷ ರೂ. ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣವೊಂದನ್ನು ನಿರ್ಮಾಣ ಮಾಡಲಾಗುವುದು. ಪಿಪಿಸಿ ರಸ್ತೆಯ ಸುಸಜ್ಜಿತ ಮೀನು ಮಾರುಕಟ್ಟೆ ಪಾರ್ಕಿಂಗ್ ಸ್ಥಳದಲ್ಲಿ 9.92 ಲಕ್ಷ ರೂ. ವೆಚ್ಚದಲ್ಲಿ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಡಲ್ಟ್ ಯೋಜನೆಯಡಿ ಮಣಿಪಾಲ ಸಿಂಡಿಕೇಟ್ ಸರ್ಕಲ್‌ನಿಂದ ಡಿಸಿ ಕಚೇರಿವರೆಗಿನ ರಸ್ತೆ ಸುಂದರೀಕಣಕ್ಕೆ ಮತ್ತು ಸಿಟಿ ಬಸ್, ಮಣಿಪಾಲ, ಮಲ್ಪೆಯಲ್ಲಿ ನವೀಕೃತ ಬಸ್ ನಿಲ್ದಾಣದ ನಿರ್ಮಿಸಲು ಡಿಪಿಆರ್ ತಯಾರಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಸಂಧ್ಯಾ, ಸದಸ್ಯರಾದ ಜನಾರ್ದನ ಭಂಡಾರ್ಕರ್, ರಮೇಶ್ ಕಾಂಚನ್, ಸೆಲಿನಾ ಕರ್ಕಡ, ಪೌರಾಯುಕ್ತ ಡಿ. ಮಂಜುನಾಥಯ್ಯ ಮೊದಲಾದವರು ಉಪಸ್ಥಿತರಿದ್ದರು.
ಯುಪಿಸಿಎಲ್‌ಗೆ ಶುದ್ಧೀಕರಿಸಿದ ನೀರು
ನಿಟ್ಟೂರಿನಲ್ಲಿರುವ ನಗರಸಭೆಯ ಕೊಳಚೆ ನೀರು ಘಟಕದಿಂದ ಶುದ್ಧೀಕರಿಸಿದ ನೀರನ್ನು ಯುಪಿಸಿಎಲ್‌ಗೆ ಒದಗಿಸಲು ಈಗಾಗಲೇ ಪ್ರಾರಂಭಿಕ ಹಂತದ ಮಾತುಕತೆ ನಡೆಸಲಾಗಿದೆ. ಇದರ ಜೊತೆಗೆ ಕಾಪು ಪುರಸಭೆಯ ನೀರನ್ನು ಕೂಡ ಪೈಪ್‌ಲೈನ್‌ನಲ್ಲಿ ಸರಬರಾಜು ಮಾಡಲಾಗುತ್ತದೆ ಎಂದು ಮೀನಾಕ್ಷಿ ಮಾಧವ ಬನ್ನಂಜೆ ತಿಳಿಸಿದರು.
ಬೀದಿಬದಿ ವ್ಯಾಪಾರಸ್ಥರಿಗೆ ವಲಯಗಳನ್ನು ಗುರುತಿಸಿ ಮೂಲಭೂತ ಸೌಕರ್ಯಗಳಾದ ಶೌಚಾಲಯ, ನೀರು, ಬೆಳಕಿನ ವ್ಯವಸ್ಥೆ ಹಾಗೂ ಶೇಖರಣಾ ಸ್ಥಳ ಒದಗಿಸಲು ಈಗಾಗಲೇ ಹಲವೆಡೆ ಸ್ಥಳಗಳನ್ನು ಗುರುತಿಸಲಾಗಿದೆ ಎಂದರು.







