ಕುಕ್ಕೆ ರಾಜ್ಯದ ನಂ.1 ಶ್ರೀಮಂತ ದೇವಸ್ಥಾನ
ಸುಬ್ರಹ್ಮಣ್ಯ, ಎ.16: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ರಾಜ್ಯದ ಮುಜರಾಯಿ ದೇವಳಗಳಲ್ಲೇ ಅತ್ಯಂತ ಶ್ರೀಮಂತ ದೇವಸ್ಥಾನವಾಗಿದ್ದು, ದೇವಾಲಯದ 2015-2016ರ ವಾರ್ಷಿಕ ಆದಾಯವು ಬರೋಬ್ಬರಿ 89 ಕೋ.ರೂ.ಗೆ ಏರಿಕೆಯಾಗಿದೆ.
2014-2015ನೆ ಸಾಲಿನಲ್ಲಿ 77 ಕೋಟಿ ರೂ. ಆದಾಯವಿತ್ತು. ಈ ವರ್ಷ 88,83,54,674 ರೂ.ಗೆ ಏರಿಕೆಯಾಗಿದೆ. ಮೂರು ಪ್ರಮುಖ ಸೇವೆಯಿಂದ 18 ಕೋ.ರೂ. ಆದಾಯ ಸುಬ್ರಹ್ಮಣ್ಯ ದೇವಳದಲ್ಲಿ ಮುಖ್ಯ ಸೇವೆಗಳಾದ ಆಶ್ಲೇಷ ಬಲಿ, ನಾಗಪ್ರತಿಷ್ಠೆ, ಸರ್ಪ ಸಂಸ್ಕಾರ ಸೇವೆಗಳು ಗಣನೀಯವಾಗಿ ಏರಿಕೆಯಾಗಿದೆ. ಆಶ್ಲೇಷ ಬಲಿಯಲ್ಲಿ 5,95,70,400 ರೂ.ಆದಾಯ, ನಾಗ ಪ್ರತಿಷ್ಠೆ ಸೇವೆಯಲ್ಲಿ 1,12,70,000 ಆದಾಯ, ಸರ್ಪ ಸಂಸ್ಕಾರ ಸೇವೆಯಿಂದ 11,02,59,500 ರೂ. ಆದಾಯ ಬಂದಿದೆ. ಆದಾಯಕ್ಕೆ ಸಂಬಂಧಿಸಿದಂತೆ ಕಾಣಿಕೆಯಿಂದ 9,84,677, ಕಾಣಿಕೆ ಡಬ್ಬಿಯಿಂದ 19,91,96,906, ವಿವಿಧ ಹರಕೆ ಸೇವೆಯಿಂದ 36,33,82,845, ಕಟ್ಟಡ ಮತ್ತು ಛತ್ರ ಬಾಡಿಗೆಯಿಂದ 3,27,67,613, ಕೃಷಿ ಮೂಲಗಳಿಂದ 23,44,495 ಹಾಗೂ ನಿರಖು ಠೇವಣಿ ಬಡ್ಡಿಯಿಂದ 18,25,45,759 ರೂ. ಬಂದಿದೆ. ಚಿನ್ನ ಮತ್ತು ಬೆಳ್ಳಿ ಹರಕೆಯ ಆದಾಯ ಪ್ರತ್ಯೇಕವಾಗಿದೆ.
ಇದು ಈ ಆದಾಯದಲ್ಲಿ ಸೇರಿಲ್ಲ ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ಪೂವಪ್ಪ ಪತ್ರಿಕೆಗೆ ತಿಳಿಸಿದ್ದಾರೆ. ಪ್ರತೀ ವರ್ಷ ಕೋಟಿ ಕೋಟಿ ಆದಾಯವು ಮುಜರಾಯಿ ಇಲಾಖೆಗೆ ಹೋಗುತ್ತಿದ್ದರೂ, ಸುಬ್ರಹ್ಮಣ್ಯದ ಮೂಲಭೂತ ಆವಶ್ಯಕತೆಗಳಾದ ಕುಡಿಯುವ ನೀರಿನ ಯೋಜನೆ, ಒಳಚರಂಡಿ ಯೋಜನೆ ಸೇರಿದಂತೆ ಮಾಸ್ಟರ್ ಪ್ಲಾನ್ ಕಾಮಗಾರಿಗಳು ಆಮೆನಡಿಗೆಯಲ್ಲಿ ಸಾಗುತ್ತಿರುವುದು ವಿಪರ್ಯಾಸವಾಗಿದೆ.





