ಜಪಾನ್: ಕ್ಯುಶು ದ್ವೀಪದಲ್ಲಿ ಇನ್ನೊಂದು ಭೀಕರ ಭೂಕಂಪ: ಮೃತರ ಒಟ್ಟು ಸಂಖ್ಯೆ ಕನಿಷ್ಠ 32

ಕ್ಯುಶು ದ್ವೀಪದಲ್ಲಿ ಶನಿವಾರ ಸಂಭವಿಸಿದ ಎರಡನೆ ಭೂಕಂಪದಿಂದಾಗಿ ಮಶಿಕಿ ಪಟ್ಟಣದ ಪ್ರದೇಶವೊಂದರ ಮನೆಗಳು ಕುಸಿದಿರುವುದು.
ಮಶಿಕ (ಜಪಾನ್), ಎ. 16: ಜಪಾನ್ನ ಕ್ಯುಶು ದ್ವೀಪದ ಕುಮಾಮೋಟೊ ವಲಯದಲ್ಲಿ ಗುರುವಾರ ಸಂಭವಿಸಿದ ಭೀಕರ ಭೂಕಂಪದ ಪರಿಣಾಮಗಳು ತಣಿಯುವ ಮುನ್ನವೇ, ಶನಿವಾರ ಅದೇ ವಲಯದಲ್ಲಿ ಮತ್ತೊಂದು ಭೀಕರ ಭೂಕಂಪ ಸಂಭವಿಸಿದೆ.
ಭೂಕಂಪದ ಬೆನ್ನಲ್ಲೇ ಕ್ಯುಶು ದ್ವೀಪದ ಪಶ್ಚಿಮ ಕರಾವಳಿಗಾಗಿ ಜಪಾನ್ ಹವಾಮಾನ ಇಲಾಖೆ ಸುನಾಮಿ ಎಚ್ಚರಿಕೆಯನ್ನು ಹೊರಡಿಸಿತು. ಆದರೆ, ಬಳಿಕ ಅದನ್ನು ಹಿಂದಕ್ಕೆ ಪಡೆದುಕೊಳ್ಳಲಾಯಿತು.
ಶನಿವಾರ ಮುಂಜಾನೆ 1.25ಕ್ಕೆ ಸಂಭವಿಸಿದ ರಿಕ್ಟರ್ ಮಾಪಕದಲ್ಲಿ 7.3ರಷ್ಟಿದ್ದ ಭೂಕಂಪವು ಈವರೆಗೆ ಕನಿಷ್ಠ 22 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಹಲವಾರು ಮಂದಿ ಕುಸಿದ ಮನೆಗಳು ಮತ್ತು ಕಟ್ಟಡಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಹಾಗೂ ಸಾವಿರಾರು ಮಂದಿ ವ್ಯಾಯಾಮಶಾಲೆಗಳು ಮತ್ತು ಹೊಟೇಲ್ನ ಲಾಬಿಗಳಲ್ಲಿ ಆಶ್ರಯ ಪಡೆದಿದ್ದಾರೆ. ಇದರೊಂದಿಗೆ ಎರಡೂ ಭೂಕಂಪಗಳಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ ಕನಿಷ್ಠ 29ಕ್ಕೇರಿದೆ. 1,500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಗುರುವಾರ ರಾತ್ರಿ ಕ್ಯುಶು ದ್ವೀಪದಲ್ಲಿ ರಿಕ್ಟರ್ ಮಾಪಕದಲ್ಲಿ 6.5ರ ತೀವ್ರತೆ ಹೊಂದಿದ್ದ ಭೂಕಂಪ ಸಂಭವಿಸಿತ್ತು. ಆ ಭೂಕಂಪದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದರು ಹಾಗೂ 800ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಎರಡನೆ ಭೂಕಂಪದ ಬೆನ್ನಿಗೇ ಹಲವಾರು ಪಶ್ಚಾತ್ ಕಂಪನಗಳು ಸಂಭವಿಸಿದವು. ಅವುಗಳ ಪೈಕಿ ಇಂದು ಬೆಳಗ್ಗೆ ಸಂಭವಿಸಿದ ಒಂದು ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.4 ಆಗಿತ್ತು.
ಶನಿವಾರ ಮುಂಜಾನೆ ಸಂಭವಿಸಿದ ಭೂಕಂಪ ಪ್ರಧಾನ ಭೂಕಂಪವಾಗಿರಬೇಕು, ಗುರುವಾರ ಸಂಭವಿಸಿದ್ದು ಅದರ ಪೂರ್ವಭಾವಿ ಸೂಚನೆಯಾಗಿದ್ದಿರಬಹುದು ಎಂದು ಜಪಾನ್ನ ಹವಾಮಾನ ಸಂಸ್ಥೆ ಅಭಿಪ್ರಾಯಪಟ್ಟಿದೆ.
ಈ ಭೂಕಂಪಗಳು ಸಮುದ್ರ ತಳದಿಂದ ಕೇವಲ 10 ಕಿ.ಮೀ. ಆಳದಲ್ಲಿ ಸಂಭವಿಸಿವೆ ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ಸಾವು-ನೋವು, ನಾಶ-ನಷ್ಟ ಸಂಭವಿಸಿದೆ
1,600ಕ್ಕೂ ಅಧಿಕ ಸೈನಿಕರನ್ನು ರಕ್ಷಣಾ ಕಾರ್ಯಗಳಿಗೆ ನಿಯೋಜಿಸಲಾಗಿದೆ. ಶನಿವಾರ ಮುಂಜಾನೆ ಸಂಭವಿಸಿದ ಭೂಕಂಪದ ಪರಿಣಾಮ ಇನ್ನಷ್ಟು ಭೀಕರವಾಗಿರುವ ಸಾಧ್ಯತೆಯಿದೆ ಎಂದು ಪ್ರಧಾನಿ ಶಿಂರೊ ಅಬೆ ಹೇಳಿದ್ದಾರೆ.
400 ವರ್ಷಗಳ ಕೋಟೆಯಲ್ಲಿ ಬಿರುಕು
ಟೋಕಿಯೊ, ಎ. 16: ದಕ್ಷಿಣ ಜಪಾನ್ನ ಕ್ಯುಶು ದ್ವೀಪದಲ್ಲಿ ಗುರುವಾರ ಮತ್ತು ಶನಿವಾರ ಸಂಭವಿಸಿದ ಭಾರೀ ಭೂಕಂಪಗಳಿಂದಾಗಿ ಐತಿಹಾಸಿಕ ಕುಮಾಮೋಟೊ ಕೋಟೆಯ ಗೋಡೆಗಳು ಬಿರುಕು ಬಿಟ್ಟಿವೆ.
ನಾಲ್ಕು ಶತಮಾನಗಳನ್ನು ಕಂಡಿರುವ ಈ ಕೋಟೆಯು ಈ ಮೊದಲು ಬಾಂಬ್ ದಾಳಿ ಮತ್ತು ಬೆಂಕಿಯನ್ನು ಎದುರಿಸಿಯೂ ಅಲ್ಲಾಡದೆ ನಿಂತಿತ್ತು.
ಕುಮಾಮೋಟೊ ಕೋಟೆಯನ್ನು ಕಟ್ಟಿದ್ದು ಕಿಯೋಮಸ ಕಟೊ 1607ರಲ್ಲಿ. ದೊರೆಯಾಗಿದ್ದ ಆತ ಸೇನಾ ಶಕ್ತಿಯ ಮೇಲೆ ನಂಬಿಕೆಯಿಟ್ಟವನಾಗಿದ್ದ. ಒಂದು ಶತಮಾನದ ಯುದ್ಧದಿಂದ ಜರ್ಜರಿತವಾಗಿದ್ದ ಜಪಾನ್ನ ಏಕೀಕರಣವನ್ನು ಅವನು ಕೈಗೆತ್ತಿಕೊಂಡಿದ್ದ.
ಕೋಟೆಯ ಕಲ್ಲಿನ ಗೋಡೆಯೊಂದರ ಬೃಹತ್ ಭಾಗವೊಂದು ಕುಸಿದಿರುವುದನ್ನು ಟೆಲಿವಿಷನ್ ಚಾನೆಲೊಂದು ಶನಿವಾರ ತೋರಿಸಿದೆ.







