ಗುತ್ತಿಗಾರು: ಮಹಿಳೆಯ ಕೊಲೆ, ಚಿನ್ನಾಭರಣ ದರೋಡೆ
ಸುಬ್ರಹ್ಮಣ್ಯ, ಎ.16: ಹಾಡಹಗಲೇ ಮಹಿಳೆ ಯೋರ್ವರನ್ನು ಬರ್ಬರವಾಗಿ ಕೊಲೆಗೈದು ಮನೆಯೊಳಗಿದ್ದ ಚಿನ್ನಾ ಭರಣಗಳನ್ನು ದೋಚಿ ದುಷ್ಕ ರ್ಮಿಗಳು ಪರಾರಿಯಾದ ಘಟನೆ ಗುತ್ತಿಗಾರು ಸಮೀಪದ ಬೆರ್ಗೊಡಿಯಲ್ಲಿ ಸಂಭವಿಸಿದೆ.
ದೇರಪಜ್ಜನ ಮನೆ (ಬೆರ್ಗೋಡಿ)ಯ ನಿವಾಸಿ ಕೃಷಿಕ ಜಯರಾಮ ಎಂಬವರ ಪತ್ನಿ ವೇದಾವತಿ (45) ಎಂಬವರು ಮೃತಪಟ್ಟ ಮಹಿಳೆ.
ಶನಿವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಕೃತ್ಯ ನಡೆದಿದೆ. ಮಹಿಳೆಯ ಅಳಿಯ ಅಪರಾಹ್ನ 3 ಗಂಟೆ ಸುಮಾರಿಗೆ ಮನೆಗೆ ಬಂದಿದ್ದು, ಬಾಗಿಲು ತೆರೆದು ಒಳ ಪ್ರವೇಶಿಸಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಮನೆಯೊಳಗೆ ವೇದಾವತಿಯವರ ಮೃತದೇಹ ರಕ್ತದ ಮಡುವಿನಲ್ಲಿ ಅಡುಗೆ ಕೋಣೆಯಲ್ಲಿ ಬಿದ್ದಿರುವುದು ಕಂಡುಬಂದಿದ್ದು, ಕೂಡಲೇ ಅವರು ಜಯರಾಮ ಹಾಗೂ ಅಕ್ಕಪಕ್ಕದವರಿಗೆ ಮಾಹಿತಿ ನೀಡಿದ್ದಾರೆ.
ಮೃತ ಮಹಿಳೆಯ ಪತಿ ಜಯರಾಮ ಕಾರ್ಯಕ್ರಮ ನಿಮಿತ್ತ ಹೊರಗಡೆ ತೆರಳಿದ್ದರು. ಇಬ್ಬರು ಪುತ್ರರಾದ ಪ್ರಜ್ವಲ್ ಮತ್ತು ಪ್ರಫುಲ್ ವಿದ್ಯಾಭ್ಯಾಸಕ್ಕಾಗಿ ಹೊರಗಡೆ ಉಳಿದಿದ್ದು, ಹೆಚ್ಚಿನ ಸಮಯದಲ್ಲಿ ಮನೆಯಲ್ಲಿ ವೇದಾವತಿ ಒಬ್ಬರೇ ಇರುತ್ತಿದ್ದರು. ಮನೆಗೆ ಕೆಲಸಕ್ಕೆಂದು ಪಕ್ಕದ ಕೂಲಿ ಕಾರ್ಮಿಕ ದಂಪತಿ ಬರುತ್ತಿದ್ದು, ಘಟನೆ ನಡೆದ ಶನಿವಾರ ಬೆಳಗ್ಗೆ ಅವರು ನಿತ್ಯದ ಮನೆ ಕೆಲಸ ಮುಗಿಸಿ ಕಾರ್ಯಕ್ರಮಕ್ಕೆ ತೆರಳಿದ್ದರು.
ಜನವಸತಿ ಇಲ್ಲದ ಪ್ರದೇಶದಲ್ಲಿ ನಡೆದ ಕೊಲೆ ಘಟನೆಯಿಂದ ಸ್ಥಳೀಯ ನಾಗರಿಕರು ಭಯಭೀತರಾಗಿದ್ದಾರೆ. ಪರಿಚಯಸ್ಥರೇ ಕೃತ್ಯದಲ್ಲಿ ಶಾಮೀಲಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚುವರಿ ತನಿಖೆಗಾಗಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಆಗಮಿಸಿದ್ದು ತನಿಖೆ ಮುಂದುವರಿದಿದೆ. ಸುಳ್ಯ ವೃತ್ತ ನಿರೀಕ್ಷಕ ಕೃಷ್ಣಯ್ಯ, ಸುಬ್ರಹ್ಮಣ್ಯ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಸಂಜಯ್ ಕಲ್ಲೂರ ಸ್ಥಳದಲ್ಲಿದ್ದು ತನಿಖೆ ನಡೆಸುತ್ತಿದ್ದಾರೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







