10 ಕೋ.ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ
ಕೊರಗ ಹಾಡಿಯಲ್ಲಿ ಆಂಜನೇಯ ಗ್ರಾಮ ವಾಸ್ತವ್ಯ
ಮುಲ್ಕಿಯ ಕೆರೆಕಾಡು ಕೊರಗರ ಹಾಡಿಯಲ್ಲಿ ಶುಕ್ರವಾರ ಗ್ರಾಮವಾಸ್ತವ್ಯ ಮಾಡಿದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಇಂದು ಕೊರಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ 10 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದರು. ಶುಕ್ರವಾರ ಬೆಳಗ್ಗಿನಿಂದ ಇಂದು ಬೆಳಗ್ಗಿನವರೆಗೆ ಕೆರೆಕಾಡುವಿನಲ್ಲಿ ಕೊರಗ ಸಮುದಾಯದ ಜತೆಗಿದ್ದು, ರಾತ್ರಿ ಕೊರಗ ಮಹಿಳೆ ಬೇಬಿಯವರ ಮನೆಯಲ್ಲಿ ವಾಸ್ತವ್ಯ ಮಾಡಿ ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಶೇಷ ಪ್ಯಾಕೇಜ್ ಪ್ರಕಟಿಸಿದರು. ಜಿಲ್ಲೆಯ ಕೊರಗರ ಸರ್ವತೋಮುಖ ಅಭಿವೃದ್ಧಿ ಹಾಗೂ ಕೊರಗ ಕಾಲನಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಈ 10 ಕೋಟಿರೂ.ಗಳ ವಿಶೇಷ ಅನುದಾನವನ್ನು ಬಳಸಲಾಗುವುದು ಎಂದು ಅವರು ಹೇಳಿದರು. ದ.ಕ. ಜಿಲ್ಲೆಯ ಹಾಗೂ ಉಡುಪಿಯ ತಲಾ 200ರಂತೆ ಒಟ್ಟು 400 ಮಂದಿ ಕೊರಗ ಜನಾಂಗದವರ ಮನೆ ದುರಸ್ತಿ/ಸ್ನಾನಗೃಹ ನಿರ್ಮಾಣಕ್ಕೆ ಪ್ರತೀ ಫಲಾನುಭವಿಗೆ ತಲಾ 25 ಸಾವಿರ ರೂ.ನಂತೆ 1 ಕೋಟಿ ರೂ. ಅನುದಾನ ಮಂಜೂರು ಮಾಡಿರುವುದಾಗಿಯೂ ಅವರು ಈ ಸಂದರ್ಭ ತಿಳಿಸಿದರು. ಕೊರಗ ಜನಾಂಗದವರ ಬೇಡಿಕೆಯಂತದೆ ಈ ಹಿಂದೆ ಹೊಸ ಮನೆಗಳ ನಿರ್ಮಾಣಕ್ಕೆ ನಿಗದಿಯಾಗಿದ್ದ 2 ಲಕ್ಷ ರೂ.ಗಳ ಘಟಕ ವೆಚ್ಚವನ್ನು 3 ಲಕ್ಷ ರೂ.ಗಳಿಗೆ ಏರಿಸುವ ಬಗ್ಗೆ ಪರಿಶೀಲಿಸಲಾಗುವುದು.
ಸುಮಾರು ಆರು ಲಕ್ಷ ರೂ.ಗಳ ಘಟಕ ವೆಚ್ಚದಲ್ಲಿ ಕೆರೆಕಾಡು ಕೊರಗ ಕಾಲನಿ ಮತ್ತು ಅಕ್ಕಪಕ್ಕದ ನಿವಾಸಿಗಳಿಗೆ ಅನುಕೂಲವಾಗುವಂತೆ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರು ಮಾಡಲಾಗಿದೆ ಎಂದು ಸಚಿವ ಆಂಜನೇಯ ಹೇಳಿದರು. ಆಂದೋಲನ ರೂಪದಲ್ಲಿ ಕೊರಗರಿಗೆ ನಿವೇಶನ ಖಾತೆ ವಿತರಣೆ: ಹಲವಾರು ವರ್ಷಗಳಿಂದ ಮನೆ ನಿವೇಶನ ಖಾತೆಗಳು ಪಡೆಯದಿರುವ ಕೊರಗ ಜನಾಂಗದವರಿಗೆ ಒಂದು ತಿಂಗಳೊಳಗೆ ವಿಶೇಷ ಆಂದೋಲನ ರೂಪದಲ್ಲಿ ಖಾತೆ ಮಾಡಿ ಕೊಡಲು ಜಿಲ್ಲಾಡಳಿತಕ್ಕೆ ನಿರ್ದೇಶಿಸಲಾಗಿದೆ. ಅರ್ಜಿ ಬಾಕಿ ಇರುವವರನ್ನು ತಕ್ಷಣ ಇತ್ಯರ್ಥಗೊಳಿಸುವುದು ಹಾಗೂ ಅರ್ಜಿ ಹಾಕದೆ ಇರುವವರನ್ನು ಗುರುತಿಸಿ ಖಾತೆ ನೀಡಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸಚಿವ ಆಂಜನೇಯ ತಿಳಿಸಿದರು. ಅರಣ್ಯವಾಸಿಗಳಿಗೆ ಹಕ್ಕುಪತ್ರ ವಿತರಣೆಗೆ ಸೂಚನೆ: ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರಗಳಿಗೆ ಅರ್ಜಿ ಸಲ್ಲಿಸಿ ಸರಿಯಾದ ದಾಖಲೆ ಸಲ್ಲಿಸದೆ ತಿರಸ್ಕೃತ ಗೊಂಡಿರುವ ಅರ್ಜಿಗಳನ್ನು ಮರು ಪರಿಶೀಲನೆ ಮಾಡಿ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 133 ಎಕರೆ ಭೂಮಿಯಲ್ಲಿ 121 ಮಂದಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದು ಅವರು ಈಸಂದರ್ಭ ತಿಳಿಸಿದರು.
ಕೊರಗ ಸಮುದಾಯದ ವಿದ್ಯಾವಂತರು ಉದ್ಯೋಗ ವಂಚಿತರಾಗಿದ್ದರೆ ಅವರಿಗೆ ಎರಡು ವರ್ಷಗಳವರೆಗೆ ನಿರುದ್ಯೋಗ ಭತ್ತೆ ನೀಡುವ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು. ಪಡುಪಣಂಬೂರು ಗ್ರಾಮದ ಪರಿಶಿಷ್ಟ ಪಂಗಡದ ಕಾಲನಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ವಿಶೇಷವಾಗಿ ಪಡುಪಣಂಬೂರು ಗ್ರಾಪಂಗೆ ಸೇರಿದ ಪರಿಶಿಷ್ಟ ವರ್ಗಗಳ ಕಾಲನಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು 1 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಸಚಿವರು ಹೇಳಿದರು. ಕೆರೆಕಾಡು ಕೊರಗ ಕಾಲನಿಯಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಚೆಕ್ ನೀಡಲಾಗಿದ್ದು, ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಗುಣಮಟ್ಟ ಕಾಪಾಡುವಂತೆಯೂ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ಕೊಡಲಾಗಿದೆ. ಸಮುದಾಯದ ಭವನಕ್ಕೆ ಹಣದ ಕೊರತೆ ಇಲ್ಲವಾಗಿದ್ದು, ಜನಸಂಖ್ಯೆಯ ಆಧಾರದಲ್ಲಿ ಸರಕಾರದ ಹಣ ಪೋಲಾಗದಂತೆ ಗಮನ ಹರಿಸಿ ಸದ್ಯ ಕೆರೆಕಾಡು ಸಮುದಾಯ ಭವನಕ್ಕೆ 12 ಲಕ್ಷ ರೂ. ಮಂಜೂರು ಮಾಡಿರುವುದಾಗಿ ಸಚಿವ ಆಂಜನೇಯ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಜಿಲ್ಲೆಯ ಕೊರಗ ಜನಾಂಗದವರ ಕುಲಕಸುಬು ಅಭಿವೃದ್ಧಿ ಪಡಿಸಿ ಉತ್ತಮ ಜೀವನಕ್ಕೆ ಪೂರಕವಾಗಿ ಕೌಶಲ್ಯ ತರಬೇತಿ ನೀಡುವಂತೆ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಗೆ ನಿರ್ದೇಶನ ನೀಡಲಾಗಿದೆ. ಕೊರಗ ವಿದ್ಯಾರ್ಥಿಗಳು ತಾಲೂಕು ಮತ್ತು ಜಿಲ್ಲಾ ಕೇಂದ್ರಗಳ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಲು ಅನುಕೂಲವಾಗುವಂತೆ ಸಮುದಾಯದ ಎಲ್ಲಾ ವಿದ್ಯಾರ್ಥಿಗಳಿಗೆ ಈ ತಿಂಗಳಿನಿಂದಲೇ ಉಚಿತ ಬಸ್‌ಪಾಸ್ ನೀಡಲು ನಿರ್ದೇಶಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಕೆಲ್ಲಕೆರೆ ಕೊರಗ ಕಾಲನಿಯಲ್ಲಿ ಬಾಕ್ಸ್ ಚರಂಡಿ ನಿರ್ಮಾಣಕ್ಕೆ 25 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದೆ. ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಬಾಂಜಾರು ಮಲೆಯ ಮಲೆಕುಡಿಯ ಕಾಲನಿಯ ಸಂಪರ್ಕ ರಸ್ತೆ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಸಚಿವ ಆಂಜನೇಯ ವಿವರಿಸಿದರು.
ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಗೆ ಕ್ರಮ
2005-06ನೆ ಸಾಲಿನಲ್ಲಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ (ಐಟಿಡಿಪಿ) ಯಲ್ಲಿ ಆಗಿರುವ ಅವ್ಯವಹಾರಕ್ಕೆ ಸಂಬಂಧಿಸಿ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಆಂಜನೇಯ, ಅಮಾಯಕರ ಅನುದಾನವನ್ನು ದುರುಪಯೋಗಪಡಿಸಿದ ಅಧಿಕಾರಿಗಳ ವಿರುದ್ಧ ಉನ್ನತ ಮಟ್ಟದ ಅಧಿಕಾರಿಗಳನ್ನು ಕರೆಸಿ ತನಿಖೆ ನಡೆಸಲಾಗುವುದು ಹಾಗೂ ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ನೀಡಲಾಗುವುದು ಎಂದು ಸಚಿವ ಆಂಜನೇಯ ಉತ್ತರಿಸಿದರು. 2007ರಲ್ಲಿ ಐಟಿಡಿಪಿ ಯೋಜನೆಯಡಿ ಗಿರಿಜನರ ಸಮಸ್ಯೆಗಳಿಗೆ ಕ್ಷಿಪ್ರವಾಗಿ ಸ್ಪಂದಿಸಲು ಅನುಕೂಲವಾಗುವಂತೆ ವಾಹನವನ್ನು ಮಂಜೂರು ಮಾಡಿದ್ದು, ಅದು ಅನ್ಯ ಕಾರ್ಯಗಳಿಗೆ ಉಪಯೋಗವಾಗುತ್ತಿರುವ ಬಗ್ಗೆ ಸಚಿವರ ಗಮನ ಸೆಳೆದಾಗ, ವಾಹನವನ್ನು ಯಾವ ಉದ್ದೇಶಕ್ಕಾಗಿ ಒದಗಿಸಲಾಗಿದೆಯೇ ಅದಕ್ಕಾಗಿಯೇ ಬಳಸಬೇಕು ಹಾಗೂ ಪ್ರಸ್ತುತ ಅದನ್ನು ಉಪಯೋಗಿಸುತ್ತಿರುವವರಿಂದ ಹಿಂದಕ್ಕೆ ಪಡೆಯಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಸಚಿವ ಆಂಜನೇಯ ತಾಕೀತು ಮಾಡಿದರು.
ಪೌಷ್ಟಿಕ ಆಹಾರದ ಜತೆ 1 ಲೀಟರ್ ತುಪ್ಪ
ಕೊರಗ ಸಮುದಾಯದ ಜನಸಂಖ್ಯೆ ತೀವ್ರವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ ಮಲೆಕುಡಿಯ ಮತ್ತು ಕೊರಗ ಸಮುದಾಯಗಳಿಗೆ ವರ್ಷದ ಆರು ತಿಂಗಳು ಪೌಷ್ಟಿಕ ಆಹಾರ ನೀಡುವ ಯೋಜನೆ ಜಾರಿಯಲ್ಲಿದೆ. ಇದೀಗ ಇತರ ಪಡಿತರ ಸಾಮಗ್ರಿಗಳ ಜತೆ 1 ಲೀಟರ್ ತುಪ್ಪವನ್ನು ಒದಗಿಸಲು ನಿರ್ದೇಶಿಸಲಾಗಿದೆ. ಈ ಪೌಷ್ಟಿಕ ಆಹಾರ ವಿತರಣೆಗಾಗಿ ದ.ಕ. ಜಿಲ್ಲೆಯಲ್ಲಿ 4.5 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂದು ಸಚಿವ ಆಂಜನೇಯ ತಿಳಿಸಿದರು.
ಮಾಧ್ಯಮಗಳ ಬಗ್ಗೆ ಮೆಚ್ಚುಗೆ..
ತಮ್ಮ ಗ್ರಾಮ ವಾಸ್ತವ್ಯದ ವರದಿ ಪಡೆಯಲು ಎಲ್ಲಾ ಪತ್ರಿಕೆಗಳನ್ನು ತಿರುವಿಹಾಕಿದ ಸಚಿವರು, ಸಾಮಾಜಿಕ ಕ್ರಾಂತಿ, ಸಾಮರಸ್ಯ ಮತ್ತು ಸಮಾನತೆಯ ಉದ್ದೇಶದಿಂದ ಸಮಸ್ಯೆಗಳನ್ನು ಹುಡುಕುತ್ತಾ ಸರಕಾರವೇ ಜನರೆಡೆಗೆ ಧಾವಿಸುವ ಉದ್ದೇಶದಿಂದ ಗ್ರಾಮ ವಾಸ್ತವ್ಯ ಮಾಡಿರುವುದಾಗಿ ಇದೇ ವೇಳೆ ತಿಳಿಸಿದ ಅವರು, ಪತ್ರಿಕೆಗಳ ವರದಿಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.