‘ಕುದ್ಮುಲ್’ ಸ್ಮಾರಕ ಸಭಾಭವನ ಜಾಗಕ್ಕೆ ಆಂಜನೇಯ ಭೇಟಿ

ಮಂಗಳೂರು, ಎ.16: ಕುದ್ಮುಲ್ ರಂಗರಾವ್ ಸ್ಮಾರಕ ಸಭಾಭವನ ನಿರ್ಮಾಣವಾಗುತ್ತಿರುವ ಬಾಬುಗುಡ್ಡೆ ಪ್ರದೇಶಕ್ಕೆ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ಈ ಸಭಾಭವನಕ್ಕೆ ಸಚಿವ ಆಂಜನೇಯರವರು ಸಮಾಜ ಕಲ್ಯಾಣ ಇಲಾಖೆಯಿಂದ 1 ಕೋ.ರೂ. ಬಿಡುಗಡೆಗೊಳಿಸಿದ್ದು, ಮತ್ತೆ 1ಕೋಟಿ ರೂ. ಪಾಲಿಕೆಯ ನಿಧಿಯಿಂದ ಮಂಜೂರುಗೊಂಡಿದೆ.
ಈ ಸಂದರ್ಭ ಮಾತನಾಡಿದ ಸಚಿವರು, ಕುದ್ಮುಲ್ ರಂಗರಾವ್ ಅಸ್ಪಶ್ಯತೆಯ ವಿರುದ್ಧ ಹೋರಾಡಿದ ಮಹಾನ್ ನಾಯಕರಾಗಿದ್ದಾರೆ. ಇದೇ ಪ್ರದೇಶದಲ್ಲಿ ಕುದ್ಮುಲ್ ರಂಗರಾವ್ ಅವರ ಸಮಾಧಿಯನ್ನು ಅಭಿವೃದ್ಧಿಪಡಿಸಲು ಸರಕಾರ ಚಿಂತನೆ ನಡೆಸಿದೆ. ಸಮಾಧಿ ಅಭಿವೃದ್ಧಿಗಾಗಿ ಅಗತ್ಯ ಅನುದಾನವನ್ನು ಒದಗಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ಹೇಳಿದ ಸಚಿವ ಆಂಜನೇಯ, ಸಮಾಧಿ ಇರುವ ಜಾಗದಲ್ಲಿ ಪಾರ್ಕ್‌ನ್ನು ನಿರ್ಮಿಸುವ ಬಗ್ಗೆಯೂ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಸಕ ಜೆ.ಆರ್.ಲೋಬೊ, ಮನಪಾ ಆಯುಕ್ತ ಗೋಪಾಲಕೃಷ್ಣ, ಸಮಾಜ ಕಲ್ಯಾಣ ಅಧಿಕಾರಿ ಸಂತೋಷ್ ಕುಮಾರ್, ಕಾರ್ಪೊರೇಟರ್ ಶೈಲಜಾ, ಕುದ್ಮುಲ್ ರಂಗರಾವ್ ಸಮಿತಿಯ ಶ್ರೀಧರ್, ಶ್ಯಾಂ ಕರ್ಕೇರ, ಕಾಂಗ್ರೆಸ್‌ನ ಪ್ರಮುಖರಾದ ಟಿ.ಕೆ.ಸುಧೀರ್, ಅರುಣ್ ಕುವೆಲ್ಲೊ, ಡೆನಿಸ್ ಡಿಸಿಲ್ವ, ರಮಾನಂದ ಪೂಜಾರಿ, ಮುಹಮ್ಮದ್ ನವಾಝ್, ಅಶೋಕ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.





