ಅಮಾಯಕನನ್ನು ಕೊಂದು, ಮೂವರನ್ನು ಗಂಭೀರಗೊಳಿಸಿದ ಬಿಎಂಡಬ್ಲ್ಯು ಮಾಲಕ ಪಿಸ್ತೂಲು ತೋರಿಸಿ ಪರಾರಿ

ನೊಯ್ಡ: ವೇಗವಾಗಿ ಬಂದ ಬಿಎಂಡಬ್ಲ್ಯು ಕಾರು ಇಬ್ಬರು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಆತನ ಸಾವಿಗೆ ಕಾರಣವಾಗಿದೆ. ಘಟನೆಯಲ್ಲಿ ಇತರ ಮೂವರು ತೀವ್ರ ಗಾಯಗೊಂಡಿದ್ದಾರೆ. ಈ ಘಟನೆ ನಡೆದದ್ದು 22 ಸೆಕ್ಟರ್ ನೊಯ್ಡಾದಲ್ಲಿ. ಜೀವ ಕಳೆದುಕೊಂಡವರು ಗುಲ್ಫಮ್ ಅಲಿ (25). ಗಾಯಾಳುಗಳು ಅನ್ವರ್ ಅಲಿ (21), ಜೋಗಿಂದರ್ ಸಿಂಗ್ (44) ಹಾಗೂ ಪ್ರೇಮ್‌ಸಿಂಗ್ (26). ವಿನೋದ್ ಎಂಬಾತ ಹಂತಕ ಚಾಲಕ.
ಪಾನಮತ್ತನಾಗಿದ್ದ ವಿನೋದ್, ಇತರ ಕಾರುಗಳನ್ನು ಹಿಂದಿಕ್ಕಿ ವೇಗವಾಗಿ ಕರು ಚಲಾಯಿಸುತ್ತಿದ್ದ. ಆತನ ನಿಯಂತ್ರಣ ತಪ್ಪಿ, ಬೈಕ್‌ಗೆ ಡಿಕ್ಕಿ ಹೊಡೆಯಿತು. ಘಟನೆಯಲ್ಲಿ ಮೂವರು ಗಾಯಗೊಂಡರು. ಈ ಹಂತದಲ್ಲಿ ಕೂಡಾ ಬ್ರೇಕ್ ಪ್ರಯೋಗಿಸಲು ವಿನೋದ್ ವಿಫಲವಾದ್ದರಿಂದ ಕಾರು ನಿಂತಿದ್ದ ಹುಂಡೈ ಅಸೆಂಟ್ ಕಾರಿಗೆ ಡಿಕ್ಕಿ ಹೊಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ದಾರಿಹೋಕರು ಗುಂಪು ಸೇರಿದಾಗ ಜನರಿಗೆ ಪಿಸ್ತೂಲ್ ತೋರಿಸಿ ಹೆದರಿಸಿದ ಎಂದು ಹೇಳಲಾಗಿದೆ. ತಕ್ಷಣ ಆಗಮಿಸಿದ ಮತ್ತೊಂದು ಕಾರಿನಲ್ಲಿ ಅಪಘಾತ ಮಾಡಿದ ಕಾರಿನ ಚಾಲಕ ಪರಾರಿಯಾದ ಎಂದು ಪ್ರತ್ಯಕ್ಷದರ್ಶಿ ಸಮೀರ್ ವಿವರಿಸಿದ್ದಾರೆ. ಪೊಲೀಸರು ಬಿಎಂಡಬ್ಲ್ಯು ವಾಹನ ವಶಪಡಿಸಿಕೊಂಡಿದ್ದಾರೆ.
ವಿನೋದ್ ಸೆಕ್ಟರ್ 22ನ ಮಯೂರ್ ವಿಹಾರ್‌ನಲ್ಲಿ ಜಿಮ್ ನಡೆಸುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಗಾಯಾಳು ಗುಲ್ಫಮ್ ಅವರನ್ನು ಸಪ್ಧರ್‌ಜಂಗ್ ಆಸ್ಪತ್ರೆಗೆ ಕರೆ ತರುವ ವೇಳೆಗೆ ಆತ ಮೃತಪಟ್ಟಿದ್ದರು. ಇತರ ಗಾಯಾಳುಗಳೂ ಗಂಭೀರ ಸ್ಥಿತಿಯಲ್ಲಿದ್ದಾರೆ.





