ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ : ಎರಡನೇ ಹಂತದ ಮತದಾನ ಆರಂಭ
ಮತದಾನದ ವೇಳೆ ಅಲ್ಲಲ್ಲಿ ಹಿಂಸಾಚಾರ; ಮೂವರಿಗೆ ಗಾಯ

ಕೋಲ್ಕತಾ, ಎ.17: ಪಶ್ಚಿಮ ಬಂಗಾಳದಲ್ಲಿ ಎರಡನೆ ಹಂತದ ವಿಧಾನಸಭಾ ಚುನಾವಣೆ ರವಿವಾರ ಬೆಳಗ್ಗೆ ಆರಂಭಗೊಂಡಿದೆ.
ಪಶ್ಚಿಮ ಬಂಗಾಳದ 56 ಕ್ಷೇತ್ರಗಳಿಗೆ ವಿಧಾನಸಭೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಇಂದು ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದೆ.
ಮತದಾನದ ವೇಳೆ ಅಲ್ಲಲ್ಲಿ ಹಿಂಸಾಚಾರ ನಡೆದ ಬಗ್ಗೆ ವರದಿಯಾಗಿದೆ. ಬಿರ‍್ಬಮ್ ಮತಗಟ್ಟೆಯ ಬಳಿ ಟಿಎಂಸಿ, ಸಿಪಿಐ(ಎಂ) ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
56 ಕ್ಷೇತ್ರಗಳಿಗೆ ಎರಡನೆ ಹಂತದ ಚುನಾವಣೆ ನಡೆಯುತ್ತಿದ್ದು, 1.22 ಕೋಟಿ (1,21,74,947) ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. 33 ಮಹಿಳೆಯರು ಸೇರಿದಂತೆ 383 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಮತದಾನ ಪ್ರಕ್ರಿಯೆಗೆ 13,645 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಅಲಿಪುರದೌರ್ ಜಿಲ್ಲೆಯ 5 ಕ್ಷೇತ್ರಗಳು, ಜಲ್ಪೈಗುರಿ 7, ಉತ್ತರ ದೀನಜ್ಪುರ 9, ಡಾರ್ಜಿಲಿಂಗ್ 6, ದಕ್ಷಿಣ ದೀನಜ್ಪುರ 6, ಮಾಲ್ಡಾದ 12 ಹಾಗೂ ದಕ್ಷಿಣ ಬಂಗಾಳ ಜಿಲ್ಲೆದ 11 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದಲ್ಲಿ ಎಪ್ರಿಲ್ 4 ಮತ್ತು 11 ರಂದು ಎರಡು ದಿನಗಳ ಚುನಾವಣೆ ನಡೆದಿದೆ. ಎ.21, 25, 30 ಹಾಗೂ ಮೇ 5 ರಂದು ಉಳಿದ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.







