ಭಟ್ಕಳದ ಎಸ್.ಎಂ.ಸೈಯದ್ ಖಲೀಲ್‌ರಿಗೆ ‘ಯುರೋಪಿಯನ್ ಪ್ರೊಫೆಶನಲ್ ಡಾಕ್ಟರೇಟ್’

ದುಬೈ, ಎ.17: ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಆರ್ಥಿಕ ತಜ್ಞ, ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳ ರಂಗದ ಮುಂದಾಳು ಭಟ್ಕಳದ ಎಸ್.ಎಂ.ಸೈಯದ್ ಖಲೀಲ್ ಅವರಿಗೆ ಪ್ರತಿಷ್ಠಿತ ಯುರೋಪಿಯನ್ ವಿವಿಯಿಂದ ಡಾಕ್ಟರೇಟ್ ಪದವಿ ನೀಡಲಾಗಿದೆ. ಐಯರ್‌ಲ್ಯಾಂಡ್‌ನ ಆಲ್ಡರ್ಸ್‌ಗೇಟ್ ಕಾಲೇಜಿನಿಂದ ನೀಡಲಾಗುವ ‘ಯುರೋಪಿಯನ್ ಪ್ರೊಫೆಶನಲ್ ಡಾಕ್ಟರೇಟ್’ ಅನ್ನು ದುಬೈಯ ಅಟ್ಲಾಂಟಿಸ್‌ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸೈಯದ್ ಖಲೀಲ್ ಅವರಿಗೆ ಪ್ರದಾನ ಮಾಡಲಾಯಿತು.
ಭಟ್ಕಳದ ಪ್ರಪ್ರಥಮ ಚಾರ್ಟೆಂಡ್ ಅಕೌಂಟೆಂಟ್ ಆಗಿರುವ ಎಸ್.ಎಂ. ಸೈಯದ್ ಖಲೀಲ್ ಅವರು ಆರ್ಥಿಕ ವಿಷಯಗಳಲ್ಲಿ ಪರಿಣತಿ ಹೊಂದಿದ್ದಾರೆ. ಅವರು ಭಾರತದ ಹಾಗೂ ಗಲ್ಫ್ ದೇಶಗಳ ಪ್ರತಿಷ್ಠಿತ ಕಂಪೆನಿಗಳಲ್ಲಿ ಪ್ರಧಾನ ವ್ಯವಸ್ಥಾಪಕ, ನಿರ್ದೇಶಕ, ಆರ್ಥಿಕ ನಿರ್ದೇಶಕ ಹಾಗೂ ಮುಖ್ಯ ಸಲಹೆಗಾರರಾಗಿ ನಾಲ್ಕೈದು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಭಟ್ಕಳದ ಪ್ರತಿಷ್ಠಿತ ಅಂಜುಮನ್ ಶಿಕ್ಷಣ ಸಂಸ್ಥೆಗಳ ಹಾಗೂ ಅನಿವಾಸಿ ಭಟ್ಕಳಿಗರ ಸಂಸ್ಥೆಯಾಗಿರುವ ರಾಬಿತಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಸೈಯದ್ ಖಲೀಲ್, ಈಗ ಆ ಸಂಸ್ಥೆಗಳ ಪೋಷಕರಾಗಿದ್ದಾರೆ. ಮಹಿಳೆಯರಿಗೆ ಶಿಕ್ಷಣ ನೀಡುವುದನ್ನು ಪ್ರತಿಪಾದಿಸುವ ಅವರು ಈ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ.
ಮಂಗಳೂರಿನ ಮಾಧ್ಯಮ ಕಮ್ಯುನಿಕೇಶನ್ಸ್‌ನ ಅಧ್ಯಕ್ಷರಾಗಿರುವ ಸೈಯದ್ ಖಲೀಲ್ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹತ್ತು ಹಲವು ಗೌರವ, ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.





