ನೇತಾಜಿಯ ಕಾರು ಚಾಲಕ 116ರ ಹರೆಯದ ನಿಝಾಮುದ್ದೀನ್ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ

ಮುಬಾರಕ್‌ಪುರ, ಎ.17: ನೇತಾಜಿ ಸುಭಾಷ್ ಚಂದ್ರ ಬೋಷ್ ಅವರ ಕಾರು ಚಾಲಕ ಮತ್ತು ಅಂಗರಕ್ಷಕನಾಗಿದ್ದ ಕರ್ನಲ್ ನಿಝಾಮುದ್ದೀನ್ ಈಗ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ. 116 ರ ಹರೆಯದ ನಿಝಾಮುದ್ದೀನ್ ಅವರು ಬ್ಯಾಂಕ್ ಖಾತೆ ತೆರೆಯಲು ಅರ್ಜಿ ಸಲ್ಲಿಸುವ ಮೂಲಕ ಇದೀಗ ಸುದ್ದಿಗೆ ಗುದ್ದು ನೀಡಿದ್ದಾರೆ.
ಉತ್ತರ ಪ್ರದೇಶದ ಮುಬಾರಕ್‌ಪುರದ ಧ್ವಾಕ್ವಾ ಗ್ರಾಮದ ನಿವಾಸಿ ನಿಝಾಮುದ್ದೀನ್ ಅಲಿಯಾಸ್ ಸೈಫುದ್ದೀನ್ ಭಾರತೀಯ ಸ್ಟೇಟ್ ಬ್ಯಾಂಕ್‌ನ ಶಾಖೆಯೊಂದರಲ್ಲಿ ತನ್ನ ಪತ್ನಿ ಜೊತೆ ಜಂಟಿ ಬ್ಯಾಂಕ್ ತೆರೆದಿದ್ದಾರೆ. ಬ್ಯಾಂಕ್ ಖಾತೆ ತೆರೆಯುವ ವೇಳೆ ಮತದಾರರ ಗುರುತಿನ ಚೀಟಿ ಮತ್ತು ಪಾಸ್‌ಪೋರ್ಟ್ ಹಾಜರುಪಡಿಸಿದ್ದಾರೆ. ಈ ದಾಖಲೆ ಪತ್ರದ ಮೂಲಕ ನಿಝಾಮುದ್ದೀನ್ 1900ನೆ ಇಸ್ವಿಯಲ್ಲಿ ಜನಿಸಿರುವುದು ತಿಳಿದು ಬಂದಿದೆ.
ಕಳೆದ ಫೆಬ್ರವರಿಯಲ್ಲಿ ಜಪಾನ್‌ನ 114ರ ಹರೆಯದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಅವರು ಜಗತ್ತಿನ ಹಿರಿಯ ವ್ಯಕ್ತಿ ಎಂದು ಹೇಳಲಾಗಿತ್ತು. ಆದರೆ ಅವರಿಗಿಂತ ಹಿರಿಯ ವ್ಯಕ್ತಿ ಭಾರತದ ನಿಝಾಮುದ್ದೀನ್. ನಿಝಾಮುದ್ದೀನ್ ಈಗ ಜಗತ್ತಿನ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ. ರವಿವಾರಕ್ಕೆ ಅವರ ವಯಸ್ಸು 116 ವರ್ಷ, 3 ತಿಂಗಳು ಹಾಗೂ 15 ದಿನಗಳು.
ನಿಝಾಮುದ್ದೀನ್ ಪತ್ನಿ ಅಜ್ಬುನ್ನಿಶಾ ಕೂಡಾ ಶತಾಯುಷಿ. ಅವರ ವಯಸ್ಸು 107 ವರ್ಷ. ನಿಝಾಮುದ್ದೀನ್ ಮತ್ತು ಅಜ್ಬುನ್ನಿಶಾ ದಂಪತಿ ಎಸ್ ಬಿಐನಲ್ಲಿ ಜಂಟಿ ಖಾತೆ ತೆರೆದಿದ್ದಾರೆ.
ಸ್ಥಳೀಯರು ಹಾಗು ಜಿಲ್ಲಾಡಳಿತ ಕರ್ನಲ್ ನಿಝಾಮುದ್ದೀನ್ ಈಗ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾಗಿರುವ ಕುರಿತು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ .





