ಕೋಟಿ ರೂ.ಬೆಲೆಯ ಗಿಫ್ಟ್ ಕಾರನ್ನು ವಾಪಸ್ ನೀಡಿದ ಯಡಿಯೂರಪ್ಪ
ರೈಲಿನಲ್ಲಿ ಬರ ಅಧ್ಯಯನ ಪ್ರವಾಸ ನಿರ್ಧಾರ

ಬೆಂಗಳೂರು, ಎ.17: ಮಾಜಿ ಸಚಿವ ಮುರುಗೇಶ್ ನಿರಾಣಿ ನೀಡಿದ್ದ ಉಡುಗೊರೆ ಕೋಟಿ ರೂಪಾಯಿ ಬೆಲೆಯ ಐಶಾರಾಮಿ ಟೊಯೋಟಾ ಲ್ಯಾಂಡ್ ಕ್ರೂಸರ್ ಪ್ರಾಡೋ ಕಾರನ್ನು ಮಾಜಿ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ವಾಪಸ್ ನೀಡಿದ್ದಾರೆ.
ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೆ ಅವರಿಗೆ ರಾಜ್ಯ ಪ್ರವಾಸಕ್ಕಾಗಿ ಈ ಕಾರು ಸಿದ್ದವಾಗಿತ್ತು.
ಸುಮಾರು 1 ಕೋಟಿ 16 ಲಕ್ಷ ರುಪಾಯಿ ಬೆಲೆಯ ಈ ಲ್ಯಾಂಡ್ ಕ್ರೂಸರ್ ನ್ನು ವ್ಯಾಪಕ ಟೀಕೆಯ ಹಿನ್ನೆಲೆಯಲ್ಲಿ ಮುರುಗೇಶ್ ನಿರಾಣಿಗೆ ಹಿಂದಕ್ಕೆ ನೀಡಿರುವ ಯಡಿಯೂರಪ್ಪ ತಾನು ರೈಲಿನಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ನಿರಾಣಿ ಅವರು ಯಡಿಯೂರಪ್ಪ ಅವರಿಗೆ ನೀಡಲಾಗಿದ್ದ ಕಾರಿಗೆ ಬಿಜೆಪಿ ರಾಜ್ಯಾಧ್ಯಕ್ಷರ ‘ನೇಮ್ ಪ್ಲೇಟ್ ಅಳವಡಿಸಲಾಗಿತ್ತು. ಕೆಎ.03, ಎಂವೈ4545 ನಂಬರ್ ನಲ್ಲಿ ಕಾರು ನೊಂದಣಿಯಾಗಿತ್ತು. ಯಡಿಯೂರಪ್ಪ ಅವರಿಗೆ ನಿರಾಣಿ ಕಾರ್‌ನ್ನು ಗಿಫ್ಟ್ ಆಗಿ ನೀಡುತ್ತಿದ್ದಂತೆ ಈ ಬಗ್ಗೆ ಹಲವರಿಂದ ಆಕ್ಷೇಪ ವ್ಯಕ್ತವಾಗಿತ್ತು. "ಯಡಿಯೂರಪ್ಪ ಸುರಕ್ಷಿತವಾಗಿರಲಿ , ಚೆನ್ನಾಗಿರಲಿ ”ಎಂಬ ಉದ್ದೇಶದಿಂದ ಮಾಜಿ ಸಚಿವ ಮುರಗೇಶ್ ನಿರಾಣಿ ಕಾರು ಗಿಫ್ಟ್ ಕೊಟ್ಟಿದ್ದಾರೆ. ಲ್ಯಾಂಡ್ ಕ್ರೂಸರ್ ಗಿಫ್ಟ್ ಪಡೆದಿರುವುದರಲ್ಲಿ ತಪ್ಪೇನಿದೆ ಎಂದು ಅವರು ಯಡಿಯೂರಪ್ಪ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು.





