ಇಶ್ರತ್ ನಕಲಿ ಎನ್ ಕೌಂಟರ್ ನಲ್ಲಿ 19 ತಿಂಗಳು ಜೈಲಿನಲ್ಲಿದ್ದ ಪಾಂಡೆ ಈಗ ಗುಜರಾತ್ ಪೋಲಿಸ್ ಮುಖ್ಯಸ್ಥ !
ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿ

ಅಹ್ಮದಾಬಾದ್ , ಎ . 17 : ಇಷ್ರತ್ ಜಹಾನ್ ನಕಲಿ ಎನ್ ಕೌಂಟರ್ ಪ್ರಕರಣದ ಆರೋಪಿ , ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಪೃಥ್ವಿ ಪಾಲ್ ಪಾಂಡೆ ಈಗ ಗುಜರಾತ್ ಪೊಲೀಸ್ ಪಡೆಯ ಮುಖ್ಯಸ್ಥ !
ಆ ಪ್ರಕರಣದ ದೋಷಾರೋಪ ಪಟ್ಟಿಯಲ್ಲಿರುವ ಅತ್ಯಂತ ಹಿರಿಯ ಪೊಲೀಸ್ ಅಧಿಕಾರಿ ಎಂಬ ಕುಖ್ಯಾತಿಗೂ ಪಾತ್ರರಾಗಿರುವ ಪಾಂಡೆ ಶನಿವಾರ ಗಾಂಧೀ ನಗರದಲ್ಲಿ ರಾಜ್ಯ ಪೊಲೀಸ್ ಮುಖ್ಯಸ್ಥರಾಗಿ ಹೆಚ್ಚುವರಿ ಅಧಿಕಾರವನ್ನು ಸ್ವೀಕರಿಸಿದ್ದಾರೆ .
1980 ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಪಾಂಡೆ 2013 ರ ಜುಲೈ ಯಲ್ಲಿ ಇಷ್ರತ್ ಜಹಾನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಬಂಧಿತರಾಗಿದ್ದರು.19 ತಿಂಗಳ ಸೆರೆವಾಸದ ಬಳಿಕ 2015 ರ ಫೆಬ್ರವರಿಯಲ್ಲಿ ಅವರು ಬಿಡುಗಡೆಯಾಗಿದ್ದರು . ಪ್ರಕರಣ ಈಗಲೂ ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.
ಅವರ ಪಾಸ್ ಪೋರ್ಟ್ ಈಗಲೂ ವಿಶೇಷ ಸಿಬಿಐ ನ್ಯಾಯಾಲಯದ ವಶದಲ್ಲಿದೆ. ವಿದೇಶ ಪ್ರಯಾಣ ಮಾಡಲಿದೆ ಎಂಬ ಕಾರಣ ನೀಡಿ ಈಗ ಪಾಂಡೆ ಪಾಸ್ ಪೋರ್ಟ್ ಅನ್ನು ಮರಳಿಸಲು ಮನವಿ ಮಾಡಿದ್ದಾರೆ.
ದೇಶ ದ್ರೋಹದ ಆರೋಪದಲ್ಲಿ ಬಂಧಿತ ಪತಿದಾರ್ ಆಂದೋಲನದ ನಾಯಕ ಹಾರ್ದಿಕ್ ಪಟೇಲ್ ಅವರ ಬಿಡುಗಡೆಗೆ ಆಗ್ರಹಿಸಿ ನಡೆಯಲಿರುವ " ಜೈಲ್ ಭರೋ ಆಂದೋಲನ್ " ಅನ್ನು ನಿಭಾಯಿಸುವುದು ಅಧಿಕಾರ ಸ್ವೀಕರಿಸಿದ ಕೂಡಲೇ ಪಾಂಡೆ ಎದುರು ಇರುವ ಮೊದಲ ಸವಾಲು .
ಜೈಲಿನಿಂದ ಬಿಡುಗಡೆಯಾದ ಮೇಲೆ ಪಾಂಡೆಯನ್ನು ಮತ್ತೆ ಸೇವೆಗೆ ತೆಗೆದುಕೊಂಡ ಗುಜರಾತ್ ಸರಕಾರ ಅವರಿಗೆ ಡಿಜಿಪಿ ಸ್ಥಾನಕ್ಕೆ ಬಡ್ತಿ ನೀಡಿತು. ಈಗ ಅವರು ಭ್ರಷ್ಟಾಚಾರ ವಿರೋಧಿ ದಳದ ನಿರ್ದೇಶಕರಾಗಿದ್ದಾರೆ.
" ನಾನು ಕಳೆದ 35 ವರ್ಷಗಳಿಂದ ರಾಜ್ಯಕ್ಕೆ ಸಲ್ಲಿಸಿದ್ದೇನೆ. ಈಗ ನಾನು ನಿಯಮ ನೀತಿಗಳ ಅನ್ವಯ ಕೆಲಸ ಮಾಡುತ್ತೇನೆ . ಪೊಲೀಸರು ನಿಯಮದ ಪ್ರಕಾರ ನಡೆದುಕೊಂಡರೆ ಬೇರೇನೂ ಮಾಡಬೇಕಾದ ಅಗತ್ಯವಿಲ್ಲ " ಎಂದು ಪಾಂಡೆ ಹೇಳಿದ್ದಾರೆ .







