ಬರಪೀಡಿತ ಪ್ರದೇಶಗಳಲ್ಲಿ ಬಾವಿ ತೋಡುತ್ತಿರುವ 'ದೇಶದ್ರೋಹಿ' ಆಮಿರ್ ಖಾನ್

ಮುಂಬೈ, ಎ. 17: ತೀರಾ ಇತ್ತೀಚೆಗೆ ಅವರು ಬಿಜೆಪಿ ಮತ್ತು ಸಂಘ ಪರಿವಾರದ ಪಾಲಿಗೆ ದೇಶದ್ರೋಹಿಯಾಗಿದ್ದರು. ದೇಶ ಬಿಟ್ಟು ಪಾಕಿಸ್ತಾನಕ್ಕೆ ತೊಲಗು ಎಂದೂ ಅವರಿಗೆ ಹೇಳಲಾಯಿತು. ಈಗ ಅವರು ಮಹಾರಾಷ್ಟ್ರದ ತೀವ್ರ ಬರಪೀಡಿತ ಪ್ರದೇಶಗಳಲ್ಲಿ ತಮ್ಮ ಸತ್ಯ ಮೇವ ಜಯತೆ ತಂಡವನ್ನು ಕಟ್ಟಿ ಕೊಂಡು ಜನರಿಗೆ ನೆರವಾಗುತ್ತಾ ಅವರಲ್ಲಿ ನೀರು ಸಂರಕ್ಷಿಸಲು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅವರೇ ಸೂಪರ್ ಸ್ಟಾರ್ ಆಮಿರ್ ಖಾನ್.
ತಮ್ಮ ಪಾನೀ ಫೌಂಡೇಶನ್ ಮೂಲಕ ತೀವ್ರ ಬರಪೀಡಿತ ಮೂರು ಜಿಲ್ಲೆಗಳ ಗ್ರಾಮಗಳಲ್ಲಿ ಮೊದಲು ಬಾವಿ ತೋಡಿ ಬಳಿಕ ಜಲ ಸಂರಕ್ಷಣೆಯ ಜಾಗೃತಿ ಆಂದೋಲನವನ್ನು ಖುದ್ದು ಎದುರು ನಿಂತು ನಡೆಸುತ್ತಿದ್ದಾರೆ ಎಂದು ಎನ್ ಡಿ ಟಿ ವಿ ವರದಿ ಮಾಡಿದೆ. ಈ ಜಾಗೃತಿ ಅಭಿಯಾನದ ಮೊದಲ ಮೂರು ಸ್ಥಾನಿಗಳಿಗೆ ಆಮಿರ್ ಕ್ರಮವಾಗಿ 50 ಲಕ್ಷ ರೂಪಾಯಿ, 30 ಲಕ್ಷ ರೂಪಾಯಿ ಹಾಗೂ 20 ಲಕ್ಷ ರೂಪಾಯಿ ಮೌಲ್ಯದ ಬಹುಮಾನ ನೀಡಲಿದ್ದಾರೆ.
ನಟ ರಿತೇಶ್ ದೇಶ್‌ಮುಖ್, ಸಾಯಿ ತಮಾನ್ಕರ್, ರೀಮಾ ಲಾಗೂ, ಅತುಲ್ ಕುಲಕರ್ಣಿ ಹಾಗೂ ಆಮಿರ್ ರ ಮಾಜಿ ಪತ್ನಿ ರೀನಾ ದತ್ತ ಈ ಪ್ರಯತ್ನದಲ್ಲಿ ಆಮಿರ್ ಜೊತೆ ಇದ್ದಾರೆ. ನಟಿ ಸನ್ನಿ ಲಿಯೋನ್ ಕೂಡ ಈ ಅಭಿಯಾನದಲ್ಲಿ ಕೈ ಜೋಡಿಸಿದ್ದಾರೆ.
ರೀನಾ ದತ್ತ ಪಾನೀ ಫೌಂಡೇಶನ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದು ನಿರ್ದೇಶಕ ರಾಜ್ ಕುಮಾರ್ ಹಿರಾನಿ, ಉದ್ಯಮಿಗಳಾದ ಕುಮಾರ್ ಮಂಗಳಂ ಬಿರ್ಲಾ ಹಾಗೂ ಮುಖೇಶ್ ಅಂಬಾನಿ ಸಹಕರಿಸುತ್ತಿದ್ದಾರೆ.





