ನಿತೀಶ್‌ಕುಮಾರ್‌ರ ಸಂಘ ಮುಕ್ತ ಭಾರತ ಹೇಳಿಕೆಗೆ ಉತ್ತರಿಸಿದ ಆರೆಸ್ಸೆಸ್
ಇಂತಹ ಕನಸು ಕಂಡವರು ಸ್ವಯಂ ಮೂಲೆಗುಂಪಾಗಿದ್ದಾರೆ!

ಹೊಸದಿಲ್ಲಿ, ಎಪ್ರಿಲ್ 17: ಸಂಘಮುಕ್ತ ಭಾರತ ಎಂಬ ಕರೆ ನೀಡಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‌ರಿಗೆ ಆರೆಸ್ಸೆಸ್ ಮುಖಂಡ ರಾಕೇಶ್ ಸಿನ್ಹಾ ಉತ್ತರ ನೀಡಿದ್ದಾರೆ. ಇಂತಹ ಕನಸು ಕಂಡವರು ಇಂದು ಸ್ವತಃ ಮೂಲೆಯಲ್ಲಿದ್ದಾರೆ ಎಂದು ರಾಕೇಶ್ ಸಿನ್ಹಾ ಹೇಳಿರುವುದಾಗಿ ವರದಿಯಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಸಿಕ್ಕಿರುವ ಯಶಸ್ಸಿನಿಂದ ಉತ್ಸಾಹಿತರಾದ ಜೆಡಿಯುನ ಹೊಸ ಅಧ್ಯಕ್ಷ ನಿತೀಶ್ ಕುಮಾರ್ ಪಟ್ನಾದಲ್ಲಿ ಕಾರ್ಯಕ್ರಮವೊಂದರಲ್ಲಿ ಸಂಘ ಮುಕ್ತ ಭಾರತದ ಮಾತನ್ನಾಡುತ್ತಾ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಬಿಜೆಪಿಯೇತರ ಪಕ್ಷಗಳು ಒಗ್ಗೂಡಬೇಕೆಂದು ಕರೆ ನೀಡಿದ್ದರು. ಬಿಜೆಪಿ ಹಾಗೂ ಅದರ ವಿಭಾಜಕ ವಿಚಾರಧಾರೆಯ ವಿರುದ್ಧ ಒಗ್ಗೂಡುವುದೊಂದೇ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ಮಾರ್ಗವಾಗಿದೆ. ತಾನು ಯಾವುದೇ ವ್ಯಕ್ತಿ ಅಥವಾ ಪಕ್ಷದ ವಿರುದ್ಧವಿಲ್ಲ ಬದಲಾಗಿ ಸಂಘದ ವಿಭಾಜಕ ವಿಚಾರಧಾರೆಯ ವಿರುದ್ಧವಿದ್ದೇನೆ ಎಂದು ನಿತೀಶ್ ಕುಮಾರ್ ಹೇಳಿದ್ದರು. ನಿತೀಶ್‌ರ ಈ ಹೇಳಿಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಆರೆಸ್ಸೆಸ್ ಪ್ರಚಾರ್ ರಾಕೇಶ್ ಸಿನ್ಹಾ ನಿತೀಶ್ ಒಂದು ಸುಂದರ ಕನಸ್ಸನ್ನು ಕಾಣುತ್ತಿದ್ದಾರೆ.ಅದರಿಂದ ಅವರನ್ನು ಯಾರೂ ತಡೆಯುವುದಿಲ್ಲ. ಅವರಿಗೆ ಗೊತ್ತಿರಲಿ ಸಾಮ್ಯವಾದಿ (ಕಮ್ಯುನಿಸ್ಟ್ ಪಕ್ಷ)ಗುಂಪು ಸ್ವಾತಂತ್ರ್ಯದ ಸಮಯದಲ್ಲಿ ಇಂತಹ ಕನಸ್ಸು ಕಂಡಿವೆ. ಇವತ್ತು ಅವರೆಲ್ಲಿದ್ದಾರೆ ಈಗ ಎಂದು ಎಲ್ಲರಿಗೂ ಗೊತ್ತಿದೆ. ಆರೆಸ್ಸೆಸ್ ದೇಶದ ಸಂಸ್ಕೃತಿ ಮತ್ತು ಸಾಮಾಜಿಕತೆಯಲ್ಲಿ ತನ್ನನ್ನು ಗಟ್ಟಿಗೊಳಿಸಿದೆ ಮತ್ತು ಮಹತ್ವಪೂರ್ಣ ಕೊಡುಗೆ ನೀಡಿದೆ. ಅವರಿಗೆ ನೆನಪಿರಲಿ ಸಂಘದ ಊರುಗೋಲಿನಿಂದ ಅವರು ಇಲ್ಲಿವರೆಗೆ ತಲುಪಿದ್ದಾರೆ.
ಆರೆಸ್ಸೆಸ್ ಪ್ರಚಾರಕ್ ಸಿನ್ಹಾ ನಿತೀಶ್‌ರನ್ನು ಸಮಯಸಾಧಕ ಎಂದು ಕರೆದರಲ್ಲದೆ ಸಂಘ ಮುಕ್ತಭಾರತದ ಕನಸು ಕಾಣುತ್ತಾ ಕಾಣುತ್ತಾ ಕಮ್ಯುನಿಸ್ಟರು ಮತ್ತು ಸಮಾಜವಾದಿ ಆಂದೋಲನ ಮೂಲೆಗುಂಪಾಗಿವೆ. ನಿತೀಶ್‌ರಿಗೆ ಈ ವಾಸ್ತವಿಕತೆ ಅಪರಿಚತವೇ? ಎಂದು ಪ್ರಶ್ನಿಸಿರುವುದಾಗಿ ವರದಿಯಾಗಿದೆ.





