ನಾನು ಹೇಳಿದರೂ ನಿಯಮ ತಪ್ಪುವವಳಲ್ಲ ನನ್ನ ಮಗಳು : ಕೊಲ್ಲಂ DC ಶಾಹಿನಮೋಳ್ ಬಗ್ಗೆ ತಂದೆ ಅಬು
ಈಕೆಯ ಅಕ್ಕ DC , ಅಣ್ಣ SP

ಕೊಲ್ಲಂ: ಕೊಲ್ಲಂದ ದೇವಾಲಯದಲ್ಲಿ ಸುಡುಮದ್ದು ಪ್ರದರ್ಶನ ನಿಷೇಧಿಸಿ ದೇವಸ್ಥಾನ ಆಡಳಿತ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿ, ಕಾನೂನು ಜಾರಿಗೊಳಿಸಲು ವಿಫಲವಾದ ಬಗ್ಗೆ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡ ಕಾರಣಕ್ಕೆ ರಾಜ್ಯ ಸರ್ಕಾರದ ಅವಕೃಪೆಗೆ ಒಳಗಾಗಿ, ಪುಟ್ಟಿಂಗಾಲ್ ದೇವಾಲಯ ದುರಂತ ತಡೆಯಲು ವಿಫಲರಾದ ಬಗ್ಗೆ ಡಿಜಿಪಿಯಿಂದ ಆರೋಪಕ್ಕೆ ಈಡಾಗಿರುವ ಕೊಲ್ಲಂ ಜಿಲ್ಲಾಧಿಕಾರಿ ಎ.ಶಾಹಿನಾಮೋಳ್ ಈಗ ವಿವಾದದ ಕೇಂದ್ರಬಿಂದು.
ಆದರೆ ಈ ದಿಟ್ಟಮಹಿಳೆ ಯಾರ ನೆರವಿಗೂ ಎದುರು ನೋಡುತ್ತಿಲ್ಲ. ನಾಗರಿಕ ಸೇವೆಯ ಕುಟುಂಬ ಈಕೆಯ ಬೆನ್ನಹಿಂದಿದೆ. ಅಕ್ಕ ಶಾಲಿಯಾ (44) ಮುಂಬೈ ಜಿಲ್ಲಾಧಿಖಾರಿ. ಅಣ್ಣ ಅಕ್ಬರ್ (39) ಕೇರಳ ಕ್ರೈಬ್ರಾಂಚ್ ಎಸ್ಪಿ. ಆದ್ದರಿಂದ ಈಕೆಯ ಹುಟ್ಟೂರು ಅಲುವಾ ಜನ ಇವರ ಮನೆಯನ್ನು ಐಎಎಸ್ ಜಂಕ್ಷನ್ ಎಂದೇ ಕರೆಯುತ್ತಾರೆ. ತಂದೆ ಎಸ್.ಅಬು ನಿವೃತ್ತ ಶಾಲಾಶಿಕ್ಷಕ. ತಾಯಿ ಸುಲೇಖಾ ಗೃಹಿಣಿ. ಶಾಹಿನಾ ಅವರ ಸಹೋದ್ಯೋಗಿಗಳು ಆಕೆಯ ಬಿಚ್ಚು ನುಡಿ ಆಕೆಯ ವೃತ್ತಿಜೀವನಕ್ಕೆ ಮಾರಕ ಎಂಬ ಭೀತಿ ವ್ಯಕ್ತಪಡಿಸಿದ್ದರೂ, 74 ವರ್ಷದ ತಂದೆ ಮಾತ್ರ ಮುದ್ದಿನ ಕಿರಿಮಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ.
"ಶಾಹಿನಾ ಸದಾ ಅದನ್ನು ಇಷ್ಟಪಡುತ್ತಾಳೆ. ನಿಯಮಕ್ಕೆ ಸದಾ ಅಂಟಿಕೊಂಡಿರುತ್ತಾಳೆ. ಯಾರು ಹೇಳಿದರೂ, ಸ್ವತಃ ನಾನೇ ಹೇಳಿದರೂ ನನ್ನ ಮಕ್ಕಳ ನಿರ್ಧಾರ ಬದಲಿಸಲು ಸಾಧ್ಯವಿಲ್ಲ" ಎಂದು ಸಮಾಜ ಮತ್ತು ಇಂಗ್ಲಿಷ್ ಬೋಧಿಸುತ್ತಿದ್ದ ಅಬು ವಿವರಿಸುತ್ತಾರೆ.
ಕಳೆದ ವಾರ ಸ್ಫೋಟ ಸಂಭವಿಸಿದ ಬಳಿಕ ಶಾಹಿನಾ ಮಾಧ್ಯಮಗಳ ಜತೆ ಮಾತನಾಡಿ, "ನಾನು ಮುಸ್ಲಿಂ ಎಂಬ ಕಾರಣಕ್ಕೆ ಹಿಂದೂ ದೇವಸ್ಥಾನದಲ್ಲಿ ಸುಡುಮದ್ದು ಪ್ರದರ್ಶನ ನಿಷೇಧಿಸಿದ್ದೇನೆ ಎಂದು ಹೇಳಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ಜನರಿಗಾಗಿ ಕೆಲಸ ಮಾಡುತ್ತೇವೆ. ಹಿಂದೂ ಅಥವಾ ಮುಸ್ಲಿಮರಿಗಾಗಿ ಅಲ್ಲ" ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.







