ಇದು ಬಾಲಿವುಡ್ ರೀಲ್ ಸ್ಟೋರಿ ಅಲ್ಲ...ರಿಯಲ್ ಸ್ಟೋರಿ
ಎರಡು ದಶಕ ಬಳಿಕ ಕುಟುಂಬ ಸೇರಿಕೊಂಡ ಯುವತಿ

ಬೆಂಗಳೂರು: ಕೆಲ ಕಥೆಗಳು ನಿಮ್ಮನ್ನು ಬಾಲಿವುಡ್ ಕಥೆಯಂಥ ಹಗಲುಗನಸಿಗೆ ಜಾರಿದ್ದೇವೆಯೇನೂ ಎಂಬ ಭ್ರಮೆ ಹುಟ್ಟಿಸುವಷ್ಟರ ಮಟ್ಟಿಗೆ ಅಸಂಭವವಾಗಿರುತ್ತವೆ. ಜ್ಯೋತ್ಸ್ನಾ ಧಾವ್ಲೆ ಅವರ ಕಥೆ ಅಂಥದ್ದು. ಎಂಟು ವರ್ಷದವಳಿದ್ದಾಗ ನಡೆದ ದುರಂತದಿಂದ ಬೇರ್ಪಟ್ಟ ಕುಟುಂಬವನ್ನು 21 ವರ್ಷದ ಬಳಿಕ ಸೇರಿಕೊಂಡ ಹೃದಯಸ್ಪರ್ಶಿ ಕಥೆ. ರೈಲಿನಲ್ಲಿ ನಿದ್ದೆ ಮಾಡಿದ ಆಕೆ ಎಚ್ಚರಗೊಂಡಾದ ಗುರುತು ಪರಿಚಯ ಇಲ್ಲದ ಊರಲ್ಲಿ ಒಬ್ಬಂಟಿ. 1995ರಲ್ಲಿ ಬೇರ್ಪಟ್ಟಿದ್ದ ಈಕೆಯನ್ನು ಬಹುಶಃ ಮೃತಪಟ್ಟಿರಬೇಕು ಎಂದು ಪೋಷಕರು ಕೂಡಾ ಶಂಕಿಸಿದ್ದರು.
ಬಹುಶಃ 29ರ ಮಹಿಳೆಯ ಕಥೆ ಸಿನಿಮಾ ಕಥೆ ಎನಿಸಬಹುದು. ಈಕೆ ಭಾರತದ ಐಟಿ ರಾಜಧಾನಿಯಲ್ಲಿ ತಂತ್ರಜ್ಞಾನ ಕಂಪನಿಯೊಂದರ ಸ್ವಾಗತಗಾರ್ತಿ. ಪತಿ ಹಾಗೂ ಇಬ್ಬರು ಮಕ್ಕಳ ಪುಟ್ಟ ಸಂಸಾರ. ಈಕೆ ಇದೀಗ ಸುಧೀರ್ಘ ಕಥೆಯೊಂದರ ನಾಯಕಿ. ಪೂರ್ವ ಮಹಾರಾಷ್ಟ್ರದ ಚಂದ್ರಾಪುರ ನಿಲ್ದಾಣದಿಂದ ಹೊರಟ ರೈಲಿನಲ್ಲಿ ಎಂಟು ವರ್ಷದ ಪುಟ್ಟ ಬಾಲಕಿ ಆಟವಾಡುತ್ತಾ ನಿದ್ದೆ ಹೋಗುತ್ತಾಳೆ. 21 ವರ್ಷದ ಬಳಿಕ ಅದೇ ನಿಲ್ದಾಣದಲ್ಲಿ ಮತ್ತೆ ತಂದೆ ತಾಯಿಯನ್ನು ಭೇಟಿಯಾಗುವ ಭಾಗ್ಯ ಈಕೆಯದ್ದು.
ಬೆಂಗಳೂರಿನಿಂದ 1000 ಕಿಲೋಮೀಟರ್ ದೂರದ ಚಂದ್ರಾಪಿರದ ದತ್ತನಗರ ಮೂಲದ ಮಹಿಳೆ ಈಕೆ. ಈಕೆ ಎಂಟು ವರ್ಷದವಳಿದ್ದಾಗ, ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲಲ್ಲಿ ಇತರ ಮಕ್ಕಳ ಜತೆ ಆಟವಾಡುತ್ತಾ ನಿದ್ದೆಹೋಗಿದ್ದಳು. ಆಕೆಗೆ ಎಚ್ಚರವಾದಾಗ ರೈಲು ಚಲಿಸುತ್ತಿತ್ತು. ರೈಲು ನಿಲ್ಲಿಸಲು ನಡೆಸಿದ ಪ್ರಯತ್ನ ವಿಫಲವಾಯಿತು. 20 ಗಂಟೆ ಪ್ರಯಾಣದ ಬಳಿಕ ಈಕೆ ಮುಂಬೈ ನಗರದಲ್ಲಿದ್ದಳು. ಚಂದ್ರಾಪುರಕ್ಕೆ ವಾಪಾಸಾಗಲು ರೈಲಿನಲ್ಲಿ ಹತ್ತಿಸುವಂತೆ ಗೋಗರೆದಳು. ಒಬ್ಬರು ತೋರಿಸಿದ ರೈಲಿನಲ್ಲಿ ಕೂತು ಪ್ರಯಾಣ ಬೆಳೆಸಿದರೆ ಅದು ಸಿಕಂದರಾಬಾದ್‌ನಲ್ಲಿ ಹೋಗಿ ನಿಂತಿತು. ಅಲ್ಲೂ ಮತ್ತದೇ ಗೋಳು. ಚಂದ್ರಾಪುರಕ್ಕೆ ಹೋಗುವ ರೈಲಿನ ಬಗ್ಗೆ ಕೇಳಿದರೆ ಯಾರೂ ಆ ಹೆಸರೇ ಕೇಳಿರಲಿಲ್ಲ.
ಪಕ್ಕದ ಹೋಟೆಲ್ ಒಂದರಲ್ಲಿ ಆಹಾರಕ್ಕಾಗಿ ಬೇಡಿದಾಗ ಈಕೆಯ ಕಥೆ ಕೇಳಿದ ಮಾಲಕಿ ತನ್ನ ಸಹೋದರಿ ಮನೆಯಲ್ಲಿ ಕೆಲ ದಿನಗಳ ಕಾಲ ಇರುವಂತೆ ಸೂಚಿಸಿದರು. ಕೆಲ ದಿನಗಳ ಬಳಿಕ ಊರಿಗೆ ವಾಪಾಸು ಕಳುಹಿಸುವುದಾಗಿ ಭರವಸೆ ನೀಡಿದರು. ಆದರೆ ಆಕೆಯ ಮನೆಕೆಲಸದವಳಾಗಿಯೇ ಕಾಯಂ ಆಗಿ ಉಳಿಯುವಂತಾಯಿತು. ವರ್ಷದ ಬಳಿಕ ಆ ಕುಟುಂಬ ರಜೆಯಲ್ಲಿ ಕೇರಳಕ್ಕೆ ವಿಹಾರ ಹೋಗುವಾಗಲೂ ಈಕೆಯನ್ನು ಜತೆಗೆ ಒಯ್ದಿತ್ತು. ಪುಟ್ಟ ಬಾಲಕಿಗೆ ಕಷ್ಟದ ಸರಣಿಯೇ ಅಲ್ಲಿ ಎದುರಾಗಿತ್ತು.
ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಮತ್ತೆ ರೈಲು ನಿಲ್ದಾಣಕ್ಕೆ ಬಂದು ಚಂದ್ರಾಪುರ ರೈಲು ಹತ್ತಿಸುವಂತೆ ಕೋರಿದಳು. ಈ ಬಾರಿ ಆಕೆ ಹತ್ತಿದ ರೈಲು ಬೆಂಗಳೂರಿಗೆ ಬಂತು. ಮಹಿಳಾ ಪೊಲೀಸ್ ಒಬ್ಬರು ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ನೋಡಿ ಆಸ್ಪತ್ರೆಗೆ ಸೇರಿಸಿದರು. ಬಳಿಕ ಶಿವಾಜಿನಗರದ ತಪ್ಪಿಸಿಕೊಂಡ ಮಕ್ಕಳ ಗೃಹಕ್ಕೆ ಈಕೆಯನ್ನು ಸೇರಿಸಿದರು. ಶಾಲೆ, ಅಲ್ಲಿಂದ ಮತ್ತೊಂದು ವಸತಿಗೃಹಕ್ಕೆ ಸ್ಥಳಾಂತರ, ಕೆಜಿಎಫ್‌ಗೆ ವರ್ಗಾವಣೆ, ಟೈಲರಿಂಗ್ ತರಬೇತಿ ಪಡೆದದ್ದು ಹೀಗೆ ಆಕೆಯ ಜೀವನ ಹಲವು ತಿರುವು ಪಡೆಯಿತು. ಅಂತಿಮವಾಗಿ ನಿಮ್ಹಾನ್ಸ್ ಬಳಿಯ ಹಾಸ್ಟೆಲ್‌ಗೆ ಕಳುಹಿಸಲಾಯಿತು. ಸ್ಕ್ರೀನ್‌ಪ್ರಿಂಟಿಂಗ್ ಕೆಲಸ ಮಾಡುತ್ತದಿದ ಶಿವಶಕ್ತಿ ಎಂಬಾತನಿಗೆ ಈಕೆಯನ್ನು ವಿವಾಹ ಮಾಡಿಕೊಡಲಾಯಿತು.
2004ರಲ್ಲಿ ಶೀಬಾ, 2008ರಲ್ಲಿ ಶ್ಯಾಮ್ ಎಂಬ ಮಕ್ಕಳಿಗೆ ಜನ್ಮ ನೀಡಿದಳು. ಇಷ್ಟಾಗಿಯೂ ಚಂದ್ರಾಪುರಕ್ಕೆ ಮರಳುವ ಆಸೆ ಸಾಯಲಿಲ್ಲ. ಇದೇ ವೇಳೆ ಕಂಪ್ಯೂಟರ್ ಕಲಿತು ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ರಿಸೆಪ್ಷನಿಸ್ಟ್ ಕೆಲಸಕ್ಕೂ ಸೇರಿದಳು. ಸಹೋದ್ಯೋಗಿಗಳ ಬಗ್ಗೆ ತನ್ನ ವೃತ್ತಾಂತ ವಿವರಿಸಿದಾಗ, ಚಂದ್ರಾಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಸಲಹೆ ಬಂತು. ಆಕೆಯ ಪೋಷಕರು ಖಂಡಿತವಾಗಿಯೂ ನಾಪತ್ತೆ ಪ್ರಕರಣ ದಾಖಲಿಸಿರುತ್ತಾರೆ ಎಂಬ ನಂಬಿಕೆಯಿಂದ ಹಾಗೆ ಸಲಹೆ ಮಾಡಿದ್ದರು. ಅಲ್ಲಿನ ಪೊಲೀಸ್ ಸಹಾಯವಾಣಿಯನ್ನು ಸಂಪರ್ಕಿಸಿ ನೆರವು ಯಾಚಿಸಿದಳು. ಇದರಂತೆ ಪೋಷಕರ ಬೇಟೆಗಾಗಿ ವಿಶೇಷ ತಂಡವನ್ನು ಎಸ್ಪಿ ರಚಿಸಿದರು.
ಜ್ಯೋತ್ಸ್ನಾ ತಂದೆ ಆಟೊ ರಿಕ್ಷಾ ಚಾಲಕ ಎನ್ನುವುದು ಆಕೆಗೆ ನೆನಪಿತ್ತು. ನಾಮದೇವ್ ಎಂಬ ಅಡ್ಡಹೆಸರಿನ ಆಟೊ ಚಾಲಕ 1995ರಲ್ಲಿ ಮಗಳು ಕಾಣೆಯಾದ ಬಗ್ಗೆ ದೂರು ನೀಡಿದ ದಾಖಲೆಗೂ, ಈಕೆಯ ಹೇಳಿಕೆಗೂ ತಾಳೆ ಹೋಯಿತು. ನಾಮದೇವ್‌ನನ್ನು ಪೊಲೀಸರು ಪತ್ತೆ ಮಾಡಿ, ದೂರವಾಣಿ ಮೂಲಕ ಮಾತನಾಡಿಸಿದರು. ಗಂಡ, ಮಕ್ಕಳ ಜತೆಗೆ ಚಂದ್ರಾಪುರಕ್ಕೆ ಬಂದು ಎರಡು ದಶಕ ಬಳಿಕ ಕುಟುಂಬವನ್ನು ಸೇರಿಕೊಂಡಳು.







