ನನಗೆ ಕೆಲವು ವ್ಯಕ್ತಿಗಳನ್ನು ಓಲೈಸಲು ಸಾಧ್ಯವಿಲ್ಲ
ಕೇಂದ್ರಕ್ಕೆ ಎತ್ತಂಗಡಿಯಾದ ಗುಜರಾತ್ ಡಿಜಿಪಿ ತಿರುಗೇಟು, ದಿಲ್ಲಿಗೆ ಹೋಗಲು ನಕಾರ

ಅಹ್ಮದಾಬಾದ್,ಎ.17: ರಾಜ್ಯದ ಪೊಲೀಸ್ ಮಹಾ ನಿರ್ದೇಶಕರ ಹುದ್ದೆಯಿಂದ ಎತ್ತಂಗಡಿಗೊಂಡು ದಿಲ್ಲಿಗೆ ವರ್ಗಾಯಿಸಲ್ಪಟ್ಟಿರುವ ನಿರ್ಗಮನಗೊಳ್ಳುತ್ತಿರುವ ಡಿಜಿಪಿ ಪಿ.ಸಿ.ಥಾಕೂರ್ ಅವರು ದಿಲ್ಲಿಗೆ ತೆರಳಲು ನಿರಾಕರಿಸಿದ್ದು, ತನ್ನ ಪತ್ನಿಯ ಗಂಭೀರ ಆರೋಗ್ಯ ಸ್ಥಿತಿಯನ್ನು ಕಾರಣವನ್ನಾಗಿ ನೀಡಿದ್ದಾರೆ. ಯಾವನೇ ಪತಿ ತನ್ನ ಪತ್ನಿಯನ್ನು ಇಂತಹ ಸ್ಥಿತಿಯಲ್ಲಿ ಬಿಟ್ಟು ತೆರಳಲಾರ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಥಾಕೂರ್ ಅವರನ್ನು ಅಗ್ನಿಶಾಮಕ ಮತ್ತು ನಾಗರಿಕ ರಕ್ಷಣಾ ಇಲಾಖೆಯ ಮುಖ್ಯಸ್ಥರನ್ನಾಗಿ ನೇಮಕಗೊಳಿಸಿ ಕೇಂದ್ರ ಸರಕಾರವು ಆದೇಶ ಹೊರಡಿಸಿದ ದಿನದಂದೇ ಅನಾರೋಗ್ಯ ರಜೆಯ ಮೇಲೆ ತೆರಳಿರುವ ಅವರು ಶನಿವಾರ ಡಿಜಿಪಿ ಪಿ.ಪಿ.ಪಾಂಡೆಯವರಿಗೆ ಅಧಿಕಾರ ವಹಿಸಿಕೊಡಲೂ ಬಂದಿರಲಿಲ್ಲ.
ಸರಕಾರದ ನಿರ್ಧಾರದಿಂದ ತೀವ್ರ ಅತೃಪ್ತಗೊಂಡಿರುವ ಥಾಕೂರ್ ಶನಿವಾರ ತನ್ನ ಅಧೀನ ಅಧಿಕಾರಿಗಳ ದೂರವಾಣಿ ಕರೆಗಳಿಗೆ ಉತ್ತರಿಸಿರಲಿಲ್ಲ.
ಈಗ ದಿಲ್ಲಿಗೆ ತೆರಳುವ ಪ್ರಶ್ನೆಯೇ ಇಲ್ಲ. ನನ್ನ ಪತ್ನಿಯ ಗಂಭೀರ ಸ್ಥಿತಿಯ ಬಗ್ಗೆ ರಾಜ್ಯ ಸರಕಾರಕ್ಕೆ ತಿಳಿಸಿದ್ದೇನೆ. ಆಕೆಗೆ ಕೃತಕ ಉಸಿರಾಟ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಮತ್ತು ದಿನದ 24 ಗಂಟೆಗಳ ಕಾಲವೂ ವೈದ್ಯಕೀಯ ಗಮನ ಅಗತ್ಯವಾಗಿದೆ ಎಂದು ಹೇಳಿದ ಥಾಕೂರ್,ನಾನು ದೇಶಕ್ಕೆ ಮತ್ತು ಈ ರಾಜ್ಯಕ್ಕೆ ಸೇವೆ ಸಲ್ಲಿಸಿದ್ದೇನೆ ಮತ್ತು ಸದಾ ದಮನಿತರ ಹಕ್ಕುಗಳ ಪರವಾಗಿದ್ದೇನೆ. ಆದರೆ ಕೆಲವು ವ್ಯಕ್ತಿಗಳ ತುಷ್ಟೀಕರಣ ಮತ್ತು ಅವರ ಆದೇಶ ಪಾಲನೆ ನನ್ನಿಂದ ಸಾಧ್ಯವಾಗಿಲ್ಲ ಎಂದರು.





