ಜುಬೈಲ್ ಅಗ್ನಿ ದುರಂತ ಶೋಕತಪ್ತರಾದ ಮಂಗಳೂರಿನ ಕುಟುಂಬಸ್ಥರು

ಮಂಗಳೂರು, ಎ.17: ಸೌದಿ ಅರೇಬಿಯಾದ ಜುಬೈಲ್‌ನ ಯುನೈಟೆಡ್ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ದುರಂತ ಜಿಲ್ಲೆಯ ಜನತೆಗೆ ಅಘಾತ ತಂದಿದೆ. ಜುಬೈಲ್ ಕಾರ್ಖಾನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಉದೋಗದಲ್ಲಿರುವ ಹಲವರ ಪೈಕಿ ನಾಲ್ಕು ಮಂದಿಯ ಸಾವು ಸಂಭವಿಸಿಸರುವುದು ದೃಢಪಟ್ಟಿದೆ .
ಬಜ್ಪೆ ಸಮಿಪದ ಕೊಂಚಾರ್ ನಿವಾಸಿ ಭಾಸ್ಕರ್ ಪೂಜಾರಿ, ನೀರುಮಾರ್ಗದ ಮೇರ್ಲಪದವು ವಿನ್ಸೆಂಟ್ ಮೊಂತೇರೋ, ಹಳೆಯಂಗಡಿ ನಿವಾಸಿ ಅಶ್ರಫ್ ಬಾಲಕೃಷ್ಣ ಮೂಡುಶೆಡ್ಡೆ ಅಗ್ನಿ ಅನಾಹುತಕ್ಕೆ ಮೃತಪಟ್ಟಿದ್ದಾರೆ. ಸೌದಿ ಅರೆಬಿಯಾದಿಂದ ಮೃತರ ಪಾರ್ಥಿವ ಶರೀರಗಳು ಬರಲು ಕನಿಷ್ಟ ಹದಿನೈದು ದಿನಗಳು ಬೇಕಾಗಬಹುದೆಂದು ಅಂದಾಜಿಸಲಾಗಿದ್ದು ರಾಜತಾಂತ್ರಿಕ ನೆರವನ್ನು ಕುಟುಂಬಿಕರು ನಿರೀಕ್ಷಿಸುತ್ತಿದ್ದಾರೆ.
ಊರಿಗೆ ಬರಬೇಕೆಂದಿದ್ದ ದಿನವೆ ಸಾವು: ಮೃತಪಟ್ಟ ಒಬ್ಬರಲ್ಲಿ ವಿನ್ಸೆಂಟ್ ಮೊಂತೇರೋ ಸೌದಿ ಅರೇಬಿಯಾದಲ್ಲಿ ಅಗ್ನಿ ದುರಂತ ಸಂಭವಿಸಿದ ಶನಿವಾರದಂದು ಹುಟ್ಟೂರಿಗೆ ಬರಬೇಕಾಗಿತು. ಈ ಬಗ್ಗೆ ಅವರು ನಿಶ್ಚಿಯಿಸಿ ಮನೆಯವರಿಗೂ ತಿಳಿಸಿದ್ದರು. ಅವಿವಾಹಿತರಾಗಿರುವ ವಿನ್ಸೆಂಟ್ ಮೊಂತೆರೋ ಈ ಬಾರಿ ಹುಟ್ಟೂರಿಗೆ ಬಂದಾಗ ಅವರಿಗೆ ಮದುವೆ ಮಾಡಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಜೆಯನ್ನು ಹೊಂದಾಣಿಕೆ ಮಾಡಿಕೊಂಡು ಅವರು ಊರಿಗೆ ಬರುವುದನ್ನು ಒಂದು ತಿಂಗಳಿಗೆ ಮುಂದೂಡಿದ್ದರು. ಒಂದು ವೇಳೆ ಮೊದಲೆ ನಿಶ್ಚಯಿಸಿದಂತೆ ಅವರು ಮನೆಗೆ ಬಂದಿದ್ದರೆ ಅವರು ಪಾರಾಗುತ್ತಿದ್ದರು.
ದಿವಂಗತ ಲಾರೆನ್ಸ್ ಮೊಂತೇರೋ ಮತ್ತು ಕ್ರಿಶ್ಚಿನ್ ಮೊಂತೇರೋ ಅವರ 6 ಮಂದಿ ಮಕ್ಕಳಲ್ಲಿ ಐದನೆಯವರಾಗಿರುವ ವಿನ್ಸೆಂಟ್ ಮೊಂತೇರೋ ಕಳೆದ ಹದಿನಾಲ್ಕು ವರ್ಷಗಳಿಂದ ಕೆಲಸಕ್ಕಾಗಿ ಊರು ಬಿಟ್ಟು ಮುಂಬೈ, ದುಬೈ, ಸೌದಿ ಅರೇಬಿಯದಲ್ಲಿ ದುಡಿಮೆ ಮಾಡಿದ್ದಾರೆ. 36 ವರ್ಷ ಪ್ರಾಯದ ವಿನ್ಸೆಂಟ್ ಮೊಂತೆರೋ 5 ವರ್ಷ ಮುಂಬೈಯಲ್ಲಿ, 5 ವರ್ಷ ದುಬೈಯಲ್ಲಿ, ಕಳೆದ ನಾಲ್ಕುವರೆ ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ದುಡಿಮೆ ಮಾಡುತ್ತಿದ್ದರು. ಇದೀಗ ಇವರ ಸಾವು ಮನೆಯಲ್ಲಿ ಶೋಕದ ವಾತವರಣ ನಿರ್ಮಿಸಿದೆ.
ವಿನ್ಸೆಂಟ್ ಮೊಂತೇರೋ ಅವರ ಸಾವಿನ ಸುದ್ದಿ ಅಘಾತ ತಂದಿದೆ. ಈ ಅಘಾತಕಾರಿ ಸುದ್ದಿಯ ಬಗ್ಗೆ ತಾಯಿಗೆ ಇನ್ನು ತಿಳಿಸಿಲ್ಲ. ಪಾರ್ಥಿವ ಶರೀರವನ್ನು ತರುವ ನಿಟ್ಟಿನಲ್ಲಿ ಸರಕಾರದ ಸಹಾಯ ಬೇಕಾಗಿದೆ
-ಜೆರೊಂ, ಮೃತ ವಿನ್ಸೆಂಟ್ ಅವರ ಸಹೋದರ.
ಗಾಯಗೊಂಡಿದ್ದಾರೆ ಎಂಬುದು ಗೊತ್ತು : ಬಾಲಕೃಷ್ಣ ಪೂಜಾರಿ ಪತ್ನಿ ಲಾವಣ್ಯ
ಜುಬೈಲ್ ಕಾರ್ಖಾನೆಯಲ್ಲಿ ನಡೆದ ಅಗ್ನಿದುರಂತದಲ್ಲಿ ತನ್ನ ಪತಿಗಾಯಗೊಂಡಿದ್ದಾರೆ ಎಂಬ ಮಾಹಿತಿ ನನಗೆ ಲಭಿಸಿದೆ ಎಂದು ವಾಮಾಂಜೂರಿನ ಬಾಲಕೃಷ್ಣ ಪೂಜಾರಿಯವರ ಪತ್ನಿ ಲಾವಣ್ಯ ತಿಳಿಸಿದ್ದಾರೆ. ಈ ಬಗ್ಗೆ ನಿಖರ ಮಾಹಿತಿ ಇಲ್ಲ. ಅಲ್ಲಿ ಅವರಿಗೆ ಏನಾಗಿದೆ ಎಂದು ಗೊತ್ತಾಗಿಲ್ಲ . ಆದರೆ ಕೆಲವರು ಅವರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಬಾಲಕೃಷ್ಣ ಪೂಜಾರಿಯವರು ಕಳೆದ 2 ವರ್ಷಗಳಿಂದ ಸೌದಿ ಅರೇಬಿಯಲ್ಲಿ ದುಡಿಯುತ್ತಿದ್ದಾರೆ. ಬಾಲಕೃಷ್ಣ ಅವರು ಮೃತಪಟ್ಟಿರುವ ಬಗ್ಗೆ ಮಾಹಿತಿಯಿದ್ದು ಅವರ ಪಾರ್ಥಿವ ಶರೀರವನ್ನು ತರುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಬಾಲಕೃಷ್ಣ ಪೂಜಾರಿಯವರ ನೆರೆಮನೆಯವರು ಪತ್ರಿಕೆಗೆ ತಿಳಿಸಿದ್ದಾರೆ.








