ಪ್ರತ್ಯೇಕ ರಸ್ತೆ ಅಪಘಾತ: ಶಿವಮೊಗ್ಗ-ಸೊರಬದಲ್ಲಿ ಇಬ್ಬರು ಸಾವು
ಶಿವಮೊಗ್ಗ, ಎ. 17: ಜಿಲ್ಲೆಯ ಶಿವಮೊಗ್ಗ ಹಾಗೂ ಸೊರಬ ತಾಲೂಕಿನಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳಲ್ಲಿ ಇಬ್ಬರು ಮೃತಪಟ್ಟು, ಒಬ್ಬರು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಶಿವಮೊಗ್ಗ ವರದಿ: ತಾಲೂಕಿನ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ವೀರಗಾರನ ಬೈರಿನಕೊಪ್ಪ ಗ್ರಾಮದ ಬಳಿ ವೇಗವಾಗಿ ಆಗಮಿಸಿದ ಲಾರಿಯೊಂದು ಟ್ರ್ಯಾಕ್ಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಟಿಲ್ಲರ್ ಚಾಲಕ ಮೃತಪಟ್ಟು, ಮತ್ತೋರ್ವ ಗಾಯಗೊಂಡಿರುವ ಘಟನೆ ವರದಿಯಾಗಿದೆ. ನಾಗರಾಜ್ ಮೃತಪಟ್ಟ ಚಾಲಕ ಎಂದು ಗುರುತಿಸಲಾಗಿದೆ. ಲಾರಿ ಢಿಕ್ಕಿ ಹೊಡೆದ ಪರಿಣಾಮ ಚಾಲನೆಯ ನಿಯಂತ್ರಣ ಕಳೆದುಕೊಂಡ ಚಾಲಕ ಟ್ರ್ಯಾಕ್ಟರ್‌ನ್ನು ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆಸಿದ್ದಾನೆ. ಲಾರಿ ಚಾಲಕನ ಅಜಾಗರೂಕ, ಮಿತಿಮೀರಿದ ವೇಗವೇ ಅವಘಡಕ್ಕೆ ಕಾರಣವೆಂದು ಪೊಲೀಸರು ತಿಳಿಸಿದ್ದು, ಆತನ ವಿರುದ್ಧ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೊರಬ ವರದಿ: ತಾಲೂಕಿನ ಬೆನ್ನೂರು ಗ್ರಾಮದ ಬಂಗಾರಪ್ಪ ಬಡಾವಣೆಯಲ್ಲಿ ಬೈಕ್‌ವೊಂದು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಮೃತಪಟ್ಟಿರುವ ಘಟನೆ ವರದಿಯಾಗಿದೆ. ನೀರುಗಂಟಿ ಕೆಲಸ ಮಾಡುವ ಪರಶುರಾಮ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.





