ಬ್ಲೇಡ್‌ನಿಂದ ಕತ್ತು ಕೊಯ್ದು ಕೊಲೆ
ಬೆಂಗಳೂರು, ಎ. 17: ಕೆಲಸದ ವೇಳೆ ನಿಂದಿಸುತ್ತಿದ್ದ ಬಡಗಿಯನ್ನು ಅಧೀನ ಕೆಲಸಗಾರನೊಬ್ಬ ಬ್ಲೇಡ್‌ನಿಂದ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಇಲ್ಲಿನ ರಾಜಗೊ ೀಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ.
ನಗರದ ಹೆಗ್ಗನಹಳ್ಳಿ ಮುಖ್ಯರಸ್ತೆಯ ವೆಂಕಟೇಶ್(45) ಎಂಬವರನ್ನು ಮೂರ್ತಿ (65) ಎಂಬಾತ ಶೇವಿಂಗ್ ಬ್ಲೇಡ್‌ನಿಂದ ಕತ್ತು ಕೊಯ್ದು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹೆಗ್ಗನಹಳ್ಳಿಯಲ್ಲಿ ರಾತ್ರಿ 9ರ ವೇಳೆ ಇಬ್ಬರೂ ಕುಡಿದು ಮನೆ ಕಡೆ ಹೋಗುತ್ತಿದ್ದಾಗ ಹಾಲಿನ ಡೈರಿ ಬಸ್ ನಿಲ್ದಾಣದ ಬಳಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಹಲ್ಲೆ ಮಾಡಲು ಬಂದ ವೆಂಕಟೇಶ್‌ನ ಕತ್ತನ್ನು ಶೇವಿಂಗ್ ಬ್ಲೇಡ್‌ನಿಂದ ಕೊಯ್ದು ಮೂರ್ತಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಕತ್ತಿನ ಬಳಿ ರಕ್ತ ಸುರಿಯುತ್ತಿದ್ದರೂ ಅದನ್ನು ಹಿಡಿದುಕೊಂಡು ಮನೆಗೆ ಬಂದ ವೆಂಕಟೇಶನನ್ನು ನೋಡಿದ ಆತನ ತಾಯಿ ಆಸ್ಪತ್ರೆಗೆ ಹೋಗೋಣ ಎಂದರೂ ಕೇಳದ ಆತ, ಕುಡಿದ ವೇಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದಿಲ್ಲ ಎಂದು ಮಲಗಿದ್ದಾನೆ.
ಸ್ವಲ್ಪ ಸಮಯದ ನಂತರ ಹೆಚ್ಚಿನ ರಕ್ತ ಸೋರಿ ಅಸ್ವಸ್ಥಗೊಂಡ ವೆಂಕಟೇಶನನ್ನು ಆತನ ತಾಯಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11ರ ವೇಳೆ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೃತ್ಯವೆಸಗಿ ಮನೆಯಲ್ಲಿ ಹೋಗಿ ಅಡಗಿದ್ದ ಆರೋಪಿ ಮೂರ್ತಿಯನ್ನು ಕಾರ್ಯಾಚರಣೆ ನಡೆಸಿದ ರಾಜಗೋಪಾಲನಗರ ಪೊಲೀಸರು ಬಂಧಿಸಿ, ಹೆಚ್ಚುವರಿ ತನಿಖೆ ಕೈಗೊಂಡಿದ್ದಾರೆ.





