Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕಸದ ವಿಷದೊಳಗೆ ಕರಗಿ ಹೋದವರ ಕಥೆ!

ಕಸದ ವಿಷದೊಳಗೆ ಕರಗಿ ಹೋದವರ ಕಥೆ!

ಜಗದೀಶ್ ಕೊಪ್ಪಜಗದೀಶ್ ಕೊಪ್ಪ17 April 2016 11:46 PM IST
share
ಕಸದ ವಿಷದೊಳಗೆ ಕರಗಿ ಹೋದವರ ಕಥೆ!

ಮುಂಬೈ ಮಹಾನಗರದ ಮಹಾ ಕಸದ ತೊಟ್ಟಿಯಾದ ಡಿಯೊನರ್ ಪ್ರದೇಶದಲ್ಲಿ ಎರಡು ಬಾರಿ ಬೆಂಕಿ ಕಾಣಿಸಿಕೊಂಡು, ಕಸದ ತ್ಯಾಜ್ಯದಿಂದ ಬಂದ ವಿಷಾನಿಲ ಮುಂಬೈ ನಾಗರಿಕರ ನಿದ್ದೆಗೆಡಿಸಿದೆ. ಒಂದು ಬೊಗಸೆ ನೀರು, ಒಂದು ಹಿಡಿ ಶುದ್ಧ ಮಣ್ಣು ಅಥವಾ ಒಂದಿಷ್ಟು ಶುದ್ಧ ಗಾಳಿ ಸೃಷ್ಟಿಸಲಾರದ ಈ ಮಾನವನೆಂಬ ದುರಂಕಾರದ ಪ್ರಾಣಿಗೆ ಇದೀಗ ಮೊದಲ ಬಾರಿಗೆ ಪರಿಸರದ ಪರಿಣಾಮಗಳೇನು ಎಂಬುದು ಅರ್ಥವಾಗತೊಡಗಿದೆ.

ಇದು ಕೇವಲ ಮುಂಬೈ ಮಹಾನಗರವೊಂದರ ಕಥೆಯಲ್ಲ, ತ್ಯಾಜ್ಯ ವಿಲೆವಾರಿಗೆ ಪರಿಹಾರ ಕಾಣದ ದಿಲ್ಲಿ,ಕೋಲ್ಕತ, ಚೆನ್ನೈ, ಹೈದರಾಬಾದ್, ಬೆಂಗಳೂರು ನಗರಗಳು ಸೇರಿದಂತೆ ದೇಶದ ಬಹುತೇಕ ಎಲ್ಲಾ ನಗರಗಳು ಮೋಹಿನಿ ಭಸ್ಮಾಸುರನ ಕಥೆಯಾಗಿದೆ. ಇದರ ಜೊತೆಗೆ ಯಾರ ಗಮನಕ್ಕೂ ಬಾರದಂತೆ ನದಿಗಳಿಗೆ ಮತ್ತು ಸಮುದ್ರಗಳಿಗೆ ಸುರಿಯುತ್ತಿರುವ ಕಸದ ವಿಲೆವಾರಿಯನ್ನು ಲೆಕ್ಕ ಹಾಕಿದರೆ ಈ ವೇಳೆಗಾಗಲೇ ಭಾರತದ ನಗರಗಳಲ್ಲಿ ವಾಸಿಸುವ ನಾಗರಿಕರ ಮೇಲೆ ಹಿಮಾಲಯ ಪರ್ವತದಂತಹ ಕಸದ ಪರ್ವತವೊಂದು ಸೃಷ್ಟಿಯಾಗಬೇಕಿತ್ತು. ಮುಂಬೈ ನಗರವೊಂದರಲ್ಲಿ ಪ್ರತೀ ದಿನ ಡಿಯೊನರ್ ಪ್ರದೇಶಕ್ಕೆ 5.500 ಮೆಟ್ರಿಕ್ ಟನ್ ಕಸ, 600 ಮೆಟ್ರಿಕ್ ಟನ್ ಕಟ್ಟಡ ಅವಶೇಷಗಳ ಮಣ್ಣು, 25 ಟನ್ ಆಸ್ಪತ್ರೆಯಿಂದ ಹೊರಬೀಳುವ ತ್ಯಾಜ್ಯ ಬಂದು ಬೀಳುತ್ತಿದೆ.

ಇದರ ಜೊತೆಗೆ ಮುಂಬೈ ನಗರದ ಒಳಚರಂಡಿಗಳಿಂದ ಪ್ರತಿ ವರ್ಷ ಮಳೆಗಾಲಕ್ಕೆ ಮುನ್ನ ತೆಗೆಯಲಾಗುವ ಸುಮಾರು 9 ಸಾವಿರ ಟನ್ ಹೂಳು ಸಹ ಇಲ್ಲಿಗೆ ಬಂದು ಬೀಳುತ್ತದೆ. ಪ್ಲಾಸ್ಟಿಕ್, ಹಳೆಯ ಬಟ್ಟೆ, ಒಡೆದ ಗಾಜಿನ ಚೂರು ಹೀಗೆ ತರಾವರಿಯ ಕಸದ ಪ್ರಮಾಣದಿಂದಾಗಿ 1970ರಲ್ಲಿ ಸಮತಟ್ಟಾಗಿದ್ದ ಡಿಯೊನರ್ ಪ್ರದೇಶದಲ್ಲಿ ಇದೀಗ 164 ಅಡಿ ಎತ್ತರದ ಪರ್ವತ ನಿರ್ಮಾಣವಾಗಿದೆ. ಈ ಕಸದ ರಾಶಿಗೆ ಬೆಂಕಿ ಬಿದ್ದರೆ, ಅದು ಅರಣ್ಯದ ಕಾಡ್ಗಿಚ್ಚಿನಂತೆ ಹರಡುತ್ತದೆ. ಅಲ್ಲಿಂದ ಹೊರಡುವ ವಿಷಾನಿಲ ಯಾರನ್ನೂ ಹತ್ತಿರಕ್ಕೆ ಸುಳಿಯಂತೆ ಮಾಡುತ್ತದೆ. ಕಳೆದ ಫೆಬ್ರವರಿ ಕೊನೆಯ ವಾರ ಮತ್ತು ಮಾರ್ಚ್ ಕೊನೆಯ ವಾರದಲ್ಲಿ ಕಾಣಿಸಿಕೊಂಡ ಬೆಂಕಿ ಮುಂಬೈ ಮಹಾನಗರ ಪಾಲಿಕೆ ಮಾತ್ರವಲ್ಲದೆ, ಕೇಂದ್ರ ಸರಕಾರವೂ ನಗರ ನಿರ್ಮಾಣಗಳ ಕುರಿತು ಹಾಗೂ ಕಸ ವಿಲೆವಾರಿಗೆ ಪರ್ಯಾಯ ಮಾರ್ಗಗಳ ಕುರಿತು ಮರು ಚಿಂತನೆಗೆ ಹಚ್ಚಿದೆ.
ಮುಂಬೈ ಮಹಾನಗರದಲ್ಲಿದ್ದ ಕೊಳಗೇರಿಗಳನ್ನು ಸ್ಥಳಾಂತರಿಸಲು ಮಹಾರಾಷ್ಟ್ರ ಸರಕಾರವು 1972 ರಲ್ಲಿ ನಿರ್ಧರಿಸಿದಾಗ, ಈ ಯೋಜನೆಗೆ ವಿಶ್ವಬ್ಯಾಂಕ್ ಆರ್ಥಿಕ ನೆರವು ನೀಡಿತು. ನಗರ ಹೃದಯ ಭಾಗದಲ್ಲಿ ಬದುಕಿದ್ದ ಬಡವರ ವಾಸಸ್ಥಾನಗಳು ಉಳ್ಳವರ ಪಾಲಿಗೆ ಕಪ್ಪು ಚುಕ್ಕೆಗಳಂತೆ ಕಂಡ ಫಲವಾಗಿ ಎಲ್ಲಾ ಕೊಳೆಗೇರಿ ನಿವಾಸಿಗಳನ್ನು ಡಿಯೊನರ್ ಪ್ರದೇಶದ ಬಳಿ ಇದ್ದ ಶಿವಾಜಿನಗರ್, ಬೈಗನ್ ವಾಡಿ, ಲೋಟಸ್ ಕಾಲನಿ, ನಿರಹಂಕಾರಿ ನಗರಗಳಿಗೆ ವರ್ಗಾಯಿಸಲಾಯಿತು.

ಇದರಿಂದಾಗಿ ಕಸದ ರಾಶಿಯ ಸುತ್ತ 19 ವಸತಿ ಬಡಾವಣೆಗಳಲ್ಲಿ ಬಡವರು ಬದುಕುತ್ತಿದ್ದಾರೆ. ಇವರಲ್ಲಿ ಶೇಕಡ 90 ರಷ್ಟು ಮಂದಿ ಗ್ರಾಮಾಂತರ ಪ್ರದೇಶದಿಂದ ವಲಸೆ ಬಂದ ದಲಿತರು ಮತ್ತು ಮುಸ್ಲಿಮರು ಇರುವುದು ವಿಶೇಷ. ತಾವು ಹುಟ್ಟಿ ಬೆಳೆದ ಹಳ್ಳಿಗಳಲ್ಲಿ ಕೃಷಿ ಕೂಲಿಕಾರ್ಮಿಕರಾಗಿದ್ದ ಇವರೆಲ್ಲರೂ ಕೆಲಸವಿಲ್ಲದೆ, ಮುಂಬೈ ನಗರಕ್ಕೆ ವಲಸೆ ಬಂದು ಮಾರುಕಟ್ಟೆ ಪ್ರದೇಶಗಳಲ್ಲಿ ಕೂಲಿ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಆದರೆ, ಮಹಾರಾಷ್ಟ್ರ ತೆಗೆದುಕೊಂಡ ಒಂದು ಅಮಾನವೀಯ ನಿರ್ಧಾರದಿಂದ ನಗರದ ಹೃದಯ ಭಾಗದಿಂದ ಹೊರಭಾಗಕ್ಕೆ ಇವರೆಲ್ಲರೂ ಎಸೆಯಲ್ಪಟ್ಟರು. ತಾವು ಬದುಕುತ್ತಿದ್ದ ಜೋಪಡಿಗಳ ಬಗ್ಗೆ ಯಾವುದೇ ಅಧಿಕೃತ ವಾರಸುದಾರಿಕೆ ಪತ್ರವಿಲ್ಲದ ಕಾರಣ ಉಳ್ಳವರ ಮತ್ತು ಅಧಿಕಾರಸ್ಥರ ಕಾಲ್ಚೆಂಡುಗಳಾಗಿ ಹೊಟ್ಟೆ ಪಾಡಿಗಾಗಿ ಬದುಕುವುದು ಈ ಅಮಾಯಕರಿಗೆ ಮತ್ತು ಅಶಿಕ್ಷಿತರಿಗೆ ಅನಿವಾರ್ಯವಾಗಿತ್ತು.

ಕೊನೆಗೆ ಇವರೆಲ್ಲರೂ ಹೊಟ್ಟೆ ಪಾಡಿಗಾಗಿ ಆಯ್ಕೆ ಮಾಡಿಕೊಂಡ ಕೆಲಸವೆಂದರೆ, ಚಿಂದಿ ಆಯುವ ವೃತ್ತಿ.. ತಾವು ಬದುಕುತ್ತಿದ್ದ ಗುಡಿಸಲ ಮುಂದೆ ಪ್ರತಿ ನಿತ್ಯ ನೂರಾರು ಲಾರಿಗಳಲ್ಲಿ ಬಂದು ಬೀಳುತ್ತಿದ್ದ ಕಸದ ರಾಶಿಯಲ್ಲಿ ರದ್ದಿಕಾಗದ, ಕೂದಲು, ಬಾಟಲುಗಳ ಮುಚ್ಚಳ, ಅಲ್ಯೂಮಿನಿಯಂ ಡಬ್ಬಗಳು, ಪ್ಲಾಸ್ಟಿಕ್ ಚೂರು ಇವುಗಳನ್ನು ಆಯ್ದು ಗುಜರಿ ಅಂಗಡಿಗಳಿಗೆ ಮಾರಿ ಜೀವನ ಮಾಡತೊಡಗಿದರು. ಈ ಹೊಸ ವೃತ್ತಿಯಿಂದಾಗಿ ಇವರ ಮಾಸಿಕ ಆದಾಯ ತಿಂಗಳಿಗೆ ಎಂಟು ಸಾವಿರ ರೂಪಾಯಿ ಇದ್ದರೂ ಸಹ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಅಂದರೆ, ನೀರು, ರಸ್ತೆ, ಶೌಚಾಲಯ, ವಿದ್ಯುತ್ ಇವುಗಳಿಂದ ವಂಚಿತರಾಗಿ ಕಸದ ರಾಶಿಗೆ ಬೀಳುತ್ತಿದ್ದ ಆಕಸ್ಮಿಕ ಬೆಂಕಿಯ ಹೊಗೆ ಮತ್ತು ಹಸಿರು ತ್ಯಾಜ್ಯದ ದುರ್ವಾಸನೆಗೆ ತಮ್ಮನ್ನು ತಾವು ತೆರೆದುಕೊಂಡು ಹಲವು ರೋಗಗಳಿಗೆ ಬಲಿಯಾಗತೊಡಗಿದರು.
 ಜಾಗತೀಕರಣದ ಕನಸಿನ ಕೂಸಾದ ಆಧುನಿಕ ಮಾರುಕಟ್ಟೆಯ ಪ್ರಭುತ್ವಕ್ಕೆ ಬೇಕಾಗಿರುವುದು ಕೊಳ್ಳುಬಾಕ ಸಂಸ್ಕೃತಿಯೇ ಹೊರತು, ಪರಿಸರಕ್ಕೆ ಎರವಾಗದಂತೆ ಬದುಕುವ ಸರಳ ಬದುಕಿನ ನೆಲಮೂಲ ಸಂಸ್ಕೃತಿಯಲ್ಲ. ಹಾಗಾಗಿ ಹಳ್ಳಿಗಳು ಮತ್ತು ಬಡವರು ನಾಶವಾಗಿ ಜಗತ್ತಿನೆಲ್ಲೆಡೆ ನಗರಗಳು ಸೃಷ್ಟಿಯಾಗಬೇಕಿದೆ. ಈ ಕಾರಣಕ್ಕಾಗಿ ಸ್ಮಾರ್ಟ್ ಸಿಟಿ ಎಂಬ ಪರಿಕಲ್ಪನೆಯನ್ನು ವಿಶ್ವಾದ್ಯಂತ ಹರಿಯಬಿಡಲಾಗಿದೆ. ನಮ್ಮ ನಗರ ನಿರ್ಮಾಪಕರು, ಅಧಿಕಾರಸ್ಥರು ಎಲ್ಲವನ್ನೂ ಬೃಹತ್ತಾಗಿ ಸೃಷ್ಟಿಸಬಲ್ಲರು ನಿಜ, ಆದರೆ, ಭವಿಷ್ಯದ ಪರಿಣಾಮಗಳ ಬಗ್ಗೆ ಮಾತ್ರ ಇವರ ಬಳಿ ಯಾವುದೇ ಪರ್ಯಾಯವಿಲ್ಲ. ಜನರ ಕೈಯಲ್ಲಿ ಹರಿದಾಡುತ್ತಿರುವ ಹಣ, ಮಾಹಿತಿ ತಂತ್ರಜ್ಞಾನದಿಂದ ಉಂಟಾದ ಉದ್ಯೋಗ ಸೃಷ್ಟಿ ಹಾಗೂ ದುಪ್ಪಟ್ಟಾದ ವೇತನ, ವೇತನಕ್ಕೆ ಸಮಾನವಾಗಿ ಹುಟ್ಟಿಕೊಂಡ ಲೋಲುಪತೆಯ ಭೋಗ ಸಂಸ್ಕೃತಿ ಇವುಗಳಿಂದಾಗಿ ಈ ಭೂಮಿಯ ಮೇಲಿನ ಯಾವುದೇ ನೈಸರ್ಗಿಕ ಸಂಪತ್ತು ಪರಿಶುದ್ಧವಾಗಿ ಉಳಿಯಲಾರದ ಸ್ಥಿತಿ ತಲುಪಿತು. ನಮ್ಮ ದಿನ ನಿತ್ಯದ ಬದುಕಿನಲ್ಲಿ ವಿಶೇಷವಾಗಿ ಆಹಾರ ಮತ್ತು ಪಾನೀಯಗಳಿಗೆ ಬಳಕೆಯಾಗುತ್ತಿರುವ ಪ್ಲಾಸ್ಟಿಕ್ ಇಡೀ ಜಗತ್ತಿನಲ್ಲಿ ಕಸದ ವಿಲೇವಾರಿಯ ಸಮಸ್ಯೆಯನ್ನು ಹುಟ್ಟಿ ಹಾಕಿತು.

 ಪ್ರವಾಸಿಗರ ಮೋಜಿಗಾಗಿ ತೆರೆದು ಕೊಂಡಿರುವ ಕಡಲ ತೀರದ ನಿಸರ್ಗ ಸೌಂದರ್ಯದ ತಾಣವಾಗಿದ್ದ ಗೋವಾ ರಾಜ್ಯ ಪಶ್ಚಿಮ ಘಟ್ಟದಲ್ಲಿ ಸೃಷ್ಟಿ ಮಾಡುತ್ತಿರುವ ಅವಾಂತರವನ್ನು ಯಾರೊಬ್ಬರೂ ಈವರೆಗೆ ಗಂಭೀರವಾಗಿ ಪರಿಗಣಿಸಿಲ್ಲ. ಅಲ್ಲಿನ ಅತಿ ದೊಡ್ಡ ಬಾರ್ ಮತ್ತು ರೆಸ್ಟೋರೆಂಟ್‌ಗಳು ಮತ್ತು ಐಷಾರಾಮಿ ಹೊಟೇಲ್ ಗಳ ಮಾಲಕರು ಮಧ್ಯರಾತ್ರಿ ಕಸದ ರಾಶಿಯನ್ನು ಲಾರಿಗಳಲ್ಲಿ ತಂದು ಗೋವಾ- ಧಾರವಾಡದ ಹೆದ್ದಾರಿ, ಗೋವಾ-ಕಾರವಾರ ಹೆದ್ದಾರಿ ಹಾಗೂ ಗೋವಾ-ಮುಂಬೈ ಹೆದ್ದಾರಿಗಳ ಪಕ್ಕದಲ್ಲಿ ಸುರಿಯುತ್ತಿದ್ದಾರೆ. ಇದು ಗೋವಾ ರಾಜ್ಯದ ಅವಾಂತರ ಮಾತ್ರವಲ್ಲ, ಇಡೀ ದೇಶದ ಮಹಾನಗರಗಳು ಸೃಷ್ಟಿಸಿರುವ ಅವಾಂತರಗಳು. ಇಂದು ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿ ಕೊಳವೆ ಬಾವಿಗಳಲ್ಲಿ ಲಭ್ಯವಾಗುತ್ತಿರುವ ನೀರು ಕುಡಿಯಲು ಬಾರದಷ್ಟು ಅಯೋಗ್ಯವಾಗಿದೆ. ಅಂತರ್ಜಲಕ್ಕೆ ಸೇರುತ್ತಿರುವ ಕಾರ್ಖಾನೆಗಳ ರಸಾಯನಿಕ ತಾಜ್ಯ, ಇ-ತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ವಾಹನಗಳ ಪೆಟ್ರೋಲ್, ಡೀಸಲ್, ಗ್ರೀಸ್ ಇವುಗಳಿಂದಾಗಿ ಅಂತರ್ಜಲ ಕಲುಷಿತವಾಗಿದೆ. ಭೂಮಿಯಲ್ಲಿ ಕರಗಿ ವಿಲೀನವಾದೆ ಉಳಿದ ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯಗಳ ಪರಿಣಾಮವನ್ನು ಈವರೆಗೆ ನಾವು ಗಂಭೀರವಾಗಿ ಪರಿಗಣಿಸಲಿಲ್ಲ.

 ವಿವಿಧ ತ್ಯಾಜ್ಯಗಳು ಕೊಳೆಯುವಾಗ ಉಂಟಾಗುವ ರಸಾಯನಿಕ ವಿಭಜನೆಯಿಂದ ಉತ್ಪತ್ತಿಯಾಗುವ ಇಂಗಾಲದ ಡೈ ಆಕ್ಷೈಡ್, ಮಿಥೇನ್ ವಿಷಾನಿಲ ಇವು ಪರಿಸರಕ್ಕೆ ತೀವ್ರ ಧಕ್ಕೆಯನ್ನುಂಟು ಮಾಡುತ್ತಿವೆ. ಹೀಗೆ ಕೊಳೆತ ತ್ಯಾಜ್ಯದಿಂದ ಬಿಡುಗಡೆಯಾಗುವ ರಸಾಯನಿಕಗಳು ಮಳೆ ನೀರಿನ ಜೊತೆ ಭೂಮಿಯಲ್ಲಿ ಇಂಗಿ ಅಂತರ್ಜಲವನ್ನು ಕಲುಷಿತಗೊಳಿಸುತ್ತಿವೆ. ಇಷ್ಟು ಮಾತ್ರವಲ್ಲದೆ,ಸಮರ್ಪಕವಾಗಿ ವಿಲೇವಾರಿಯಾದ ತ್ಯಾಜ್ಯ ಕೊಳೆತಂತೆ ಅದರಿಂದ ಸೃಷ್ಟಿಯಾಗುವ ಬೆಂಜಿನ್, ಟಾಲೀನ್, ಕ್ಸೈಲಿನ್ ನಂತಹ ಅನಿಲಗಳು ರಕ್ತ ಕ್ಯಾನ್ಸರ್ ನಂತಹ ಮಾರಕ ರೋಗಕ್ಕೆ ಕಾರಣವಾಗುತ್ತಿವೆ. ಒಂದು ಸಮೀಕ್ಷೆಯ ಪ್ರಕಾರ ವಿಶ್ವಾದ್ಯಂತ ಮಹಾ ನಗರಗಳಲ್ಲಿ ಸೃಷ್ಟಿಯಾಗುತ್ತಿರುವ ಕಸದ ರಾಶಿಯಿಂದ ಬಿಡುಗಡೆಯಾಗುತ್ತಿರವ ಮಿಥೇನ್ ಅನಿಲ ಓಜನ್ ಭೂರಕ್ಷಾ ಕವಚಕ್ಕೆ ಶೇ.ಐವತ್ತರಷ್ಟು ಧಕ್ಕೆಯನ್ನುಂಟು ಮಾಡುತ್ತಿದೆ ಎಂದು ವಿಜ್ಞಾನಿಗಳ ಅಂದಾಜಿಸಿದ್ದಾರೆ. ವಿಶ್ವ ಬ್ಯಾಂಕಿನ ಪ್ರಕಾರ ವಾರ್ಷಿಕವಾಗಿ 125 ಕೋಟಿ ಮೆಟ್ರಿಕ್ ಟನ್ ಕಸ ಉತ್ಪಾದನೆಯಾಗುತ್ತಿದ್ದು, ಇದು ಮುಂದಿನ ಒಂಬತ್ತು ವರ್ಷಗಳಲ್ಲಿ ಅಂದರೆ, 2025 ರ ವೇಳೆಗೆ 225 ಕೋಟಿ ಟನ್ ತಲುಪಲಿದೆ ಎಂದು ಅಂದಾಜಿಸಿದೆ.

 ಬೆಂಗಳೂರು ನಗರವೊಂದರಲ್ಲಿ ಪ್ರತಿ ವರ್ಷ ಹದಿಮೂರು ಲಕ್ಷ ಟನ್ ತ್ಯಾಜ್ಯ ಸಂಗ್ರಹಣೆಯಾಗುತ್ತಿದ್ದು, ಇದರಲ್ಲಿ ಶೇ.60 ರಷ್ಟು ಮರು ಸಂಸ್ಕರಣೆಗೆ ಹಾಗೂ ಜೈವಿಕ ಅನಿಲ ಉತ್ಪಾದನೆಗೆ ಅವಕಾಶವಿದ್ದರೂ ಸಹ, ವಿಲೆವಾರಿಗೆ ಪರಿಣಾಮಕಾರಿಯಾದ ಕ್ರಿಯಾ ಯೋಜನೆಗಳನ್ನು ಸರಕಾರ ರೂಪಿಸಿಲ್ಲ. ರಾತ್ರೋ ರಾತ್ರಿ ನಗರದಾಚೆಗಿನ ಹಳ್ಳಿಗಳ ಬಳಿ ಕಸ ಸುರಿದು ಬಂದರೆ ಜವಾಬ್ದಾರಿ ಮುಗಿಯಿತು ಎಂದು ನಮ್ಮ ಜನಪ್ರತಿನಿಧಿಗಳು ಭಾವಿಸಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ಹಳ್ಳಿಗಳ ರೈತರ ಫಲವತ್ತಾದ ಭೂಮಿಯ ಗುಣ ಕ್ಷೀಣಿಸುತ್ತಿದೆ. ಭೂಮಿಯ ಒಡಲು ಸೇರುತ್ತಿರುವ ಪ್ಲಾಸ್ಟಿಕ್‌ನಿಂದಾಗಿ ಮುಕ್ತ ಚಲನೆಗೆ ಅವಕಾಶವಿಲ್ಲದೆ ಎರೆಹುಳುಗಳು ಉಸಿರುಗಟ್ಟಿ ಸಾಯುತ್ತಿದ್ದರೆ, ಸಸ್ಯಗಳು ಆಳಕ್ಕೆ ಬೇರು ಬಿಟ್ಟು ನೀರು ಹಿಡಿದಿಟ್ಟುಕೊಳ್ಳಲಾರದೆ ಒಣಗುತ್ತಿವೆ.

 ಕಸ ಅಥವಾ ತ್ಯಾಜ್ಯ ಸಮಸ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ಇದಕ್ಕೆ ಕೇವಲ ಯೋಜನೆಗಳು ಮಾತ್ರ ಪರ್ಯಾಯವಲ್ಲ, ಕ್ರಿಯಾ ಯೋಜನೆಗಳ ಜೊತೆಗೆ ನಾಗರಿಕರ ಮನೋಭಾವನೆಯನ್ನು ಬದಲಾಯಿಸಬೇಕಾದ ನೈತಿಕ ಜವಾಬ್ದಾರಿ ಸರಕಾರದ ಮೇಲಿದೆ. ಕೆಲವೊಮ್ಮೆ ಅನಿವಾರ್ಯವಾಗಿ ಕಾನೂನಿನ ಮೂಲಕ ಅಪಾಯಕಾರಿ ವಸ್ತುಗಳನ್ನು ವಿಶೇಷವಾಗಿ ತಿನ್ನುವಲ್ಲಿ, ಕುಡಿಯುವಲ್ಲಿ ಬಳಕೆಯಾಗುವ ಪ್ಲಾಸ್ಟಿಕ್ ಹಾಗೂ ಗ್ರಾಹಕರು ವಸ್ತುಗಳನ್ನು ಖರೀದಿಸುವ ಪ್ಲಾಸ್ಟಿಕ್ ಕೈ ಚೀಲವನ್ನು ಸರಕಾರ ಕಡ್ಡಾಯವಾಗಿ ನಿಷೇಧಿಸಬೇಕಿದೆ. ಆಧುನಿಕ ಜಗತ್ತಿನ ನಾಗರಿಕರ ಬದುಕನ್ನು ಪ್ಲಾಸ್ಟಿಕ್ ಅವಲಂಬನೆಯಿಂದ ದೂರವಿರಿಸಿದಾಗ ಮಾತ್ರ ಈ ಜಗತ್ತಿನ ತ್ಯಾಜ್ಯಾ ವಿಲೇವಾರಿ ಸಮಸ್ಯೆಗೆ ಮುಕ್ಕಾಲು ಭಾಗ ಪರಿಹಾರ ದೊರಕಿದಂತಾಗುತ್ತದೆ.

share
ಜಗದೀಶ್ ಕೊಪ್ಪ
ಜಗದೀಶ್ ಕೊಪ್ಪ
Next Story
X