ಕುತ್ಬುದ್ದೀನ್ ಅನ್ಸಾರಿಯ ಬದುಕನ್ನೂ ಗೌರವಿಸಿ!
ಮಾನ್ಯರೆ,
2002ರ ಗುಜರಾತ್ ಗಲಭೆ ಸಂದರ್ಭ ಮತಾಂಧ ಶಕ್ತಿಗಳ ಸಾವಿನೇಟಿನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಪರಿಪರಿಯಾಗಿ ಬೇಡುವ ಕುತ್ಬುದ್ದೀನ್ ಅನ್ಸಾರಿ ಚಿತ್ರವೇ ಗುಜರಾತ್ ಗಲಭೆಯ ಭೀಕರತೆಗೆ ಸಾಕ್ಷಿಯಾಗಿತ್ತು. ಆದರೆ ವಿಷಾದನೀಯವೆಂದರೆ ಆ ಘೋರ ದುರಂತ ನಡೆದು ಹದಿನಾಲ್ಕು ವರ್ಷಗಳಾದರೂ ಜಾತ್ಯತೀತವೆನಿಸಿಕೊಂಡಿರುವ ಪಕ್ಷಗಳು ಆ ಚಿತ್ರವನ್ನೇ ಪೋಸ್ಟರ್‌ಗಳಾಗಿ ಬಳಸಿಕೊಂಡು ರಾಜಕೀಯ ಲಾಭ ಪಡೆದುಕೊಳ್ಳುತ್ತಿವೆ. ಗುಜರಾತ್‌ನ ಬಿರ್ಜು ನಗರ್ ಎಂಬಲ್ಲಿ ವಾಸಿಸುತ್ತಿರುವ ಅನ್ಸಾರಿ ಕುಟುಂಬದ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದನ್ನು ಅವರೇ ಸ್ಪಷ್ಟಪಡಿಸಿದ್ದಾರೆ. ‘‘ನನ್ನ ಮಕ್ಕಳು ಪ್ರತೀ ಬಾರಿಯೂ ಈ ಚಿತ್ರದಲ್ಲಿ ಕೈ ಮುಗಿದು ಬೇಡುವ ಬಗ್ಗೆ ಪ್ರಶ್ನಿಸುತ್ತಿದ್ದಾರೆ’’ ಎಂದು ಸ್ವತಃ ಅನ್ಸಾರಿಯವರೇ ಹೇಳಿದ್ದಾರೆ.ಕಾಂಗ್ರೆಸ್ ಪಕ್ಷವು ಗುಜರಾತ್ ಗಲಭೆ ಚಿತ್ರಗಳನ್ನು ಹಿಡಿದುಕೊಂಡು ರಾಜಕೀಯ ಮಾಡುವ ಬದಲು ಜೀವನ ನಡೆಸಲು ಕಷ್ಟಪಡುತ್ತಿರುವ ಅನ್ಸಾರಿ ಕುಟುಂಬಕ್ಕೆ ತುಸುವಾದರೂ ಸಹಕಾರ ನೀಡುತ್ತಿದ್ದರೆ..? 2002ರ ನಂತರ ಯುಪಿಎ ಸರಕಾರ ಆಡಳಿತಕ್ಕೆ ಬಂದಿಲ್ಲವೇ.?ಈ ಸಮಯದಲ್ಲಾದರೂ ಕಾಂಗ್ರೆಸ್ ಪಕ್ಷಕ್ಕೆ ಗುಜರಾತ್ ಗಲಭೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬಹುದಿತ್ತಲ್ಲವೇ? ಅದೆಲ್ಲವನ್ನೂ ಬಿಟ್ಟು ಇದೀಗ ಅಸ್ಸಾಂನಲ್ಲಿ ನಡೆದ ಚುನಾವಣೆ ಲಾಭಕ್ಕಾಗಿ ಅನ್ಸಾರಿ ಚಿತ್ರವನ್ನು ಎಳೆದು ತರುವಂಥದ್ದಾಗಲಿ ಅಥವಾ ಅವರ ಹೆಸರಲ್ಲಿ ರಾಜಕೀಯ ಮಾಡುವುದಾಗಲಿ ಸರಿಯೆನಿಸದು. ಅಲ್ಪಸಂಖ್ಯಾತ ಹೆಸರಲ್ಲಿ ವೋಟು ಪಡೆಯೋ ಜಾತ್ಯತೀತರೆನಿಸಿಕೊಂಡಿರುವ ಪಕ್ಷಗಳು ಅಲ್ಪಸಂಖ್ಯಾತರ ಏಳಿಗೆಗಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸದ ಪರಿಣಾಮವೇ ರಾಷ್ಟ್ರಾದ್ಯಂತ ಕಾಂಗ್ರೆಸ್ ಪಕ್ಷ ಮೂಲೆಗುಂಪಾಗಲು ಕಾರಣ.
ಕುತ್ಬುದ್ದೀನ್ ಅನ್ಸಾರಿ ಹೆಸರಲ್ಲಿ ರಾಜಕೀಯ ಮಾಡುವ ಯಾವುದೇ ಪಕ್ಷಕ್ಕಾಗಲಿ ನಾಚಿಕೆಯೆನಿಸಬೇಕು. ತಾನಾಯಿತು ತನ್ನ ಪಾಡಾಯಿತು ಅನ್ನುವ ಹಾಗೆ ಟೈಲರಿಂಗ್ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಬಡಪಾಯಿ ಅನ್ಸಾರಿಗೂ ತಮ್ಮಂತೆ ವೈಯಕ್ತಿಕ ಜೀವನವಿದೆ ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಯಾವುದೋ ಸೆಲೆಬ್ರಿಟಿಯ ಫೋಟೊ ಪ್ರದರ್ಶಿಸಿದಂತೆ ಬಿಂಬಿಸುವ ಇಂತಹ ಪಕ್ಷಗಳಿಗೆ ಅನ್ಸಾರಿ ಮಾತು ಖಡಕ್ ಎಚ್ಚರಿಕೆಯಾಗಲಿ..





