ಪಶ್ಚಿಮದ ದೊಡ್ಡ ದೇಶವೊಂದಕ್ಕೆ ಮೂವರು ‘ರಾ’ ಅಧಿಕಾರಿಗಳ ಪಕ್ಷಾಂತರ
ಭಾರತದ ಬಾಹ್ಯ ಗೂಢಚರ್ಯೆ ಸಂಸ್ಥೆ, ಸಂಶೋಧನೆ ಮತ್ತು ವಿಶ್ಷೇಷಣ ಘಟಕದ (ರಾ) ಮೂವರು ಅಧಿಕಾರಿಗಳು ‘ಉದ್ದೇಶಪೂರ್ವಕವಾಗಿ’ ಕಾಣೆಯಾಗಿದ್ದಾರೆ. ಅವರೀಗ ಪಶ್ಚಿಮದ ದೊಡ್ಡ ದೇಶವೊಂದರಲ್ಲಿ ಇರುವ ಸಾಧ್ಯತೆಯಿದೆ. ಆ ದೇಶವು ಭಾರತೀಯ ಗೂಢಚರ್ಯೆ ಅಧಿಕಾರಿಗಳ ಅಂತಹ ಕಾಣೆಯಾಗುವಿಕೆಯನ್ನು ಅಂಗೀಕರಿಸುವ ಹಾಗೂ ಅನುಕೂಲ ಕಲ್ಪಿಸುವ ಚರಿತ್ರೆಯನ್ನೇ ಹೊಂದಿದೆಯೆಂದು ‘ದಿ ಸಂಡೇ ಗಾರ್ಡಿಯನ್’ ವರದಿ ಮಾಡಿದೆ.
ಬೆಳವಣಿಗೆಯ ಕುರಿತು ಉತ್ತರ ಬಯಸಿ ‘ರಾ’ದ ನಿಯಂತ್ರಕ, ಸಂಪುಟ ಕಾರ್ಯಾಲಯಕ್ಕೆ ಎರಡು ವಾರಗಳಿಂದ ಕಳುಹಿಸಿರುವ ಇ-ಮೇಲ್‌ಗಳಿಗೆ ನಿರಾಕರಣೆಯಾಗಲಿ, ಅಂಗೀಕಾರವಾಗಲಿ ಲಭ್ಯವಾಗಿಲ್ಲ.
‘ರಾ’ದಲ್ಲಿ ಉನ್ನತ ಮಟ್ಟದಲ್ಲಿ ನಿಯೋಜನೆ ಗೊಂಡಿದ್ದ ಒಬ್ಬ ಅಧಿಕಾರಿ ಸೇರಿದಂತೆ ಈ ‘ರಾ’ ಅಧಿಕಾರಿಗಳು, ತಾವು ಕಾಣೆಯಾಗುವುದಕ್ಕೆ ಬಹಳ ಮೊದಲೇ ತಮ್ಮ ಕುಟುಂಬಗಳನ್ನು ಆ ಪಶ್ಚಿಮದ ದೇಶಕ್ಕೆ ಸ್ಥಳಾಂತರಿಸಿದ್ದರು. ಅವರ ಕಾಣೆಯಾಗುವಿಕೆಯು ಕಳೆದ ಮೂರು ತಿಂಗಳಲ್ಲಿ ನಡೆದಿದೆಯೆಂದು ಪತ್ರಿಕೆ ಹೇಳಿದೆ. ಅವರಲ್ಲಿ ಇಬ್ಬರು ಅಧಿಕಾರಿಗಳು ದಕ್ಷಿಣ ಏಶ್ಯದ ದೇಶಗಳಲ್ಲಿ ಗೂಢಚಾರಿಕೆ ನಿಭಾಯಿಸುತ್ತಿದ್ದರೆ, ಮೂರನೆಯವರು ಪೂರ್ವ ಏಶ್ಯದ ದೊಡ್ಡ ದೇಶವೊಂದರಲ್ಲಿ ಗೂಢಚರ್ಯೆ ನಡೆಸುತ್ತಿದ್ದರು.
ಈ ಮೂವರು ಅಧಿಕಾರಿಗಳು ದೀರ್ಘಕಾಲದಿಂದ ಪಶ್ಚಿಮದ ದೇಶಕ್ಕಾಗಿ ಗೂಢಚರ್ಯೆ ನಡೆಸುತ್ತಿದ್ದರೆಂದು ಭಾವಿಸಲಾಗಿದೆ ಹಾಗೂ ಕಾಣೆಯಾಗುವುದಕ್ಕೆ ಮೊದಲು ಆ ದೇಶದ ಗೂಢಚರ್ಯೆ ಸಂಸ್ಥೆಗೆ ಪ್ರಮುಖ ಮಾಹಿತಿಯನ್ನು ನೀಡಿರುವ ಎಲ್ಲ ಸಾಧ್ಯತೆಗಳಿವೆ.
ಈ ನಿರ್ದಿಷ್ಟ ಪಶ್ಚಿಮದ ದೇಶದಲ್ಲಿ ಅಂತಹ ಪಕ್ಷಾಂತರವನ್ನು ನಿಭಾಯಿಸುವ ಎರಡು ಇಲಾಖೆಗಳಿಗೆ ಕಳುಹಿಸಿದ ಇ-ಮೇಲ್‌ಗಳಿಗೆ, ಮತ್ತೆ ಮತ್ತೆ ಪ್ರಯತ್ನಿಸಿದರೂ ನಿರಾಕರಣೆ ಅಥವಾ ದೃಢಪಡಿಸುವಿಕೆಯಂತಹ ಯಾವುದೇ ಪ್ರತ್ಯುತ್ತರ ಬಂದಿಲ್ಲ.
ಭಾರತೀಯ ಗೂಢಚರ್ಯೆ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳು ‘ಉದ್ದೇಶಪೂರ್ವಕವಾಗಿ’ ಕಾಣೆಯಾಗುತ್ತಿ ರುವುದು ಇದೇ ಮೊದಲಲ್ಲ. ಇಂತಹ ಅನೇಕ ಅಧಿಕೃತ ದಾಖಲೆಯ ಪ್ರಕಾರ ಕನಿಷ್ಠ 9 ಘಟನೆಗಳು 1968ರಲ್ಲಿ ಈ ಸಂಸ್ಥೆ ಸ್ಥಾಪನೆಯಾದಾಗಿನಿಂದ ನಡೆದಿವೆ. ಅವುಗಳಲ್ಲಿ, ‘ರಾ’ದ ಜಂಟಿ ಕಾರ್ಯದರ್ಶಿಯಾಗಿದ್ದ ರಬೀಂದರ್ ಸಿಂಗ್ ಎಂಬವರು 2004ರಲ್ಲಿ ಅಮೆರಿಕಕ್ಕೆ ಪಕ್ಷಾಂತರ ಮಾಡಿರುವುದೂ ಸೇರಿದೆ.
2004ರಲ್ಲಿ ರಬೀಂದರ್ ಸಿಂಗ್, ಸಿಐಎಯ ಸಹಾಯದಿಂದ ತನ್ನ ಹೆಂಡತಿಯೊಂದಿಗೆ ಕಠ್ಮಂಡು ಮೂಲಕ ಅಮೆರಿಕಕ್ಕೆ ಪಕ್ಷಾಂತರಿಸಿದ್ದರು. ಅವರು ನ್ಯೂಜೆರ್ಸಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಗಡಿಪಾರಿಗಾಗಿ ಸಂಸ್ಥೆ ಪ್ರಯತ್ನಿಸುತ್ತಿದೆಯೆಂದು 2006ರಲ್ಲಿ ದಿಲ್ಲಿಯ ನ್ಯಾಯಾಲಯವೊಂದಕ್ಕೆ ‘ರಾ’ ತಿಳಿಸಿತ್ತು.
ಭದ್ರತಾ ಸಂಸ್ಥೆಯ ಅಧಿಕಾರಿಗಳ ಪ್ರಕಾರ, ಬೇರೆ ದೇಶದಲ್ಲಿ ಈ ರೀತಿ ಆಶ್ರಯ ಪಡೆದ ಗೂಢಚಾರರನ್ನು ಹಿಂದಕ್ಕೆ ಕರೆಸುವುದು ಅಕ್ಷರಶಃ ಅಸಾಧ್ಯ. ಅವರಿಗೆ ಹೊಸ ಗುರುತನ್ನು ನೀಡಿ, ಆಸ್ತಿಯಂತೆ ಪರಿಗಣಿಸಿ ರಕ್ಷಣೆ ನೀಡಲಾಗುತ್ತದೆ. ಕಾಲ ಕ್ರಮೇಣ ಅವರಿಗೆ ಆ ದೇಶದ ಪೌರತ್ವವನ್ನೂ ನೀಡಲಾಗುತ್ತದೆ.
ಈ ದಗಲೆ ಮೇಲಂಗಿ ಮತ್ತು ಚೂರಿಗಳ ಆಟದಲ್ಲಿ ಪಕ್ಷಾಂತರ ಅತ್ಯಂತ ಅಪೂರ್ವವೇನಲ್ಲ. 1980ರ ಕೊನೆಯಲ್ಲಿ, ಕೆಜಿಬಿಯ ಏಜೆಂಟ್ ಈಗರ್ ಗೆಜೊ ಎಂಬಾತ ನಿಗೂಢ ಸನ್ನಿವೇಶದಲ್ಲಿ ದಿಲ್ಲಿಯಿಂದ ಮಾಯವಾಗಿದ್ದನು. ಅವನ ಕೆಂಪು ಬಣ್ಣದ ಲಾಡಾ ವಾಝ್ ಕಾರು, ಆತ ಯಾವಾಗಲೂ ಸಂಜೆಯ ವಿಹಾರಕ್ಕೆ ಹೋಗುತ್ತಿದ್ದ ಲೋಧಿ ಗಾರ್ಡನ್ ಪ್ರದೇಶದಲ್ಲಿ ಅನಾಥವಾಗಿ ಪತ್ತೆಯಾಗಿತ್ತು. ಭಾರತೀಯ ಗೂಢಚರ್ಯೆ ಸಂಸ್ಥೆಗಳು ಹುಡುಕುತ್ತಿದ್ದಾಗ, ಕೆಲವು ದಿನಗಳ ಬಳಿಕ ಗೆಜೊ ನ್ಯೂಯಾರ್ಕ್‌ನಲ್ಲಿ ಪ್ರತ್ಯಕ್ಷವಾಗಿದ್ದನು. ಅವನು ಸೋವಿಯತ್ ರಶ್ಯದಿಂದ ಅಮೆರಿಕಕ್ಕೆ ಪಕ್ಷಾಂತರಗೊಂಡಿದ್ದುದು ಖಚಿತವಾಗಿತ್ತು.
ಸಶಸ್ತ್ರ ಸೇನೆಗಳ ಅಧಿಕಾರಿಗಳು ಹಾಗೂ ಹಿರಿಯ ಆಡಳಿತಾಧಿಕಾರಿಗಳು ವಿದೇಶಗಳ ಗೂಢಚರ್ಯೆ ಸಂಸ್ಥೆಗಳಿಗಾಗಿ ಕೆಲಸ ಮಾಡಲು ರಾಜಿಯಾಗಿದ್ದ ಬೇಕಾದಷ್ಟು ಕತೆಗಳಿವೆ.
ಒಬ್ಬ ನಿವೃತ್ತ ಏರ್ ಮಾರ್ಶಲ್ ಹಾಗೂ ಮತ್ತೊಬ್ಬ ಪದಕ ವಿಜೇತ ಮೇಜರ್ ಜನರಲ್ ಆಗಿದ್ದ. ಲಾರ್ಕಿನ್ ಸಹೋದರರನ್ನೊಳಗೊಂಡ ಗೂಢಚಾರರ ಹಗರಣವು ಇವುಗಳಲ್ಲಿ ಕುಖ್ಯಾತವಾಗಿದೆ. ಇದು ಪಶ್ಚಿಮದ ಗೂಢಚರ್ಯೆ ಸಂಸ್ಥೆಗಳು ಹೇಗೆ ದೇಶದ ಅನೇಕ ಗೌಪ್ಯಗಳನ್ನು ತಿಳಿದಿದ್ದ ಇಬ್ಬರನ್ನು ಯಶಸ್ವಿಯಾಗಿ ನೇಮಿಸಿಕೊಂಡವೆಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ.
1960 ದಶಕದಲ್ಲಿ ಭಾರತದ ಒಂದು ಆಂತರಿಕ ಸಂಘರ್ಷದ ಸಂದರ್ಭದಲ್ಲಿ ರಕ್ಷಣಾ ವ್ಯವಸ್ಥೆಯ ಮಾಜಿ ಮುಖ್ಯಸ್ಥರೊಬ್ಬರು ಅಮೆರಿಕನ್ನರೊಂದಿಗೆ ನಿಕಟ ಸಂಬಂಧ ಹೊಂದಿದ್ದ ಆರೋಪವಿತ್ತು. ಸಿಐಎಗೆ ನಿಕಟವಾಗಿದ್ದ ಹಲವು ರಾಜಕಾರಣಿಗಳ ಹೆಸರುಗಳು ಖ್ಯಾತ ಲೇಖಕ ಹಾಗೂ ಪತ್ರಕರ್ತ ಸೇಮರ್ ಹೆರ್ಶ್ ಬರೆದಿರುವ ಪುಸ್ತಕವೊಂದರಲ್ಲಿವೆ.