ಗುತ್ತಿಗೆ ಕಾರ್ಮಿಕರಿಗೆ 10,000 ರೂ. ಕನಿಷ್ಠ ವೇತನ ನೀಡಲು ಶೀಘ್ರವೇ ಆದೇಶ
.jpg)
ಹೈದರಾಬಾದ್,ಎ.17: ಗುತ್ತಿಗೆ ಕಾರ್ಮಿಕರಿಗೆ ಮಾಸಿಕ 10,000 ರೂ.ಕನಿಷ್ಠ ವೇತನ ಲಭಿಸುವಂತಾಗಲು ಕೇಂದ್ರವು ಶೀಘ್ರವೇ ಕಾರ್ಯಕಾರಿ ಆದೇಶವನ್ನು ಹೊರಡಿಸಲಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಬಂಡಾರು ದತ್ತಾತ್ರೇಯ ಅವರು ರವಿವಾರ ಇಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕಾರ್ಮಿಕ ಕಾನೂನುಗಳಲ್ಲಿ ಸುಧಾರಣೆಗಳನ್ನು ತರಲು ಮತ್ತು ಕನಿಷ್ಠ ವೇತನವನ್ನು ಹೆಚ್ಚಿಸಲು ಕೇಂದ್ರ ಸರಕಾರವು ಪ್ರಯತ್ನಿಸುತ್ತಿದೆ. ಆದರೆ ಸಂಸತ್ತಿನಲ್ಲಿ ಪ್ರತಿಪಕ್ಷವು ಸಹಕರಿಸುತ್ತಿಲ್ಲ, ಹೀಗಾಗಿ ಕಾರ್ಯಕಾರಿ ಆದೇಶದ ಮೂಲಕ ನಾವದನ್ನು ಮಾಡಲಿದ್ದೇವೆ ಎಂದರು.
ಗುತ್ತಿಗೆ ಕಾರ್ಮಿಕ(ನಿಯಂತ್ರಣ ಮತ್ತು ನಿವಾರಣೆ) ಕೇಂದ್ರ ನಿಯಮಾವಳಿಗಳ ನಿಯಮ 25ರಲ್ಲಿ ಬದಲಾವಣೆಗಳನ್ನು ತರಲು ಸರಕಾರವು ನಿರ್ಧರಿಸಿದೆ ಮತ್ತು ಪ್ರತಿ ಗುತ್ತಿಗೆ ಕಾರ್ಮಿಕ ಪ್ರತಿ ತಿಂಗಳು ಕನಿಷ್ಠ 10,000 ರೂ.ವೇತನ ಪಡೆಯಲು ಹಕ್ಕನ್ನು ಹೊಂದಲಿದ್ದಾನೆ ಎಂದರು.
ಶೀಘ್ರವೇ ಈ ಬಗ್ಗೆ ಅಧಿಸೂಚನೆ ಹೊರಬೀಳಲಿದ್ದು,ಆ ಬಳಿಕ ಎಲ್ಲ ರಾಜ್ಯ ಸರಕಾರಗಳು ಈ ನಿರ್ಧಾರವನ್ನು ಜಾರಿಗೆ ತರಲಿವೆ ಎಂದು ಬಂಡಾರು ತಿಳಿಸಿದರು.





