ಬೊಮ್ಮನ ಹಳ್ಳಿಯಲ್ಲಿ ಹಿಂಸೆಗೆ ತಿರುಗಿದ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ
ಕಲ್ಲು ತೂರಾಟದಿಂದ ಪೊಲೀಸರಿಗೆ , ಮಹಿಳೆಯರಿಗೆ ಗಾಯ

ಬೆಂಗಳೂರು, ಎ.18: ಕೇಂದ್ರ ಸರಕಾರದ ಹೊಸ ಕಾರ್ಮಿಕ ನೀತಿಯನ್ನು ಖಂಡಿಸಿ ಬೊಮ್ಮನ ಹಳ್ಳಿಯಲ್ಲಿ ಇಂದು ಐದು ಗಾರ್ಮೆಂಟ್ ಸಂಸ್ಥೆಗಳ ಸಹಸ್ರಾರು ಮಂದಿ ಕಾರ್ಮಿಕರು ಇಂದು ನಡೆಸಿದ ಪ್ರತಿಭಟನೆಯ ವೇಳೆ ಹಿಂಸಾಚಾರ ಉಂಟಾಗಿ ಪೊಲೀಸರು, ಮಹಿಳೆಯರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಆನೇಕ ವಾಹನಗಳು ಜಖಂಗೊಂಡಿದೆ.
ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಮಿಕರು ಕಲ್ಲು ತೂರಾಟ ನಡೆಸಿದ ಪರಿಣಾಮವಾಗಿ ಕೆಲ ಪೊಲೀಸರಿಗೂ ಗಾಯವಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಗಾಯಗೊಂಡಿದ್ದಾರೆ. ಇಬ್ಬರು ಪೊಲೀಸರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕಾರ್ಮಿಕರು ನಡೆಸಿದ ಕಲ್ಲು ತೂರಾಟದಿಂದಾಗಿ ಐದು ಪೊಲೀಸ್ ವಾಹನಗಳು ಸೇರಿದಂತೆ ಹಲವು ವಾಹನಗಳಿಗೆ ಹಾನಿಯಾಗಿದೆ. ಸುಮಾರು ಹತ್ತು ಸಾವಿರ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದರು. ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಬೊಮ್ಮನಹಳ್ಳಿಯಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ. ಪರಿಸ್ಥಿತಿ ಪೊಲೀಸರ ನಿಯಂತ್ರಣದಲ್ಲಿದ್ದು, ಸ್ಥಳದಲ್ಲಿ ಬಿಗು ಬಂದೋಬಸ್ತ್ ಮಾಡಲಾಗಿದೆ.





