ಅವಳು ಮದುವೆಗೆ ಒಪ್ಪದೆ ಧರಣಿ ಕೂತಲ್ಲಿಂದ ಏಳಲೇ ಇಲ್ಲ!
ಬಡೌತ್, ಎಪ್ರಿಲ್ 18: ಬಡೌತ್ ಠಾಣೆ ವ್ಯಾಪ್ತಿಯ ಛಛರಾಪುರ್ ಗ್ರಾಮದಲ್ಲಿ ಶನಿವಾರ ರಾತ್ರೆ ಮದುವೆ ನಿರಾಕರಿಸಿದ್ದಕ್ಕಾಗಿ ಪ್ರಿಯತಮನ ಮನೆಗೆ ಬಂದ ಪ್ರಿಯತಮೆ ಹಕ್ಕೊತ್ತಾಯ ಮಂಡಿಸಿ ಧರಣಿಕೂತಾಗ ಎಲ್ಲರೂ ತಬ್ಬಿಬ್ಬಾಗಿದ್ದರು ಎಂದು ವರದಿಯಾಗಿದೆ.
ಯುವತಿಯ ಹಠವನ್ನು ನೋಡಿ ಕೊನೆಗೂ ಆಕೆಯ ಪ್ರಿಯತಮ ಮತ್ತು ಅವನ ಮನೆಯವರು ಮದುವೆಗೆ ಒಪ್ಪಿಕೊಂಡರು. ನಂತರವೇ ಯುವತಿ ಮತ್ತು ಅವಳ ಮನೆಯವರು ನಿಕಾಹ್‌ನ ಆಶ್ವಾಸನೆ ಪಡೆದು ಮರಳಿ ಹೋದರು. ಛಛರಾಪುರ ಗ್ರಾಮದ ಯುವಕನೊಬ್ಬ ದಿಲ್ಲಿಯ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಅಲ್ಲಿಯೇ ಸೋನಿಯಾ ಎಂಬ ಯುವತಿ ಕೆಲಸ ಮಾಡುತ್ತಿದ್ದಾಳೆ. ಅವರಿಬ್ಬರಿಗೆ ಪ್ರೇಮ ಆಂಕುರಿಸಿತ್ತು. ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸಿದ್ದರು. ಆದರೆ ಯುವಕನ ಮನೆಯವರು ಇವರಿಬ್ಬರ ಮದುವೆ ಸಮ್ಮತಿಸುತ್ತಿರಲಿಲ್ಲ.ಆದ್ದರಿಂದ ಅವನು ಮನಸು ಬದಲಾಯಿಸಿ ಬೇರೆ ಮದುವೆ ಆಗಲು ಸಿದ್ಧನಾಗಿದ್ದ. ಇದನ್ನು ತಿಳಿದ ಸೋನಿಯಾ ಗ್ರಾಮಕ್ಕೆ ಬಂದು ಯುವಕನ ಮನೆಯವರಲ್ಲಿ ವಿನಂತಿಸಿ ಕೊಂಡಿದ್ದಾಳೆ ಆದರೆ ಅವರು ಮದುವೆಗೆ ಒಪ್ಪಲು ಸಿದ್ಧರಾಗಲಿಲ್ಲ. ಇದರಿಂದ ಬೇಸತ್ತ ಯುವತಿ ಮನೆಯ ಹೊರಗಡೆ ಧರಣಿ ಕುಳಿತೇ ಬಿಟ್ಟಳು.
ಇದರಿಂದಾಗಿ ನೆರೆಹೊರೆಯವರು ಬಂದು ಸೇರಿದರು. ಯುವಕನ ಮನೆಯವರು ಯುವತಿಯ ಮನೆಯವರಿಗೆ ಸುದ್ದಿ ಮುಟ್ಟಿಸಿದರು. ಅವರು ಕೂಡಾ ಬಂದರು ಕೊನೆಗೆ ಎರಡೂ ಮನೆಯವರು ಅವರಿಬ್ಬರ ಮದುವೆಗೆ ಒಪ್ಪಿಕೊಂಡರು ಎಂದು ವರದಿಯಾಗಿದೆ. ಸ್ಥಳೀಯ ಠಾಣಾಧಿಕಾರಿ ವಿಕೆ ಸಿಂಗ್ ಎರಡು ಕಡೆಯವರು ಮದುವೆಗೆ ಒಪ್ಪಿಕೊಂಡರೆಂದ ಮೇಲೆ ಪ್ರಕರಣ ದಾಖಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿರುವುದಾಗಿ ವರದಿಗಳು ತಿಳಿಸಿವೆ.





