ಸುಳ್ಯ: ರಂಗಮನೆಯಲ್ಲಿ ರಾಜ್ಯಮಟ್ಟದ ಚಿಣ್ಣರ ಮೇಳ ಸಮಾರೋಪ

ಸುಳ್ಯ: ಜೀವನದಲ್ಲಿ ಸಂಭ್ರಮ ಎನ್ನುವುದೇ ಜೀವ. ಶಿಬಿರದ ಉದ್ದೇಶವೂ ಜೀವಗಳಿಗೆ ಸಂಭ್ರಮಕೊಡುವುದು. ನಿಧಾನ ಗತಿಯಲ್ಲಿ ಜೀವಗಳಿಗಳಿಗೆ ಸಾವು ಭಾರದಂತೆ ನೋಡಿಕೊಳ್ಳುವುದು ಎಂದು ರಂಗಕರ್ಮಿ ಹಾಗೂ ನಿವೃತ್ತ ಉಪನ್ಯಾಸಕ ಶ್ರೀಧರ ಮೂರ್ತಿ ಪುಂಜ ಹೇಳಿದರು.
ಅವರು ಸುಳ್ಯದ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆಯ ಆಶ್ರಯದಲ್ಲಿ ನಡೆಯುವ ರಾಜ್ಯಮಟ್ಟದ ಚಿಣ್ಣರ ಮೇಳದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಮನುಷ್ಯ ಬುದ್ಧಿವಲಯ ಮತ್ತು ಭಾವ ವಲಯಕ್ಕೆ ಪ್ರಾಮುಖ್ಯತೆ ಕೊಡಬೇಕು. ಇದರಿಂದ ಉತ್ತಮ ಶಿಕ್ಷಣ ಸಿಗುತ್ತದೆ. ಅದರ ಮೂಲಕ ಮಕ್ಕಳು ಉತ್ತಮ ಪ್ರಜೆಗಳಾಗಿ ಬೆಳೆಯುತ್ತಾರೆ ಎಂದರು.
ಸುಳ್ಯ ಸೈಂಟ್ ಬ್ರಿಜಿಡ್ಸ್‌ಚರ್ಚ್‌ನ ಧರ್ಮಗುರು ವಿನ್ಸೆಂಟ್ ಡಿ’ಸೋಜ ಮಾತನಾಡಿ ಮಕ್ಕಳ ಜೀವನದಲ್ಲಿ ಸಂಸ್ಕಾರವನ್ನು ತುಂಬುವ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಸೂಸುವ ಕೆಲಸ ರಂಗಮನೆ ಮಾಡುತ್ತಿದೆ ಇದು ಶ್ಲಾಘನೀಯ ಎಂದರು. ರಂಗಮನೆ ರೂವಾರಿ ಜೀವನ್‌ರಾಂ ಸುಳ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ ರಂಗಮನೆಯಲ್ಲಿ ಮಕ್ಕಳು ಸಾವೇ ಇಲ್ಲದ ಜೀವವನ್ನು ತುಂಬಿದ್ದಾರೆ. ಪ್ರತಿ ಮಕ್ಕಳು ಒಬ್ಬರೊಂದಿಗೆ ಒಬ್ಬರು ಬೆರೆತು ಸಂಭ್ರಮದ ಜೀವ ತುಂಬಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್.ಮನ್ಮಥ, ಉಪನ್ಯಾಸಕಿ ಮೀನಾಕುಮಾರಿ, ಆಶಾ ಬೆಳ್ಳಾರೆ ಭಾಗವಹಿಸಿದರು.
ಡಾ ಸುಂದರ ಕೇನಾಜೆ ವಂದಿಸಿದರು. ಡಾ ವೀಣಾ ಕಾರ್ಯಕ್ರಮ ನಿರೂಪಿಸಿದರು.







