ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಮಾನಾವಕಾಶ ನೀಡದಿದ್ದರೆ ನಾಟಾಕ್ಕೆ ವೋಟು ಹಾಕುತ್ತೇವೆ
ಕೇರಳ ಮಹಿಳಾ ಒಕ್ಕೂಟದಿಂದ ರಾಜಕೀಯ ಪಕ್ಷಗಳಿಗೆ ಸವಾಲು!

ಕೋಝಿಕ್ಕೋಡ್, ಎಪ್ರಿಲ್. 18: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಅರ್ಧದಷ್ಟು ಸ್ಥಾನಗಳಲ್ಲಿ ಮಹಿಳೆಯರಿಗೆ ಸ್ಪರ್ಧೆಗೆ ಅವಕಾಶ ಒದಗಿಸದಿದ್ದರೆ ನಾವು ನಾಟಾಕ್ಕೆ ಮತದಾನ ಮಾಡಲಿದ್ದೇವೆ ಎಂದು ಮಹಿಳಾ ಪರ- ಸಾಂಸ್ಕೃತಿಕ ಸಂಘಟನೆಯೊಂದು ಪತ್ರಿಕಾಗೋಷ್ಠಿ ನಡೆಸಿ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ. ಚುನಾವಣೆಯಲ್ಲಿ ಲಿಂಗತಾರತಮ್ಯ ನಡೆಸಿದರೆ ಈ ಮಹಿಳೆಯರ ಒಕ್ಕೂಟ ರಾಜ್ಯಾದ್ಯಂತ ಪ್ರಚಾರ ಆರಂಭಿಸುತ್ತದೆಂದೂ ಅದು ತಿಳಿಸಿದೆ. ಕೇರಳದಲ್ಲಿ ಪುರುಷ ಮತದಾರರಿಗಿಂತ ಮಹಿಳೆ ಮತದಾರರೇ ಹೆಚ್ಚಿದ್ದಾರೆ. ಹೀಗಿದ್ದೂ ಮಹಿಳಾ ಸ್ಪರ್ಧಿಗಳ ಸಂಖ್ಯೆ ಕೇವಲ ಶೆ.10ರಷ್ಟಿದೆ ಇದು ವಿಷಾದನೀಯ ಎಂದ ಅದು ಪರಿಚಯ ಸಂಪತ್ತು ಕಾರ್ಯದಕ್ಷತೆ ಇರುವ ಅದೆಷ್ಟೋ ಮಹಿಳೆಯರಿದ್ದರೂ ಅವರನ್ನೆಲ್ಲ ಪಕ್ಷಗಳು ಕಡೆಗಣಿಸುತ್ತಿವೆ ಎಂದು ಅದು ಹೇಳಿದೆ. ಈಗ ಮಹಿಳೆ ಮತದಾರರು ಕಡಿಮೆ ಇರುವ ಸ್ಥಳಗಳಲಿ ಮಹಿಳೆಯರಿಗೆ ಟಿಕೆಟು ನೀಡಲಾಗುತ್ತಿದೆ. ಇತರ ಹೆಚ್ಚಿನ ಕ್ಷೇತ್ರಗಳನ್ನು ಪುರುಷರಿಗೆ ಮೀಸಲಿಡಲಾಗಿದೆ. ಈ ರೀತಿ ಮಹಿಳೆಯರನ್ನು ಅಧಿಕಾರಕ್ಕೆ ಬರದಂತೆ ತಡೆಯಲಾಗುತ್ತಿದೆ ಎಂದು ಅದು ಹೇಳಿದೆ. ಬರಹಗಾರ್ತಿ ದೀದಿ ದಾಮೋದರರ ನೇತೃತ್ವದದಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿಈ ಮಹಿಳಾ ಸಂಘಟನೆಯಲ್ಲಿ ನೂರಾರು ಮಂದಿ ಮಹಿಳೆಯರು ಸೇರಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಡಾ.ಪಿ. ಗೀತಾ, ಡಾ. ಜಾನ್ಸಿ ಜೋಸೆಫ್, ಅಡ್ವೋಕೇಟ್ ಸುಧಾ ಹರಿದ್ವಾರ್, ಎಂ. ಝುಲ್ಫತ್, ದಿವ್ಯಾಎಂಬವರು ಉಪಸ್ಥಿತರಿದ್ದರು ಎಂದು ವರದಿಗಳು ತಿಳಿಸಿವೆ.





