ಮಲ್ಯ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

ಮುಂಬೈ,ಎ.18: ಇಲ್ಲಿಯ ವಿಶೇಷ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ನ್ಯಾಯಾಲಯವು ಸೋಮವಾರ ಮಾಜಿ ಮದ್ಯದ ದೊರೆ ವಿಜಯ ಮಲ್ಯ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್‌ನ್ನು ಹೊರಡಿಸಿದೆ. ಮಲ್ಯ ಅವರು ಐಡಿಬಿಐ ಬ್ಯಾಂಕಿನಿಂದ ಪಡೆದಿದ್ದ 900 ಕೋ.ರೂ.ಸಾಲದಲ್ಲಿ 430 ಕೋ.ರೂ.ಗಳನ್ನು ವಿದೇಶಗಳಿಗೆ ಸಾಗಿಸಿದ್ದರು ಮತ್ತು ಅಲ್ಲಿ ಆಸ್ತಿಗಳನ್ನು ಖರೀದಿಸಲು ಬಳಸಿದ್ದರು ಎಂಬ ಜಾರಿ ನಿರ್ದೇಶನಾಲಯ(ಇಡಿ)ದ ಆರೋಪವನ್ನು ಪ್ರಶ್ನಿಸಿ ಕಿಂಗ್‌ಫಿಷರ್ ಏರ್‌ಲೈನ್ಸ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತು.
ಪ್ರಕರಣದಲ್ಲಿ ಪ್ರಗತಿ ಕಾಣಬೇಕಾದರೆ ಮಲ್ಯ ತನ್ನೆದುರು ವಿಚಾರಣೆಗೆ ಹಾಜರಾಗುವುದು ಅಗತ್ಯವಾಗಿದೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿತ್ತು.
ಬ್ಯಾಂಕುಗಳಿಗೆ 9,400 ಕೋ.ರೂ.ಗೂ ಅಧಿಕ ಸಾಲಬಾಕಿಯಿರಿಸಿ ದೇಶವನ್ನು ತೊರೆದು ಬ್ರಿಟನ್‌ನಲ್ಲಿರುವ ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಅಧ್ಯಕ್ಷ ಮಲ್ಯ ಏರ್‌ಲೈನ್ಸ್‌ಗಾಗಿ ಐಡಿಬಿಐ ಬ್ಯಾಂಕಿನಿಂದ ಪಡೆದಿದ್ದ ಸಾಲದ ಹಣವನ್ನು ಭಾಗಶಃ ವಿದೇಶಗಳಿಗೆ ಸಾಗಿಸಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ರಾಜ್ಯಸಭಾ ಸದಸ್ಯರೂ ಆಗಿರುವ ಮಲ್ಯ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಎ.15ರಂದು ಅಮಾನತುಗೊಳಿಸಿತ್ತು.







