ದ.ಕ.: ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ 277 ಪ್ರಕರಣ ದಾಖಲು
ಮಂಗಳೂರು, ಎ.18: ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಇರುವ ಕೌಟುಂಬಿಕ ದೌರ್ಜನ್ಯ ಹಿಂಸೆ ತಡೆ ಕಾಯ್ದೆ ಅನ್ವಯ ಜಿಲ್ಲೆಯಲ್ಲಿ ಒಟ್ಟು 277 ಪ್ರಕರಣಗಳು ಸಂರಕ್ಷಣಾಧಿಕಾರಿಗಳ ಕಚೇರಿ ಹಾಗೂ ನ್ಯಾಯಾಲಯದಲ್ಲಿ ದಾಖಲಾಗಿವೆ. ಇವುಗಳಲ್ಲಿ ಸಮಾಲೋಚನೆಯಿಂದ 92 ಪ್ರಕರಣಗಳು ಇತ್ಯರ್ಥವಾದರೆ, ನ್ಯಾಯಾಲಯದಿಂದ 10 ಪ್ರಕರಣಗಳು ಇತ್ಯರ್ಥವಾಗಿವೆ. 133 ಪ್ರಕರಣಗಳು ಬಾಕಿ ಇದ್ದು, ಇವುಗಳನ್ನು ಶೀಘ್ರ ಇತ್ಯರ್ಥ ಪಡಿಸಲು ಜಿಲ್ಲಾ ಕಾನೂನು ನೆರವು ಘಟಕಕ್ಕೆ ಮನವಿ ಸಲ್ಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಅವರು ಸೂಚಿಸಿದರು.
ಅವರು ಇಂದು ತಮ್ಮ ಕಚೇರಿಯಲ್ಲಿ ಮಹಿಳೆಯರ ಮತ್ತು ಮಕ್ಕಳ ವಿರುದ್ಧ ದೌರ್ಜನ್ಯ ತಡೆ ಕಾಯ್ದೆ, ಸ್ಥೈರ್ಯ ನಿಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ವಿಶೇಷ ಚಿಕಿತ್ಸಾ ಘಟಕ ಜಿಲ್ಲಾ ಮಟ್ಟದ ಸಭೆಗಳ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲಿಸಿದರು. ಸ್ಥೈರ್ಯ ನಿಧಿ ಯೋಜನೆಯನ್ವಯ ಜಿಲ್ಲೆಯಲ್ಲಿ 2015ರ ಜುಲೈಯಿಂದ 2016ರ ಮಾರ್ಚ್‌ವರೆಗೆ ಒಟ್ಟು 20 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರಕ್ಷಕ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಮನ್ವಯತೆಯ ಕಾರ್ಯ ನಿರ್ವಹಣೆಯಿಂದ ಜಿಲ್ಲೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಒಟ್ಟು 20 ಸಂತ್ರಸ್ಥ ಮಹಿಳೆಯರಿಗೆ / ಹೆಣ್ಣು ಮಕ್ಕಳಿಗೆ ಸ್ಥೈರ್ಯ ನಿಧಿ ಯೊಜನೆಯಡಿ ರೂ. 25,000 ಹಾಗೂ ರೂ. 15,000 ದಂತೆ ಒಟ್ಟು ರೂ. 4,60,000 ತುರ್ತು ಆರ್ಥಿಕ ಪರಿಹಾರವನ್ನು ಮಂಜೂರು ಮಾಡಿ ಸಂತ್ರಸ್ಥರ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸಭೆಗೆ ತಿಳಿಸಿದರು.





