ಭಯೋತ್ಪಾದನೆ:2 ಮಾನದಂಡ ಬೇಡ ಚೀನಾಕ್ಕೆ ಸುಶ್ಮಾ ಎಚ್ಚರಿಕೆ

ಮಾಸ್ಕೊ, ಎ. 18: ವಿಶ್ವಸಂಸ್ಥೆಯು ತನ್ನ ಭಯೋತ್ಪಾದಕ ಪಟ್ಟಿಯಲ್ಲಿ ಪಠಾಣ್‌ಕೋಟ್ ವಾಯು ನೆಲೆ ಮೇಲೆ ನಡೆದ ದಾಳಿಯ ಸೂತ್ರಧಾರ ಹಾಗೂ ಪಾಕಿಸ್ತಾನದ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್‌ನನ್ನು ಸೇರಿಸುವುದಕ್ಕೆ ತಡೆಯೊಡ್ಡುತ್ತಿರುವ ಚೀನಾದ ವಿರುದ್ಧ ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಸೋಮವಾರ ಕಿಡಿಗಾರಿದ್ದಾರೆ.
ಇಲ್ಲಿ ನಡೆದ ರಶ್ಯ-ಭಾರತ-ಚೀನಾ (ಆರ್‌ಐಸಿ) ವಿದೇಶ ಸಚಿವರ ತ್ರಿಪಕ್ಷೀಯ ಸಭೆಯಲ್ಲಿ ಭಾಷಣ ಮಾಡಿದ ಸಚಿವೆ, ವಿಶ್ವಸಂಸ್ಥೆಯ ಜಂಟಿ ಕ್ರಿಯಾ ಯೋಜನೆಯ ಮೂಲಕ ಭಯೋತ್ಪಾದನೆಯನ್ನು ಎದುರಿಸುವುದು ಅಗತ್ಯವಾಗಿದೆ ಎಂದರು. ‘‘ಭಯೋತ್ಪಾದನೆ ವಿಷಯದಲ್ಲಿ ನಾವು ಎರಡು ಮಾನದಂಡಗಳನ್ನು ಅನುಸರಿಸುವುದನ್ನು ಮುಂದುವರಿಸಿದರೆ, ಅದರಿಂದ ನಮ್ಮ ದೇಶಗಳಿಗೆ ಮಾತ್ರವಲ್ಲ, ಇಡೀ ವಿಶ್ವ ಸಮುದಾಯದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತವೆ’’ ಎಂದರು.
ಅದಕ್ಕೂ ಮೊದಲು, ಸುಶ್ಮಾ ಸಭೆಯ ನೇಪಥ್ಯದಲ್ಲಿ ಈ ವಿಷಯವನ್ನು ಚೀನಾದ ವಿದೇಶ ಸಚಿವ ವಾಂಗ್ ಯಿ ಜೊತೆ ಪ್ರಸ್ತಾಪಿಸಿದರು.
Next Story





