ಕಣ್ಣು ದಾನಿಗಳಿದ್ದರೂ ಸಂಗ್ರಹಕ್ಕೆ ಐ ಬ್ಯಾಂಕ್’ ಇಲ್ಲ
-ಶ್ರೀನಿವಾಸ ಬಾಡಕರ್
ಕಾರವಾರ, ಎ.18: ದೃಷ್ಟಿಹೀನರಿಗೆ ಸಮಾಜ ನೋಡುವಂತಹ ದೃಷ್ಟಿ ದೊರೆಯಲೆಂಬ ಸಾಮಾಜಿಕ ಕಳಕಳಿಯಿಂದ ಜಿಲ್ಲೆಯಲ್ಲಿ ನೂರಾರು ಜನರು ಕಣ್ಣು ದಾನ ಮಾಡಿದ್ದಾರೆ. ಆದರೆ ದಾನ ಸಮರ್ಪಕವಾಗಿ ಅರ್ಹ ವ್ಯಕ್ತಿಗೆ ಮುಟ್ಟಿಸುವಂತ ಕಾರ್ಯಕ್ಕೆ ಅನುಕೂಲವಾದ ಐ ಬ್ಯಾಂಕ್ ವ್ಯವಸ್ಥೆ ಜಿಲ್ಲೆಯಲ್ಲಿಲ್ಲದಿರುವುದು ದುರ್ದೈವದ ಸಂಗತಿಯಾಗಿದೆ. ದಾನಿಗಳು ಮೃತರಾದಾಗ ಅವರ ಕಣ್ಣುಗಳನ್ನು ನಿಗದಿತ ಅವಧಿಯಲ್ಲಿ ಪಡೆದುಕೊಂಡು ವೈಜ್ಞಾನಿಕವಾಗಿ ಸಂಗ್ರಹಿಸಬೇಕಾದರೆ ಐ ಬ್ಯಾಂಕ್‌ನ ಆವಶ್ಯಕತೆ ತೀರಾ ಇದೆ. ಅಂತಹ ಸೌಲಭ್ಯ ನಮ್ಮ ಜಿಲ್ಲೆಯಲ್ಲಿಲ್ಲದೆ ಇರುವುದರಿಂದ ದಾನಿಗಳ ಕಣ್ಣು ಪ್ರಯೋಜನಕ್ಕೆ ಬಾರದಂತಹ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ 333 ಜನ ಸ್ವಪ್ರೇರಣೆಯಿಂದ ಕಣ್ಣು ದಾನ ಮಾಡಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಬಹುತೇಕ ಕಣ್ಣು ದಾನಿಗಳು ಮೂಲ ಸೌಲಭ್ಯಗಳು ತಲುಪಲು ದುಸ್ತರವಾಗಿರುವ ಗುಡ್ಡಗಾಡು ಪ್ರದೇಶ, ಕುಗ್ರಾಮಗಳಲ್ಲಿ ವಾಸಿಸುವವರಾಗಿದ್ದು, ದಾನಿಗಳ ನಿಧನದ 6 ತಾಸಿನೊಳಗೆ ಕಣ್ಣನ್ನು ಸಂಗ್ರಹಿಸಬೇಕು. ಹಾಗೇ ನೇತ್ರ ಸಂಗ್ರಹಿಸಲು ಬೇಕಾದ ತಜ್ಞ ವೈದ್ಯರಿದ್ದಾರಾದರೂ ಅದಕ್ಕೆ ಬೇಕಾದ ಸಲಕರಣೆ ಒಳಗೊಂಡ ಘಟಕ, ಆ್ಯಂಬುಲೆನ್ಸ್, ಆಪ್ತ ಸಮಾಲೋಚಕರು ಇಲ್ಲಿಲ್ಲ. ಅಲ್ಲದೆ, ಸಂಗ್ರಹಿಸಿದ ಕಣ್ಣುಗಳನ್ನು ಸಂರಕ್ಷಿಸಿಡಲು ಸುಸಜ್ಜಿತ ಐ ಬ್ಯಾಂಕ್ ಇಲ್ಲ.
ಕಾರವಾರ ತಾಲೂಕಿನಲ್ಲಿ ಕೈಗಾ, ಸೀಬರ್ಡ್, ಕೊಂಕಣ್ ರೈಲ್ವೆ ವಿಭಾಗಗಳಲ್ಲಿ ಹಾಗೂ ಚತುಷ್ಪಥ ಹೆದ್ದಾರಿ, ವಾಣಿಜ್ಯ ಹಾಗೂ ಮೀನುಗಾರಿಕೆ ಬಂದರು ಅಭಿವೃದ್ಧಿ ಕಾಮಗಾರಿಗಳಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆಕಸ್ಮಿಕ ಅಪಘಾತಗಳಿಂದ ಕಣ್ಣಿನ ಸಮಸ್ಯೆ ಎದುರಾದರೆ ಅವರಿಗೆ ನೆರವಾಗಲು ಐ ಬ್ಯಾಂಕ್ ಆವಶ್ಯಕವಾಗಿ ಬೇಕಾಗಿದೆ. ಆದರೆೆ, ಜಿಲ್ಲೆಯಲ್ಲಿ ಐ ಬ್ಯಾಂಕ್ ಇಲ್ಲದ ಕಾರಣ ದಾನಿಗಳಿಂದ ಪಡೆದ ಕಣ್ಣುಗಳನ್ನು ಜಿಲ್ಲಾಸ್ಪತ್ರೆ ವೈದ್ಯರು ಅಗತ್ಯವಿರುವ ಹುಬ್ಬಳ್ಳಿ, ಮಂಗಳೂರು, ಬೆಂಗಳೂರಿಗೆ ಕಳುಹಿಸಿ ಕೈ ತೊಳೆದುಕೊಳ್ಳುತ್ತಾರೆ. ಜಿಲ್ಲೆಯ ಜನತೆಗೆ ತುರ್ತು ಸಂದರ್ಭದಲ್ಲಿ ಒದಗಿಸಲು ಕಣ್ಣುಗಳು ದೊರೆಯುವುದು ಕಷ್ಟಸಾಧ್ಯವಾಗುತ್ತದೆ. ಬ್ಯಾಂಕ್ ಸ್ಥಾಪಿಸುವುದು ಬಹು ವೆಚ್ಚದಾಯಕ. ದಾನಿಗಳ ಮರಣಾನಂತರ ಅವರ ಕಣ್ಣುಗಳನ್ನು ಪಡೆಯಲು ಸೂಕ್ತ ಸಮಯಕ್ಕೆ ತಲುಪುವಂತಹ ಆ್ಯಂಬುಲೆನ್ಸ್, ಅದರೊಂದಿಗೆ ತಜ್ಞ ವೈದ್ಯ, ನರ್ಸ್, ಇಬ್ಬರು ಸಹಾಯಕರು, ಆಪ್ತ ಸಲಹೆಗಾರ ತಂಡವಿರಬೇಕು. ಜಿಲ್ಲೆಯ ಕುಮಟಾದ ರೇವಣಕರ ಕಣ್ಣಿನ ಆಸ್ಪತ್ರೆ ಹಾಗೂ ಶಿರಸಿಯ ಖಾಸಗಿ ಆಸ್ಪತ್ರೆಯಲ್ಲಿ ಮಾತ್ರ ಪ್ರಾಥಮಿಕ ಹಂತದವರೆಗೆ ಮಾತ್ರ ಕಣ್ಣುಗಳನ್ನು ಸಂಗ್ರಹಿಸುವ ವ್ಯವಸ್ಥೆ ಇದೆ. ಆದರೆ, ಶಾಶ್ವತವಾಗಿ ಅವುಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಇಡುವ ಯಾವುದೇ ಕೇಂದ್ರಗಳು ಜಿಲ್ಲೆಯಲ್ಲಿಲ್ಲ. ಹಾಗಾಗಿ ಆ ನಿಟ್ಟಿನಲ್ಲಿ ಸರಕಾರ ಗಮನಹರಿಸಿ ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಕೇಂದ್ರವಾದಂತಹ ಸ್ಥಳದಲ್ಲಿ ಐ ಬ್ಯಾಂಕ್ ಸ್ಥಾಪಿಸುವಲ್ಲಿ ಗಮನಹರಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.







