ವಿದ್ಯಾರ್ಥಿನಿಯ ಅತ್ಯಾಚಾರ: ಆರೋಪಿಗಳ ಬಂಧನಕ್ಕೆ ಆಗ್ರಹ
ಕಾರವಾರ, ಎ.18: ನಾಲ್ವರು ಯುವಕರು ಸೇರಿ ಎಸೆಸೆಲ್ಸಿ ವಿದ್ಯಾರ್ಥಿನಿಯೋರ್ವಳನ್ನು ಅಪಹರಿಸಿ ಅತ್ಯಾಚಾರ ಮಾಡಿ, ಚಿತ್ರೀಕರಿಸಿ ಬೆದರಿಕೆ ಒಡ್ಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಲಿ, ಆಸೀಫ್, ತೌಸೀಫ್ ಹಾಗೂ ಇಕ್ಬಾಲ್ ಅತ್ಯಾಚಾರಿ ಆರೋಪಿಗಳು ಎಂದು ದೂರಿನಲ್ಲಿ ತಿಳಿಸಲಾಗಿದೆ. ಇವರು ಇಲ್ಲಿನ ಸಮೀಪದ ಯುವತಿಯೋರ್ವಳನ್ನು ಅ. 2ರಂದು ಅಪಹರಿಸಿ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ.
ನಂತರ ಎ. 13ರಂದು ಎಸೆಸೆಲ್ಸಿ ಪರೀಕ್ಷೆ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಪ್ರಜ್ಞೆತಪ್ಪುವ ಔಷಧ ಸಿಂಪಡಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿ, ಚಿತ್ರೀಕರಿಸಿ ವಿಷಯ ಬಹಿರಂಗಪಡಿಸಿದಲ್ಲಿ ಕುಟುಂಬದ ಸದಸ್ಯರಿಗೆ ತೊಂದರೆ ನೀಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ ಎಂದು ತಿಳಿದು ಬಂದಿದೆ. ವಿಷಯವನ್ನು ಮನೆಯಲ್ಲಿ ತಿಳಿಸಿದಕ್ಕೆ ಆರೋಪಿಗಳು ಮನೆಗೆ ನುಗ್ಗಿ ಅಜ್ಜಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅತ್ಯಾಚಾರಕ್ಕೊಳಗಾದ ಬಾಲಕಿ ಜಿಲ್ಲಾಸ್ಪತ್ರೆಯಲ್ಲಿ ವಿವರಿಸಿದರು. ತನಗೆ ಹಾಗೂ ತನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಬಾಲಕಿ ಪೊಲೀಸರಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ಸಲ್ಲಿಸಿದ್ದಾರೆ. ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ವಿಚಾರಣೆ:
ಅತ್ಯಾಚಾರಕ್ಕೊಳಗಾದ ಬಾಲಕಿಯ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ದೂರವಾಣಿಯಲ್ಲಿ ತಿಳಿಸಿದರು. ವಿಚಾರಣೆಗೆ ಒಳಪಡಿಸಲಾದವರ ಹೆಸರು, ವಿಳಾಸ ಸದ್ಯಕ್ಕೆ ಮಾಹಿತಿ ಇಲ್ಲ ಎಂದು ಅವರು ತಿಳಿಸಿದ್ದಾರೆ.





