ಒಡಿಶಾ: ಬಸ್ಸು ಕಮರಿಗೆ ಉರುಳಿ 30 ಮಂದಿ ಬಲಿ; 8 ಮಂದಿಗೆ ಗಾಯ
ಭುವನೇಶ್ವರ, ಎ.18: ಒಪೆರಾ ತಂಡವೊಂದರ 40 ಮಂದಿ ಕಲಾವಿದರನ್ನು ಹೊತ್ತಿದ್ದ ಬಸ್ಸೊಂದು ಒಡಿಶಾದ ದೇವಗಡ ಜಿಲ್ಲೆಯಲ್ಲಿ 300 ಅಡಿ ಆಳದ ಕಮರಿಗೆ ಉರುಳಿಬಿದ್ದು ಕನಿಷ್ಠ 30 ಮಂದಿ ಸಾವಿಗೀಡಾಗಿದ್ದಾರೆ ಹಾಗೂ 8 ಮಂದಿ ಗಾಯಗೊಂಡಿದ್ದಾರೆ. ಈ ದುರಂತ ರವಿವಾರ ಸಂಜೆ ನಡೆದಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯ ವೇಳೆ ಸ್ಥಳದಿಂದ 27 ಮೃತ ದೇಹಗಳನ್ನು ಮೇಲೆತ್ತಲಾಗಿದೆ. ಮೂವರು ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ಒಯ್ಯುವ ವೇಳೆ ಕೊನೆಯುಸಿರೆಳೆದಿದ್ದಾರೆಂದು ಅಗ್ನಿಶಾಮಕ ದಳದ ಮಹಾನಿರ್ದೇಶಕ ಬಿನಯ್ ಬೆಹೆರಾ ಹೇಳಿದ್ದಾರೆ.
ಭಾರತಿ ಗಾನನಾಟ್ಯ ಒಪೆರಾದ ಈ ನತದೃಷ್ಟ ಬಸ್ಸು. ದೇವಗಡದಿಂದ ಬಾರ್ಗಡ ಜಿಲ್ಲೆಯ ರೆಮ್ಟಾಕ್ಕೆ ಹಿಂದಿರುಗುತ್ತಿತ್ತು. ಅದು ತಿಲಯಬನಿ ಗಾಯೆಲೊ ಘಾಟ್‌ನಲ್ಲಿ ಕಮರಿಗೆ ಉರುಳಿತೆಂದು ದೇವಗಡದ ಪೊಲೀಸ್ ಅಧೀಕ್ಷಕ ಸಾರಾ ಶರ್ಮಾ ಪತ್ರಕರ್ತರಿಗೆ ತಿಳಿಸಿದ್ದಾರೆ.
ಅಗ್ನಿಶಾಮಕ ದಳ, ಒಡಿಶಾ ವಿಕೋಪ ಪ್ರತಿಕ್ರಿಯಾ ದಳ, ಪೊಲೀಸ್ ಸಿಬ್ಬಂದಿ ಹಾಗೂ ಸಿಆರ್‌ಪಿಎಫ್‌ಗಳ ನೆರವಿನೊಂದಿಗೆ ರಕ್ಷಣಾ ಕಾರ್ಯವನ್ನು ತೀವ್ರಗೊಳಿಸಲಾಗಿದೆಯೆಂದು ಅವರು ಹೇಳಿದ್ದಾರೆ.
ಹಿರಿಯ ಪೊಲೀಸ್ ಹಾಗೂ ನಾಗರಿಕ ಅಧಿಕಾರಿಗಳು ಸ್ಥಳದಲ್ಲಿದ್ದು, ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆಂದು ಶರ್ಮಾ ತಿಳಿಸಿದ್ದಾರೆ.
ತೀವ್ರ ಗಾಯಗೊಂಡಿರುವ 8 ಮಂದಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನಲ್ಲಿ ಸಿಲುಕಿರುವ ಇನ್ನಷ್ಟು ಮಂದಿಗಾಗಿ ರಕ್ಷಣಾ ಕಾರ್ಯ ಮುಂದುವರಿದಿದೆಯೆಂದು ಪೊಲೀಸ್ ಮಹಾ ನಿರ್ದೇಶಕ ಕೆ.ಬಿ. ಸಿಂಗ್ ಮಾಧ್ಯಮಗಳಿಗೆ ವಿವರಿಸಿದ್ದಾರೆ.
ಮೃತರ ಗುರುತು ಪತ್ತೆ ಇನ್ನಷ್ಟೇ ಆಗಬೇಕಿದೆ. ಜಿಲ್ಲಾಡಳಿತವು 2 ಸಹಾಯವಾಣಿ ಸಂಖ್ಯೆಗಳನ್ನು ಪ್ರಕಟಿಸಿದೆ.
ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ದುರಂತದ ಕುರಿತು ಶೋಕ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಕಾರ್ಯವನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.





