ಐಟಿ ಉದ್ಯೋಗಿಗೆ ಮರಣ ದಂಡನೆ, ಪ್ರೇಯಸಿಗೆ ಜೀವಾವಧಿ ಶಿಕ್ಷೆ
ಅಟ್ಟಿಂಗಾಲ್ ಅವಳಿ ಕೊಲೆ ಪ್ರಕರಣ
ತಿರುವನಂತಪುರಂ,ಎ.18: ಕೇರಳದಾದ್ಯಂತ ಸಂಚಲನವನ್ನು ಮೂಡಿಸಿದ್ದ ಅಟ್ಟಿಂಗಾಲ್ ಅವಳಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಿನೊ ಮ್ಯಾಥ್ಯೂಗೆ ಇಲ್ಲಿಯ ಸೆಷನ್ಸ್ ನ್ಯಾಯಾಲಯವು ಸೋಮವಾರ ಮರಣ ದಂಡನೆಯನ್ನು ವಿಧಿಸಿದೆ. ಸಹ ಆರೋಪಿಯಾಗಿದ್ದ ಆತನ ಪ್ರೇಯಸಿ ಅನುಶಾಂತಿಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಿರುವ ನ್ಯಾಯಾಲಯವು ಇಬ್ಬರಿಗೂ ತಲಾ 50 ಲಕ್ಷ ರೂ.ದಂಡವನ್ನು ವಿಧಿಸಿದೆ. ಅನುಶಾಂತಿಯ ನಡವಳಿಕೆಯು ‘ತಾಯ್ತನಕ್ಕೇ ಅಪಮಾನ’ವಾಗಿದೆ ಎಂದು ನ್ಯಾಯಾಲಯವು ಹೇಳಿದೆ. ಸಾಫ್ಟ್‌ವೇರ್ ಇಂಜಿನಿಯರ್‌ಗಳಾದ ಈ ಜೋಡಿ ಅನುಶಾಂತಿಯ ಮೂರರ ಹರೆಯದ ಪುತ್ರಿ ಮತ್ತು ಅತ್ತೆಯನ್ನು ಕೊಲೆ ಮಾಡಿದ್ದಲ್ಲದೆ,ಆಕೆಯ ಪತಿ ಲಿಜೇಶ್ ಕೊಲೆಗೂ ಯತ್ನಿಸಿತ್ತು. 2014,ಎಪ್ರಿಲ್‌ನಲ್ಲಿ ಈ ಘಟನೆ ನಡೆದಿತ್ತು.
ದಂಡದ ಹಣದಲ್ಲಿ 50 ಲ.ರೂ.ಗಳನ್ನು ಪುತ್ರಿಯನ್ನು ಕಳೆದುಕೊಂಡಿರುವ ಲಿಜೇಶ್‌ಗೆ ಮತ್ತು 30 ಲ.ರೂ.ಗಳನ್ನು ಪತ್ನಿಯನ್ನು ಕಳೆದುಕೊಂಡಿರುವ ಆತನ ತಂದೆ ತಂಗಪ್ಪನ್ ಚೆಟ್ಟಿಯಾರ್‌ಗೆ ನೀಡುವಂತೆ ನ್ಯಾ.ವಿ.ಶೆರ್ಸಿ ಆದೇಶಿಸಿದರು.
ತೀರ್ಪು ನೀಡುವ ಸಂದರ್ಭದಲ್ಲಿ ಇದು ‘ಅಪರೂಪದಲ್ಲಿಯೇ ಅಪರೂಪದ ಪ್ರಕರಣ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಇದೊಂದು ‘ಬರ್ಬರ’ ಮತ್ತು ‘ಹೇಯ’ಅಪರಾಧ ಎಂದು ಬಣ್ಣಿಸಿದರು. ಅನುಶಾಂತಿ ಅಪರಾಧದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಳಾದರೂ ಆಕೆ ಮಹಿಳೆ ಎನ್ನುವುದನ್ನು ಪರಿಗಣಿಸಿ ಮರಣ ದಂಡನೆಯಿಂದ ವಿನಾಯಿತಿ ನೀಡಲಾಗಿದೆ ಎಂದರು. ಆದರೆ ಆಕೆ ‘ತಾಯ್ತನಕ್ಕೇ ಅಪಮಾನ’ವಾಗಿದ್ದಾಳೆ ಎಂದು ನ್ಯಾಯಾಲಯವು ಕಟುವಾಗಿ ಹೇಳಿತು.
ಮ್ಯಾಥ್ಯೂ ಮತ್ತು ಅನುಶಾಂತಿ ಇಲ್ಲಿಯ ಟೆಕ್ನೋ ಪಾರ್ಕ್‌ನ ಐಟಿ ಕಂಪೆನಿಯೊಂದರಲ್ಲಿ ಸಾಫ್ಟವೇರ್ ಇಂಜಿನಿಯರ್‌ಗಳಾಗಿದ್ದರು. ಅವರಿಬ್ಬರ ನಡುವೆ ಅನೈತಿಕ ಸಂಬಂಧವಿದ್ದು, ಇದನ್ನು ಲಿಜೇಶ್ ಆಕ್ಷೇಪಿಸಿದ್ದರು.
ಅನುಶಾಂತಿಯ ಪುತ್ರಿ ಸ್ವಸ್ತಿಕಾ ಮತ್ತು ಅತ್ತೆ ಓಮನಾ(60)ರನ್ನು ಹತ್ಯೆಗೈದ ಬಳಿಕ ಮ್ಯಾಥ್ಯೂ ಲಿಜೇಶ್ ಕೊಲೆಗೂ ವಿಫಲ ಯತ್ನ ನಡೆಸಿದ್ದ. ಅವಳಿ ಕೊಲೆಗಳನ್ನು ಮಾಡಿದ ಬಳಿಕ ಮ್ಯಾಥ್ಯೂ ಆ ಸಂದರ್ಭ ಮನೆಯಿಂದ ಹೊರಗಿದ್ದ ಲಿಜೇಶ್‌ಗಾಗಿ ಸುಮಾರು ಅರ್ಧ ಗಂಟೆ ಕಾದು ಕುಳಿತ್ತಿದ್ದ. ನಡೆದಿರುವ ಘೋರ ದುರಂತದ ಅರಿವಿಲ್ಲದೆ ಮನೆಯನ್ನು ಪ್ರವೇಶಿಸಿದ್ದ ಲಿಜೇಶ್ ಮೇಲೆ ಮ್ಯಾಥ್ಯೂ ದಾಳಿ ನಡೆಸಿದ್ದನಾದರೂ ಗಾಯಗೊಂಡಿದ್ದ ಅವರು ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಬೊಬ್ಬೆ ಕೇಳಿ ಧಾವಿಸಿ ಬಂದಿದ್ದ ನೆರೆಕರೆಯವರು ಮ್ಯಾಥ್ಯೂನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ಮ್ಯಾಥ್ಯೂ ಮತ್ತು ಅನುಶಾಂತಿ ಅಪರಾಧಿಗಳೆಂದು ಕಳೆದ ವಾರ ಘೋಷಿಸಿದ್ದ ನ್ಯಾಯಾಲಯವು ಶಿಕ್ಷೆ ಪ್ರಕಟನೆಯನ್ನು ಇಂದಿಗೆ ಕಾಯ್ದಿರಿಸಿತ್ತು.







