ರಾಷ್ಟ್ರಪತಿ ವಾಹನದ ‘ರಾಜ ರಹಸ್ಯ’ ಬಯಲು!
ಹೊಸದಿಲ್ಲಿ, ಎ.18: ಭಾರತದ ಪ್ರಥಮ ಪ್ರಜೆ ಬಳಸುವ ಕಾರಿನ ಉತ್ಪಾದಕ ಸಂಸ್ಥೆ, ಮಾಡೆಲ್ ನಂಬರ್ ಹಾಗೂ ರಿಜಿಸ್ಟ್ರೇಷನ್ ನಂಬರ್ ಬಹಿರಂಗಗೊಳಿಸಲು ಕೇಂದ್ರ ಗೃಹ ಸಚಿವಾಲಯ ನಿರಾಕರಿಸಿದೆ. ರಾಷ್ಟ್ರಪತಿ ಬಳಕೆಯ ಕಾರಿನಲ್ಲಿ ನಂಬರ್ ಪ್ಲೇಟ್, ಲೈಸನ್ಸ್ ಪ್ಲೇಟ್ ಬದಲಾಗಿ ರಾಷ್ಟ್ರಲಾಂಛನ ಇರುತ್ತದೆ. ಈ ವಿವರಗಳನ್ನು ಬಹಿರಂಗಗೊಳಿಸುವುದರಿಂದ ಪ್ರಥಮ ಪ್ರಜೆಗೆ ಅಪಾಯ ಸಾಧ್ಯತೆ ಇರುತ್ತದೆ ಎಂದು ಗೃಹ ಸಚಿವಾಲಯ ಹೇಳಿದೆ.
ಆದರೆ ಗೃಹ ಸಚಿವಾಲಯ ಬಹಿರಂಗಪಡಿಸಲು ನಿರಾಕರಿಸಿದ ಈ ಎಲ್ಲ ಮಾಹಿತಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಲಭ್ಯ ಎಂದು ಅನಧಿಕೃತ ಮೂಲಗಳು ತಿಳಿಸಿವೆ.
ಯೂ ಟ್ಯೂಬ್‌ನಲ್ಲಿ ಹರಿದಾಡುತ್ತಿರುವ ಓಪನ್‌ಪೋಸ್ಟ್ ಪ್ರಕಾರ, ಕಪ್ಪುಬಣ್ಣದ ಮರ್ಸಿಡಿಸ್ ಬೆಂಝ್ ಎಸ್ 600 (ಡಬ್ಲ್ಯು 221) ಪುಲ್‌ಮನ್ ಗಾರ್ಡ್ ಮಾದರಿಯದ್ದಾಗಿದೆ. ಇದು ವಿಶೇಷವಾಗಿ ಸಿದ್ಧಪಡಿಸಿದ ಸುಸಜ್ಜಿತ ವಾಹನವಾಗಿದ್ದು, ಇದು ಪ್ರಬಲ ಶಸ್ತ್ರಸಜ್ಜಿತ, ಚಾಲಕನಿಗೆ ಪ್ರತ್ಯೇಕ ವಿಭಾಗ ಹೊಂದಿದ ಐಷಾರಾಮಿ ಕಾರಾಗಿದೆ. ಗರಿಷ್ಠ ರಕ್ಷಣಾ ವರ್ಗದ ವಿಆರ್6/ವಿಆರ್7 ಮಾದರಿಯ ಎಲ್ಲ ಮಾನದಂಡಗಳಿಗೆ ಅನುಗುಣವಾಗಿ ಇದು ಸಜ್ಜುಗೊಂಡಿದೆ ಎಂದು ಪೋಸ್ಟ್ ಹೇಳಿಕೊಂಡಿದೆ.
ಮಿಲಿಟರಿ ರೈಫಲ್ ದಾಳಿಯನ್ನು ಎದುರಿಸಲು ಸಮರ್ಥವಾಗುವಷ್ಟು ಶಸ್ತ್ರಸಜ್ಜಿತವಾಹನ ಇದಾಗಿದ್ದು, ಕೈಬಾಂಬ್ ಹಾಗೂ ಸ್ಫೋಟಕಗಳಿಂದಲೂ ರಕ್ಷಣೆ ನೀಡಲು ಸಮರ್ಥವಾಗಿದೆ. ರಾಷ್ಟ್ರಪತಿಗಳ ವಾಹನ ಸರಣಿಯಲ್ಲಿ, ಮಾಜಿ ರಾಷ್ಟ್ರಪತಿ ಬಳಸುತ್ತಿದ್ದ ಕಪ್ಪುಬಣ್ಣದ ಮರ್ಸಿಡಿಸ್ ಬೆಂಝ್ ಡಬ್ಲು 140 ಶಸ್ತ್ರಸಜ್ಜಿತ ಕಾರನ್ನೂ ಒಳಗೊಂಡಿದ್ದು, ಇದನ್ನು ಈಗ ಹೆಚ್ಚುವರಿ ವಾಹನವಾಗಿ ಬಳಸಲಾಗುತ್ತಿದೆ ಎಂದು ವಿವರಿಸಲಾಗಿದೆ. ಹಲವು ಸುದ್ದಿತಾಣಗಳಲ್ಲೂ ಈ ಮಾಹಿತಿ ಲಭ್ಯವಿದೆ.
ಆರ್‌ಟಿಐ ಅರ್ಜಿದಾರ ರಾಕೇಶ್ ಅಗರ್‌ವಾಲ್, ರಾಷ್ಟ್ರಪತಿಗಳ ಸಚಿವಾಲಯವನ್ನು ಸಂಪರ್ಕಿಸಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರು, ಉಪ ಗವರ್ನರ್‌ಗಳು ಬಳಸುವ ಸರಕಾರಿ ಲಾಂಛನ ಹೊಂದಿದ ಎಲ್ಲ ವಾಹನಗಳ ಉತ್ಪಾದಕ ಸಂಸ್ಥೆ, ಮಾಡೆಲ್ ಸಂಖ್ಯೆ ಹಾಗೂ ನೋಂದಣಿ ಸಂಖ್ಯೆಯ ವಿವರ ಕೇಳಿದ್ದರು. ಈ ಅರ್ಜಿಯನ್ನು ಗೃಹ ಸಚಿವಾಲಯಕ್ಕೆ ವರ್ಗಾಯಿಸಲಾಯಿತು. ಆದರೆ ಗೃಹ ಸಚಿವಾಲಯ ಮಾಹಿತಿ ನೀಡಲು ನಿರಾಕರಿಸಿದೆ.







