ಕೊಡಸಳ್ಳಿ ಪುನರ್ವಸತಿಗರಿಗೆ ತೊಂದರೆ: ಪ್ರತಿಭಟನೆ
ಕಾರವಾರ,ಎ.18: ಅಕ್ರಮ ಪಂಪ್‌ಸೆಟ್ ತೆರವು ಕಾರ್ಯಾಚರಣೆ ಹೆಸರಿನಲ್ಲಿ ಕೊಡಸಳ್ಳಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲಾದ ಅಂಕೋಲಾದ ಡೋಂಗ್ರಿ ಗ್ರಾಮ ಪಂಚಾಯತ್‌ನಲ್ಲಿನ ಗಂಗಾವಳಿ ನೀರು ಬಳಕೆಗೆ ಜಿಲ್ಲಾಡಳಿತ ತಡೆಯೊಡ್ಡಿದೆ.
ಇದನ್ನು ವಿರೋಧಿಸಿ ಹೆಗ್ಗಾರ, ವೈದ್ಯಹೆಗ್ಗಾರ್, ಕಲ್ಲೇಶ್ವರ ಸೇರಿದಂತೆ ಸುತ್ತಲಿನ ಗ್ರಾಮದ ಜನರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಶಿವರಾಮ ಗಾಂವ್ಕರ್ ಮಾತನಾಡಿ, ವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಕೊಡಸಳ್ಳಿಯಲ್ಲಿದ್ದ ಜನರನ್ನು ಒಕ್ಕಲೆಬ್ಬಿಸಿ ಡೋಂಗ್ರಿ ಪಂಚಾಯತ್‌ನಲ್ಲಿ ಪುನರ್ವಸತಿ ಕಲ್ಪಿಸಲಾಗಿದು,್ದ ಸದ್ಯ ಪುನರ್ವಸತಿಗರಿಗೆ ಮತ್ತೆ ತೊಂದರೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.ಕುಡಿಯುವ ನೀರಿಗೆ ಬರ ಬಂದ ಹಿನ್ನೆಲೆಯಲ್ಲಿ ಗಂಗಾವಳಿ ನದಿಯ ಮೂಲಕ ರೈತರ ತೋಟಗಳಿಗೆ ನೀರುಣಿಸಲು ಹಾಕಲಾದ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲಾಗುತ್ತಿದೆ. ಅಡಿಕೆ ಮರಗಳಿಗೆ ನೀರುಣಿಸದಿದ್ದಲ್ಲಿ ಮರಗಳು ಸಾವನಪ್ಪುವ ಸ್ಥಿತಿ ಬರಲಿದ್ದು, ಗಂಗಾವಳಿ ನೀರನ್ನು ತಡೆ ಹಿಡಿಯಲು ಬಿಡೆವು ಎಂದು ಹೇಳಿದರು. ಜಿಲ್ಲಾ ಪಂಚಾಯತ್ ಸದಸ್ಯ ಜಗದೀಶ ನಾಯ್ಕ ಮಾತನಾಡಿ, ಹಲವು ಯೋಜನೆಗಳಿಗೆ ಜಿಲ್ಲೆಯ ಜನರಿಗೆ ಸರಕಾರ ತೊಂದರೆ ನೀಡಿದೆ. ಸದ್ಯ ಕೃಷಿಕರು ತೋಟಗಳಿಗೆ ನೀರುಣಿಸುವುದಕ್ಕೆ ತೊಂದರೆ ಮಾಡುವುದು ಸರಿಯಲ್ಲ. ಕುಡಿಯುವ ನೀರಿಗೆ ಕಾಳಿ ನದಿಯಿಂದ ಯೋಜನೆ ರೂಪಿಸಲು ಸಾಧ್ಯವಿದೆ. ಪರ್ಯಾಯ ವ್ಯವಸ್ಥೆಯ ಬದಲು ಈಗಿರುವ ಕೃಷಿಕರ ಬದುಕು ಹಾಳು ಮಾಡುವ ರೀತಿ ಕೆಲಸ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಪ್ರತಿಭಟನಾಕಾರರ ಬೇಡಿಕೆಗೆ ಒಪ್ಪದೇ ಪಂಪ್‌ಸೆಟ್ ತೆರವುಗೊಳಿಸಿ ತೋಟಕ್ಕೆ ನೀರುಣಿಸಲು ಸಾಧ್ಯವಾಗದಂತೆ ಮಾಡಿದಲ್ಲಿ ಇನ್ನಷ್ಟು ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ಡೋಂಗ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಜಿ. ಎಂ. ಶೆಟ್ಟಿ, ಪ್ರಮುಖರಾದ ರಾಘವೇಂದ್ರ ಗಾಂವ್ಕರ್, ಸುಧಾಕರ ಭಟ್ಟ, ಜಿ. ವಿ. ಹೆಗಡೆ, ಪ್ರಭಾಕರ ಕಲಗಾರೆ, ವೆಂಕಟ್ರಮಣ ಭಟ್ಟ, ದಿನಕರ ಗೌಡ, ನರಸಿಂಗ ಗಾಂವ್ಕರ್, ಅನಂತ ಗಾಂವ್ಕರ್, ರಾಮಕೃಷ್ಣ ಗಾಂವ್ಕರ್, ಶ್ರೀಕೃಷ್ಣ ನಾರಾಯಣ ಭಟ್ಟ, ಗಜಾನನ ಹರಿಮನೆ, ಗಿರೀಶ ಮಾದೇವ ಗುನಗಿ, ಚಂದ್ರಶೇಖರ ಪಟಗಾರ ಮತ್ತಿತರರು ಉಪಸ್ಥಿತರಿದ್ದರು.







