ರಾಜ್ಯಪಾಲರು ಕೇಂದ್ರದ ಏಜೆಂಟರಲ್ಲ: ಹೈಕೋರ್ಟ್
ಡೆಹ್ರಾಡೂನ್, ಎ.18: ಕಳೆದ ತಿಂಗಳು ವಿವಾದಾತ್ಮಕ ಸಂದರ್ಭದಲ್ಲಿ ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿದುದನ್ನು ಪ್ರಶ್ನಿಸಿ, ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ರಾಜ್ಯದ ಮುಖ್ಯ ನ್ಯಾಯಮೂರ್ತಿ, ರಾಜ್ಯಪಾಲರು ಕೇಂದ್ರ ಸರಕಾರದ ಏಜೆಂಟರಲ್ಲವೆಂದು ಇಂದು ಹೇಳಿದ್ದಾರೆ.
ತುರ್ತು ಅಧಿಕಾರವನ್ನು ವಿಶೇಷ ಪ್ರಕರಣಗಳಲ್ಲಿ ಮಾತ್ರ ಬಳಸಬೇಕು. ರಾಜ್ಯದ ವ್ಯವಹಾರದಲ್ಲಿ ಮಧ್ಯಪ್ರವೇಶವನ್ನು ಲಘುವಾಗಿ ಪರಿಗಣಿಸಲಾಗದೆಂದು ಉತ್ತರಾಖಂಡ ಹೈಕೋರ್ಟ್ನ್ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ತಿಳಿಸಿದರು.
‘‘ನೀವು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರಕಾರವೊಂದನ್ನು ಅದರ 5ನೆಯ ವರ್ಷದಲ್ಲಿ ಉರುಳಿಸಬಲ್ಲಿರಾ? ನಿರ್ಧಾರ ಕೈಗೊಳ್ಳಬೇಕಾದವರು ರಾಜ್ಯಪಾಲರು. ಅವರು ಕೇಂದ್ರದ ಏಜೆಂಟರಲ್ಲ. ಅವರು ಬಹುಮತ ಪರೀಕ್ಷೆಯ ನಿರ್ಧಾರ ಕೈಗೊಂಡಿದ್ದರು’’ ಎಂದು ಅವರು ಹೇಳಿದರು.
ಈ ತಿಂಗಳ ಆರಂಭದಲ್ಲಿ, ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಬೇಕೆಂಬ ಕೇಂದ್ರದ ಮನವಿಯನ್ನು ತಳ್ಳಿ ಹಾಕಿತ್ತು. ಮೊದಲು ಕೇಂದ್ರದ ವಾದವನ್ನು ಆಲಿಸದೆ ನ್ಯಾಯಾಲಯವು ಯಾವುದೇ ಆದೇಶ ನೀಡುವುದಿಲ್ಲವೆಂದು ಕೇಂದ್ರ ಸರಕಾರದ ವಕೀಲರಿಗೆ ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದರು.
ತನ್ನ ನಿರ್ಧಾರವನ್ನು ಸಮರ್ಥಿಸಿರುವ ಕೇಂದ್ರ ಸರಕಾರ, ರಾಜ್ಯದಲ್ಲಿ ಸಾಂವಿಧಾನಿಕ ಯಂತ್ರಾಂಗ ಕೆಟ್ಟುಹೋಗಿದೆಯೆಂದು ನ್ಯಾಯಾಲಯಕ್ಕೆ ಅಫಿದಾವಿತ್ ಸಲ್ಲಿಸಿತ್ತು.
ರಾಷ್ಟ್ರಪತಿಗೆ ರಾಜ್ಯಪಾಲ ಕೆ.ಕೆ. ಪೌಲ್ ಸಲ್ಲಿಸಿದ ವರದಿ ಸಹಿತ ಒಟ್ಟು 8 ವರದಿಗಳನ್ನು ಕೇಂದ್ರ ಸರಕಾರ ನ್ಯಾಯಾಲಯಕ್ಕೆ ಸಲ್ಲಿಸಿದೆ. ವಿಧಾನಸಭೆಯಲ್ಲಿ ಬಜೆಟ್ ಮಂಜೂರಾಗಲೇ ಇಲ್ಲ. ಸ್ಪೀಕರ್ ಗೋವಿಂದ ಕುಂಜ್ವಾಲ್, ವಿಫಲಗೊಂಡ ಆರ್ಥಿಕ ಮಸೂದೆಯೊಂದನ್ನು ಮಂಜೂರಾಗಿದೆಯೆಂದು ಘೋಷಿಸುವ ಮೂಲಕ ತನ್ನ ಅಧಿಕಾರವನ್ನು ದುರುಪಯೋಗಪಡಿಸಿದ್ದಾರೆ. ಸದಸ್ಯರು ಮಸೂದೆಯ ಮೇಲೆ ಮತದಾನಕ್ಕೆ ಆಗ್ರಹಿಸಿದ್ದರೂ ಅವರು ಅವಕಾಶ ನೀಡಲಿಲ್ಲವೆಂದು ಅದು ನ್ಯಾಯಾಲಯದಲ್ಲಿ ವಾದಿಸಿದೆ.
70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಯಲ್ಲಿ ಅಲ್ಪ ಬಹುಮತ ಹೊಂದಿದ್ದ ಕಾಂಗ್ರೆಸ್‌ನಲ್ಲಿ ಬಂಡಾಯದ ಬಳಿಕ ಈ ಬಿಕ್ಕಟ್ಟು ಆರಂಭವಾಯಿತು. 10 ಮಂದಿ ಬಂಡುಕೋರ ಶಾಸಕರು ಕಾಂಗ್ರೆಸ್‌ನಿಂದ ಸಿಡಿದರು. ಮುಖ್ಯಮಂತ್ರಿ ಹರೀಶ್ ರಾವತ್‌ರಿಗೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚಿಸಿದ್ದರು. ಅದಕ್ಕೆ ಒಂದು ದಿನ ಮೊದಲು ಮಾ.27ರಂದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಯಿತು.





