ಕೊಹಿನೂರು ವಜ್ರ ಬ್ರಿಟನ್‌ನಲ್ಲೇ ಇರಲಿ

ಬ್ರಿಟಿಷರು ಕೊಹಿನೂರು ಕದ್ದಿಲ್ಲ: ಸುಪ್ರೀಂಗೆ ಕೇಂದ್ರದ ಹೇಳಿಕೆ
ಹೊಸದಿಲ್ಲಿ, ಎ.18: ಪ್ರಸಿದ್ಧ ಕೊಹಿನೂರು ವಜ್ರವನ್ನು ಕದಿಯಲಾಗಿಲ್ಲ ಅಥವಾ ಬಲಾತ್ಕಾರದಿಂದ ಒಯ್ದದ್ದೂ ಅಲ್ಲ. ಆದುದರಿಂದ ಭಾರತವು ಅದನ್ನು ಹಿಂದೆ ಪಡೆಯಲು ಪ್ರಯತ್ನಿಸಬಾರದೆಂದು ಸರಕಾರವಿಂದು ಹೇಳಿದೆ. ಈ ನಿಲುವು, 105 ಕ್ಯಾರೆಟ್ ವಜ್ರದ ಬಗ್ಗೆ ಭವಿಷ್ಯದಲ್ಲಿ ಯಾವುದೇ ಕಾನೂನುಬದ್ಧ ಹಕ್ಕು ಸ್ಥಾಪನೆಗೆ ಸಮಸ್ಯೆಯುಂಟು ಮಾಡಬಹುದೆಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ.
ಬ್ರಿಟನ್ ಕೊಹಿನೂರು ವಜ್ರ ಹಾಗೂ ಟಿಪ್ಪುಸುಲ್ತಾನನ ಉಂಗುರ ಮತ್ತು ಖಡ್ಗ ಸೇರಿದಂತೆ ಇತರ ಪ್ರಸಿದ್ಧ ಪ್ರಾಚ್ಯ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಬೇಕೆಂದು ಕೋರಿ ಅಖಿಲ ಭಾರತ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯರಂಗವೆಂಬ ಸಂಘಟನೆಯು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
‘ಬೆಳಕಿನ ಪರ್ವತ’ ಎಂಬ ಅರ್ಥವಿರುವ ಕೊಹಿನೂರು ವಜ್ರವನ್ನು 1850ರಲ್ಲಿ ವಿಕ್ಟೋರಿಯಾ ರಾಣಿಗೆ ಉಡುಗೊರೆ ನೀಡಲಾಗಿತ್ತು. ಪಂಜಾಬ್‌ನ ಮಹಾರಾಜ ರಣಜಿತ್ ಸಿಂಗ್ ಅದನ್ನು ಈಸ್ಟ್ ಇಂಡಿಯಾ ಕಂಪೆನಿಗೆ ಹಸ್ತಾಂತರಿಸಿದ್ದ ಕಾರಣ, ಅದನ್ನು ಮರಳಿ ಕೇಳುವ ಪ್ರಮೇಯವೇ ಇಲ್ಲವೆಂದು ಸರಕಾರ ಹೇಳುತ್ತಿದೆ. ಆದರೆ, ಈ ಪ್ರಕರಣದ ಕಕ್ಷಿದಾರನೂ ಆಗಿರುವ ವಿದೇಶಾಂಗ ಸಚಿವಾಲಯವು ತನ್ನ ನಿಲುವನ್ನು ಇನ್ನಷ್ಟೇ ತಿಳಿಸಬೇಕಿದೆ. ಆರು ವಾರಗಳೊಳಗೆ ಸಮಗ್ರ ಉತ್ತರವೊಂದನ್ನು ನೀಡುವಂತೆ ನ್ಯಾಯಮೂರ್ತಿಗಳು ಕೇಂದ್ರ ಸರಕಾರಕ್ಕೆ ಸೂಚಿಸಿದ್ದಾರೆ.
ಟವರ್ ಆಫ್ ಲಂಡನ್‌ನಲ್ಲಿ ಪ್ರದರ್ಶನಕ್ಕಿಟ್ಟಿರುವ ಕಿರೀಟವೊಂದರಲ್ಲಿ ಕೊಹಿನೂರ್ ವಜ್ರವನ್ನು ಅಳವಡಿಸಲಾಗಿದೆ. 2013ರಲ್ಲಿ ಭಾರತಕ್ಕೆ ಬಂದಿದ್ದ ವೇಳೆ, ಬ್ರಿಟನ್‌ನ ಪ್ರಧಾನಿ ಡೇವಿಡ್ ಕ್ಯಾಮರೂನ್ ವಜ್ರವನ್ನು ಭಾರತಕ್ಕೆ ಹಿಂದಿರುಗಿಸುವುದಿಲ್ಲ. ತನಗೆ ಹಿಂದಿರುಗಿಸುವಿಕೆ ಸಿದ್ಧಾಂತದಲ್ಲಿ ನಂಬಿಕೆಯಿಲ್ಲವೆಂದು ಹೇಳಿದ್ದರು.







