ಆರಂಭಗೊಂಡ ಎಸೆಸೆಲ್ಸಿ ಮೌಲ್ಯಮಾಪನ: ಗೊಂದಲಕ್ಕೆ ತೆರೆ

ಬೆಂಗಳೂರು, ಎ.18: ಎಸೆಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಸೋಮವಾರ ಆರಂಭವಾಗಿದೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ವಿದ್ಯಾರ್ಥಿ, ಪೋಷಕರಲ್ಲಿ ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ.
ಪಿಯುಸಿ ಉಪನ್ಯಾಸಕರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಮೌಲ್ಯಮಾಪನ ಕಾರ್ಯದಿಂದ ಒಂದು ವರ್ಗದ ಶಿಕ್ಷಕರು ದೂರ ಉಳಿದಿದ್ದಾರೆ. ಇನ್ನು ಉಳಿದ ಶಿಕ್ಷಕರು ರಾಜ್ಯದ ವಿವಿಧ ಕೇಂದ್ರಗಳಲ್ಲಿ ಎಸೆಸ್ಸೆಲ್ಸಿ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
ರಾಜ್ಯದ 235 ಕೇಂದ್ರಗಳಲ್ಲಿ ಮೌಲ್ಯ ಮಾಪನ ಆರಂಭಗೊಳ್ಳಬೇಕಿತ್ತು. ಆದರೆ ಶೇ.50ರಷ್ಟು ಕೇಂದ್ರಗಳಲ್ಲಿ ಶಿಕ್ಷಕರು ಹಾಜರಾಗದ ಹಿನ್ನೆಲೆಯಲ್ಲಿ ಕೆಲ ಕೇಂದ್ರ ಗಳಲ್ಲಿ ವೌಲ್ಯ ಮಾಪನ ಪ್ರಕ್ರಿಯೆ ವಿಳಂ ಬವಾಗುವ ಭೀತಿ ಎದುರಾಗಿದೆ. ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಕೋಡಿಂಗ್ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು ವೌಲ್ಯ ಮಾಪನ ಭರದಿಂದ ಸಾಗಿದೆ.
ಕೆಲವೆಡೆ ಮುಂದುವರಿದ ಗೊಂದಲ: ಹಲವೆಡೆ ಶಿಕ್ಷಕರು ವೌಲ್ಯಮಾಪನ ಬಹಿಷ್ಕರಿಸಿರುವ ಹಿನ್ನೆಲೆಯಲ್ಲಿ ಮೌಲ್ಯಮಾಪನ ಆರಂಭವಾಗಿದ್ದರೂ, ವಿದ್ಯಾರ್ಥಿಗಳಲ್ಲಿ ಗೊಂದಲಗಳು ಮುಂದುವರಿದಿವೆ. ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಸೇರಿದಂತೆ ಹಲವೆಡೆ ಮೌಲ್ಯಮಾಪನವನ್ನು ಬಹಿಷ್ಕರಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ ಎಂದು ವರದಿಯಾಗಿದೆ. ಬೆದರಿಕೆ ಮೂಲಕ ವೌಲ್ಯಮಾಪನ: ವೌಲ್ಯಮಾಪನದಲ್ಲಿ ಹಾಜರಾಗದ ಶಿಕ್ಷಕರಿಗೆ ಎಸ್ಮಾ ಜಾರಿ, ಇನ್‌ಕ್ರಿಮೆಂಟ್ ಕಡಿತ ಮಾಡಲಾಗುವುದು ಎಂದು ಬೆದರಿಕೆಯೊಡ್ಡಲಾಗಿದೆ. ಹೀಗಾಗಿ ಕೆಲ ಶಿಕ್ಷಕರು ವೌಲ್ಯಮಾಪನದಲ್ಲಿ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ಇದೇ ಮೊದಲ ಬಾರಿಗೆ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಮೌಲ್ಯಮಾಪನ ನಡೆಸಲಾಗುತ್ತಿದೆ.
ಉತ್ತರ ಕರ್ನಾಟಕದ ಬೆಳಗಾವಿ, ರಾಯಚೂರು, ಕೊಪ್ಪಳ ಭಾಗಗಳ ಶಿಕ್ಷಕರು ಮೌಲ್ಯಮಾಪನದಲ್ಲಿ ತೊಡಗಿಕೊಂಡಿರುವ ಶಿಕ್ಷಕರು ತಮ್ಮ ಸ್ವ ಇಚ್ಛೆಯಿಂದ ಮೌಲ್ಯಮಾಪನ ನಡೆಸುತ್ತಿಲ್ಲ. ಶಿಕ್ಷಕರನ್ನು ಬೆದರಿಸಿ ಮೌಲ್ಯಮಾಪನ ಮಾಡಿಸಲಾಗುತ್ತಿದೆ ಎಂದು ಹೇಳಲಾಗಿದೆ. ಒಂದು ವರ್ಗದ ಶಿಕ್ಷಕರು ಮೌಲ್ಯಮಾಪನ ಬಹಿಷ್ಕರಿಸಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.







