ಮುಸ್ಲಿಮರ ಮತದ ಮೇಲೆ ಪ್ರಧಾನಿಯ ದೂರದೃಷ್ಟಿ....

ಮಾನ್ಯರೆ,
ಅಸ್ಸಾಂ ರಾಜ್ಯದ ತಿನ್ಸುಕಿಯಾ ಎಂಬಲ್ಲಿ ಒಂದು ವಾರದ ಹಿಂದೆ ನಡೆದ ಕೊಲೆ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿದ್ದ ವ್ಯಕ್ತಿಗಳನ್ನು ತಮಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ಪೊಲೀಸ್ ಠಾಣೆಯ ಮುಂದೆ ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ನಡೆಸುತ್ತಿದ್ದರು. ಮೊನ್ನೆ ಜನರ ಆಕ್ರೋಶ ಮಿತಿಮೀರಿದಾಗ ಜನರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಹಾರಿಸಿದ ಗುಂಡು ಹೈಟೆನ್ಷನ್ ತಂತಿಗೆ ತಾಗಿ ತಂತಿ ತುಂಡಾಗಿ ಪ್ರತಿಭಟನಾಕಾರರ ಮೇಲೆ ಬಿದ್ದು ವಿದ್ಯುದಾಘಾತದಿಂದ 11 ಮಂದಿ ಮೃತಪಟ್ಟಿದ್ದಾರೆ ಹಾಗೂ ನೂರಾರು ಜನರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ತಿನ್ಸುಕಿಯಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಅರೆಸೇನಾಪಡೆ ಸಿಬ್ಬಂದಿ ಈಅವಿಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ ಆಶ್ಚರ್ಯವೆಂದರೆ ಕೇರಳದ ಕೊಲ್ಲಂನಲ್ಲಿಯ ಪಟಾಕಿ ಅವಘಡಕ್ಕೆ ಸ್ಪಂದಿಸಿ ಪ್ರಧಾನ ಮಂತ್ರಿ ಮೋದಿಯವರು ವೈದ್ಯರ ತಂಡದೊಂದಿಗೆ ಕೊಲ್ಲಂಗೆ ಓಡಿದಂತೆ ಅಸ್ಸಾಮಿನ ತೀನ್ಸುಕಿಯಾಕ್ಕೆ ವೈದ್ಯರ ತಂಡದೊಂದಿಗೆ ಯಾಕೆ ಹೋಗಲಿಲ್ಲ ಗೊತ್ತೇ? ಯಾಕೆಂದರೆ ಅಸ್ಸಾಮಿನಲ್ಲಿ ಅಲ್ಲಿಯ ವಿಧಾನ ಸಭಾ ಚುನಾವಣೆಯ ಮತದಾನ ಮುಗಿದಿದೆ. ಆದರೆ ಕೇರಳದಲ್ಲಿ ಮುಂದಿನ ಮೇ 16ಕ್ಕೆ ಮತದಾನ ಆಗಲಿದೆ. ಅದಕ್ಕಾಗಿ ಕೇರಳದ ಪಟಾಕಿ ಅವಘಡದ ಬಗ್ಗೆ ಮೋದಿಗೆ ಅಷ್ಟೊಂದು (ನಕಲಿ)ಕಾಳಜಿ. ಇಷ್ಟೊಂದು ಭಾರೀ ಪ್ರಮಾಣದಲ್ಲಿ ಸ್ಫೋಟಕಗಳನ್ನು ಮಸೀದಿ ಅಥವಾ ಚರ್ಚ್‌ನಲ್ಲಿ ಜಾತ್ರೆಗಾಗಿ ಸಂಗ್ರಹಿಸಿ ಇಟ್ಟಿದ್ದರೆ ಅದು ಉಗ್ರವಾದಿಗಳು ದುಷ್ಕೃತ್ಯಕ್ಕಾಗಿ ಸಂಗ್ರಹಿಸಿದ್ದು ಎಂದು ಕೇಸರಿ ಪಡೆಗಳು ಗಲಾಟೆ ಮಾಡುತ್ತಿದ್ದುದು ಖಂಡಿತ.
ಈಗಿನ ನಾಲ್ಕು ರಾಜ್ಯಗಳ ಚುನಾವಣೆಗೆ ಮುಂಚೆ ಮೋದಿ ಸೌದಿ ಅರೇಬಿಯಾಕ್ಕೆ ಯಾಕೆ ಧಾವಿಸಿ ಹೋಗಿದ್ದು ಹಾಗೂ ಸೂಫಿ ಫೋರಂನವರ ಆಹ್ವಾನ ಸ್ವೀಕರಿಸಿ ಮುಸ್ಲಿಮರನ್ನು ಹಾಡಿ-ಹೊಗಳಿದ್ದು ಯಾಕೆ ಗೊತ್ತೇ? ಅದೆಲ್ಲಾ ಮಾಡಿದ್ದು ಅಸ್ಸಾಂ, ಪ.ಬಂಗಾಳ ಮತ್ತು ಕೇರಳ ರಾಜ್ಯ ಗಳಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಮುಸ್ಲಿಂ ಮತದಾರರ ಮೇಲೆ ಮನೋ ವೈಜ್ಞಾನಿಕ ಪರಿಣಾಮ ಬೀರಲೋಸುಗ-ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿದೆ. ಎಷ್ಟೇ ಆಗಲಿ ಮೋದಿ ಚಿಕ್ಕಂದಿನಲ್ಲಿ ಚಹಾ ಮಾರಿದ್ದಕ್ಕಿಂತ ಗುಜರಾತಿ ನಾಟಕಗಳಲ್ಲಿ ಅಭಿನಯಿಸಿದ್ದೇ ಹೆಚ್ಚು. ಹಾಗಾಗಿ ಈಗ ಪ್ರಧಾನ ಮಂತ್ರಿ ಆದ ಮೇಲೂ ನಟನೆ ಬಿಟ್ಟಿಲ್ಲ. ಆದರೂ ಮುಸ್ಲಿಮರ ಮತಕ್ಕಾಗಿ ಅವರ ದೂರದೃಷ್ಟಿಯ ನಟನೆಯನ್ನು ಶ್ಲಾಘಿಸಲೇಬೇಕು.







